ಬೆಂಗಳೂರು: 14ನೇ ಆವೃತ್ತಿಯ ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ(SAFF Championship) ದಾಖಲೆಯ 13ನೇ ಬಾರಿ ಫೈನಲ್ ಪ್ರವೇಶಿಸಿದ 8 ಬಾರಿಯ ಚಾಂಪಿಯನ್, ಭಾರತ ತಂಡ ಮಂಗಳವಾರ ನಡೆಯುವ ಪ್ರಶಸ್ತಿ ಸುತ್ತಿನಲ್ಲಿ ಬಲಿಷ್ಠ ಕುವೈತ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.
ಶನಿವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಲೆಬನಾನ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಗೆದ್ದು ಫೈನಲ್ ಪ್ರವೇಶ ಪಡೆದಿತ್ತು. ಎದುರಾಳಿ ಕುವೈತ್ ತಂಡ ಬಾಂಗ್ಲಾವನ್ನು ಮಣಿಸಿ ಫೈನಲ್ಗೆ ಲಗ್ಗೆಯಿಟ್ಟಿತ್ತು. ಇದೀಗ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಲೀಗ್ನಲ್ಲಿ ಉಭಯ ತಂಡಗಳ ಮುಖಾಮುಖಿ ಡ್ರಾದಲ್ಲಿ ಅಂತ್ಯಕಂಡಿತ್ತು. ಹೀಗಾಗಿ ಫೈನಲ್ ಪಂದ್ಯವೂ ರೋಚಕವಾಗಿ ಸಾಗುವ ನಿರೀಕ್ಷೆಯೊಂದನ್ನು ಮಾಡಬಹುದಾಗಿದೆ.
ಸ್ಯಾಫ್ ಕಪ್ ಟೂರ್ನಿಯಲ್ಲಿ ಭಾರತ ಎಂಟು ಸಲ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಾಲ್ಕು ಸಲ ರನ್ನರ್ಸ್ ಅಪ್ ಆಗಿದೆ. 2003 ರಲ್ಲಿ ಢಾಕಾದಲ್ಲಿ ನಡೆದಿದ್ದ ಟೂರ್ನಿಯನ್ನು ಹೊರತುಪಡಿಸಿ ಉಳಿದ ಎಲ್ಲ ಕೂಟಗಳಲ್ಲಿಯೂ ಭಾರತ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಈ ಬಾರಿಯೂ ಭಾರತ ತಂಡ ಕಪ್ ಗೆಲ್ಲುವು ವಿಶ್ವಾಸದಲ್ಲಿದೆ.
‘ಎ’ ಗುಂಪಿನಲ್ಲಿದ್ದ ಭಾರತ ಉದ್ಘಾಟನ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ 4-0 ಅಂತರದ ಗೆಲುವು ಸಾಧಿಸಿತ್ತು. ಬಳಿಕ ನೇಪಾಳ ವಿರುದ್ಧ ಜಯ ಕಂಡಿತ್ತು. ಕುವೈತ್ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಸೆಮಿ ಫೈನಲ್ನಲ್ಲಿ ಲೆಬನಾನ್ ವಿರುದ್ಧ ಗೆಲುವು ಸಾಧಿಸಿ ಫೈನಲ್ಗೆ ನೆಗೆದಿತ್ತು. ಟೂರ್ನಿಯಲ್ಲಿ ಅಜೇಯವಾಗಿ ಭಾರತ ಈ ಸಾಧನೆ ಮಾಡಿದೆ.
ಇದನ್ನೂ ಓದಿ Sunil Chhetri: ನಿವೃತ್ತಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಸುನೀಲ್ ಚೆಟ್ರಿ
ಅದ್ಭುತ ಫಾರ್ಮ್ನಲ್ಲಿರುವ ಸುನೀಲ್ ಚೆಟ್ರಿ
ಭಾರತ ತಂಡದ ನಾಯಕ ಸುನೀಲ್ ಚೆಟ್ರಿ(sunil chhetri) ಅವರು ಅದ್ಭುತ ಫಾರ್ಮ್ನಲ್ಲಿದ್ದಾರೆ. ಇದರಿಂದ ತಂಡ ಹೆಚ್ಚಿನ ಆತ್ಮವಿಶ್ವಾಸದಿಂದ ಕಣಕ್ಕಿಳಿಯುವ ನಿರೀಕ್ಷೆ ಇದೆ. ಅವರು ಪಂದ್ಯದ ಪ್ರಮುಖ ಆಕರ್ಷಣೆಯೂ ಕೂಡ ಆಗಿದ್ದಾರೆ. ಕಾರಣ ಪಾಕ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲ್ ಬಳಿಕ ನೇಪಾಳ ವಿರುದ್ಧವು ಗೋಲ್ ಬಾರಿಸಿ ಮಿಂಚಿದ್ದರು. ಈ ಎರಡೂ ಪಂದ್ಯಗಳಲ್ಲಿಯೂ ಅವರು ಮೊದಲ ಗೋಲ್ ಬಾರಿಸುವ ಮೂಲಕ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದ್ದರು. ಸೆಮಿ ಪಂದ್ಯದಲ್ಲಿಯೂ ಶೂಟೌಟ್ ಮೂಲಕ ಗೋಲು ಬಾರಿಸಿದ್ದರು. ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಸದ್ಯ 92ಗೋಲು ಬಾರಿಸಿ ಈ ಸಾಧನೆ ಮಾಡಿದ ಏಷ್ಯಾದ ಎರಡನೇ ಫುಟ್ಬಾಲ್ ಆಟಗಾರ ಎನಿಸಿಕೊಂಡಿರುವ ಚೆಟ್ರಿ ಫೈನಲ್ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವತ್ತ ಚಿತ್ತ ನೆಟ್ಟಿದ್ದಾರೆ.