Site icon Vistara News

SAFF Football: ಪಾಕ್​ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; ಟೂರ್ನಿಯಲ್ಲಿ ಶುಭಾರಂಭ

SAFF2023

ಬೆಂಗಳೂರು: ಮಳೆಯನ್ನು ಲೆಕ್ಕಿಸದೆ ನಾಯಕ ಸುನೀಲ್​ ಚೆಟ್ರಿ(Sunil Chhetri) ಅವರು ಬಾರಿಸಿದ ಹ್ಯಾಟ್ರಿಕ್​ ಗೋಲಿನ ನೆರವಿನಿಂದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ(Pakistan football team) ವಿರುದ್ಧ ಸ್ಯಾಫ್ ಫುಟ್​ಬಾಲ್​​ ಚಾಂಪಿಯನ್​ಶಿಪ್​ ಟೂರ್ನಿಯಲ್ಲಿ(SAFF Football) 4-0 ಗೋಲ್​ಗಳ ಅಂತರದಿಂದ ಭರ್ಜರಿಯಾಗಿ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಕಂಡಿದೆ.

ಬುಧವಾರ ಕಂಠೀರವ ಕ್ರೀಡಾಂಗಣದಲ್ಲಿ(Sree Kanteerava Stadium) ನಡೆದ ದ್ವಿತೀಯ ಪಂದ್ಯದಲ್ಲಿ ಭಾರತ ತಂಡ ಪಾಕ್​ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ದಿನ ಮೊದಲ ಉದ್ಘಾಟನಾ ಪಂದ್ಯದಲ್ಲಿ ಕುವೈತ್‌ 3-1 ಗೋಲುಗಳಿಂದ ನೇಪಾಳ ತಂಡವನ್ನು ಮಣಿಸಿತು.

ಭಾರತ ಮತ್ತು ಪಾಕ್​ ತಂಡಗಳು 5 ವರ್ಷಗಳ ಬಳಿಕ ಮುಖಾಮುಖಿಯಾಗಿದ್ದವು. ಪಂದ್ಯ ಆರಂಭವಾಗುತ್ತಿದ್ದಂತೆಯೇ ತುಂತುರು ಮಳೆಯೂ ಶುರುವಾಯಿತು. ಮಳೆಯ ಅಬ್ಬರದ ಮಧ್ಯೆಯೂ ಪಂದ್ಯ ಆರಂಭಗೊಂಡು 10 ನಿಮಿಷದಲ್ಲಿ ಭಾರತ ಗೋಲಿನ ಖಾತೆ ತೆರೆಯಿತು. ಈ ಗೋಲನ್ನು ಚೆಟ್ರಿ ಬಾರಿಸಿದರು. ಇದರ ಬೆನ್ನಲೇ 14 ಮತ್ತು 74ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ಅವರು ಹ್ಯಾಟ್ರಿಕ್​ ಗೋಲ್​ ಬಾರಿಸಿದ ಸಾಧನೆ ಮಾಡಿದರು. ಅಂತಿಮ ಗೋಲನ್ನು ಉದಾಂತ ಸಿಂಗ್ (81ನೇ ನಿಮಿಷ) ತಂದಿತ್ತರು. ಭಾರತ ಆಕ್ರಮಣಕಾರಿ ಆಟದ ಮುಂದೆ ಪಾಕ್‌ಗೆ ಕನಿಷ್ಠ ಒಂದು ಗೋಲ್​ ಕೂಡ ಬಾರಿಸಲು ಸಾಧ್ಯವಾಗಲಿಲ್ಲ. ನಿಖರ ಪಾಸ್‌ಗಳು ಮತ್ತು ರಕ್ಷಣಾ ವಿಭಾಗದಲ್ಲಿನ ಛಲದ ಆಟ ಭಾರತ ತಂಡದ ಪ್ರಮುಖ ಆಕರ್ಷಣೆಯಾಗಿತ್ತು.

ಇದನ್ನೂ ಓದಿ SAFF Football: 5 ವರ್ಷಗಳ ಬಳಿಕ ಭಾರತ-ಪಾಕ್​ ಕಾಲ್ಚೆಂಡಿನ ಕಾಳಗಕ್ಕೆ ವೇದಿಕೆ ಸಜ್ಜು

ಮೂರು ಗೋಲ್​ ಬಾರಿಸಿದ ಚೆಟ್ರಿ ಅವರು ತಮ್ಮ ಅಂತಾರಾಷ್ಟ್ರೀಯ ಪಂದ್ಯಗಳ ಗೋಲ್​ಗಳ ಸಂಖ್ಯೆಯನ್ನು 90ಕ್ಕೆ ಹೆಚ್ಚಿಸಿಕೊಂಡರು. ಇರಾನ್‌ನ ಅಲಿ ದಾಯಿ (109 ಗೋಲು) ಬಳಿಕ ಅತಿಹೆಚ್ಚು ಗೋಲುಗಳನ್ನು ಗಳಿಸಿದ ಏಷ್ಯಾದ ಎರಡನೇ ಆಟಗಾರ ಎನಿಸಿಕೊಂಡರು. ಐದು ವರ್ಷಗಳ ಬಳಿಕ ಭಾರತ ಮತ್ತು ಪಾಕ್​ ತಂಡಗಳು ಇದೇ ಮೊದಲ ಬಾರಿ ಎದುರಾಗಿತ್ತು. ಅಂದು ನಡೆದಿದ್ದ ಸ್ಯಾಫ್‌ ಟೂರ್ನಿಯ ಪಂದ್ಯವನ್ನು ಭಾರತ 3-1 ರಿಂದ ಜಯಿಸಿತ್ತು. ಭಾರತ ಮುಂದಿನ ಪಂದ್ಯದಲ್ಲಿ ನೇಪಾಳದ ಸವಾಲು ಎದುರಿಸಲಿದೆ. ಈ ಪಂದ್ಯ ಜೂನ್​ 24ರಂದು ನಡೆಯಲಿದೆ.

Exit mobile version