Site icon Vistara News

Match Fixing : ಶ್ರೀಲಂಕಾದ ಮಾಜಿ ಕ್ರಿಕೆಟಿಗನಿಗೆ ಪ್ರಯಾಣ ನಿಷೇಧ

Sachithra Senanayake

ಕೊಲೊಂಬೊ: ಮ್ಯಾಚ್ ಫಿಕ್ಸಿಂಗ್ (Match Fixing) ಆರೋಪ ಎದುರಿಸುತ್ತಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸಚಿತ್ರಾ ಸೇನಾನಾಯಕೆ ಅವರಿಗೆ ಕೊಲಂಬೊದ ಸ್ಥಳೀಯ ನ್ಯಾಯಾಲಯ ಸೋಮವಾರ ಪ್ರಯಾಣ ನಿಷೇಧ ಹೇರಿದೆ. ಹೀಗಾಗಿ ಅವರು ದೇಶ ಬಿಟ್ಟು ಹೊರಗೆ ಹೋಗಲು ಸಾಧ್ಯವಿಲ್ಲ. ಒಂದು ಟೆಸ್ಟ್, 49 ಏಕದಿನ ಮತ್ತು 24 ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿರುವ ಸೇನಾನಾಯಕೆ, ಲಂಕಾ ಪ್ರೀಮಿಯರ್ ಲೀಗ್​ನ 2020ರ ಆವೃತ್ತಿಯಲ್ಲಿ ಪಂದ್ಯಗಳನ್ನು ಫಿಕ್ಸಿಂಗ್ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.

ಬಲಗೈ ಆಫ್-ಸ್ಪಿನ್ನರ್ ಇಬ್ಬರು ಆಟಗಾರರಿಗೆ ದೂರವಾಣಿ ಸಂಪರ್ಕ ಸಾಧಿಸಿ ಪಂದ್ಯಗಳನ್ನು ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಲು ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಸೇನಾ ನಾಯಕೆ ಅವರಿಗೆ ಪ್ರಯಾಣ ನಿಷೇಧ ಹೇರುವಂತೆ ಕೊಲಂಬೊ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಲಸೆ ಮತ್ತು ವಲಸೆ ನಿಯಂತ್ರಕ ಜನರಲ್ ಅವರಿಗೆ ಆದೇಶಿಸಿದೆ. ಇದು ಮೂರು ತಿಂಗಳ ಅವಧಿಗೆ ಜಾರಿಗೆ ಬರಲಿದೆ ಎಂದು ಪಿಟಿಐ ವರದಿ ಮಾಡಿದೆ.

ನ್ಯಾಯಾಲಯದ ಆದೇಶವನ್ನು ಅಟಾರ್ನಿ ಜನರಲ್ ಇಲಾಖೆ ಪಡೆದುಕೊಂಡಿದೆ. ಮಾಜಿ ಆಫ್ ಸ್ಪಿನ್ನರ್ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ದಾಖಲಿಸುವಂತೆ ಕ್ರೀಡಾ ಸಚಿವಾಲಯದ ವಿಶೇಷ ತನಿಖಾ ಘಟಕವು ಅಟಾರ್ನಿ ಜನರಲ್ ಇಲಾಖೆಗೆ ಸೂಚನೆ ನೀಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಶ್ರೀಲಂಕಾ ಪರ ಸಚಿತ್ರಾ ಸೇನಾನಾಯಕೆ 53 ಏಕದಿನ ಹಾಗೂ 25 ಟಿ20 ವಿಕೆಟ್​ಗಳನ್ನು ಕಬಳಿಸಿದ್ದಾರೆ. 2013ರಲ್ಲಿ ಅಬುಧಾಬಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. 2014 ರಲ್ಲಿ ಶ್ರೀಲಂಕಾದ ಟಿ 20 ವಿಶ್ವಕಪ್ ಗೆಲುವಿನ ಭಾಗವಾಗಿದ್ದ 38 ವರ್ಷದ ಸಚಿತ್ರಾ 2020 ರ ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದರು.

Exit mobile version