Site icon Vistara News

SAFF Football: ಭಾರತ-ಪಾಕ್​ ಫುಟ್ಬಾಲ್ ಪಂದ್ಯದಲ್ಲಿ ಕಿತ್ತಾಡಿದ ಆಟಗಾರರು; ವಿಡಿಯೊ ವೈರಲ್​

SAFF Championship

ಬೆಂಗಳೂರು: ಬುಧವಾರ ರಾತ್ರಿ ನಡೆದ ಸ್ಯಾಫ್‌ ಕಪ್‌ ಫುಟ್ಬಾಲ್‌ ಚಾಂಪಿ​ಯ​ನ್‌​ಶಿ​ಪ್‌(SAFF Football) ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ(INDvsPAK) ವಿರುದ್ಧ 4-0 ಅಂತರದಿಂದ ಗೆದ್ದು ಬೀಗಿತು. ಆದರೆ ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಮತ್ತು ಸಿಬ್ಬಂದಿಗಳ ನಡುವೆ ನಡೆದ ವಾಗ್ವಾದ, ಜಗಳ, ನೂಕಾಟದ ದೃಶ್ಯಗಳು ಇದೀಗ ಭಾರಿ ಸುದ್ದಿಯಾಗಿದೆ.

ಕ್ರಿಕೆಟ್​ ಪಂದ್ಯದಂತೆ ಹೈವೋಲ್ಟೇಜ್​ನಿಂದ ಕೂಡಿದ ಈ ಪಂದ್ಯ ಕ್ಷಣಕ್ಷಣಕ್ಕೂ ರೋಚಕತೆ ಸೃಷ್ಟಿಸಿತ್ತು. ಪಂದ್ಯ ಆರಂಭಗೊಂಡ 10 ನಿಮಿಷದಲ್ಲಿ ಭಾರತ ಗೋಲು ದಾಖಲಿಸಿ ಮುನ್ನಡೆ ಸಾಧಿಸಿತು. ಜಿದ್ದಾಜಿದ್ದಿನಿಂದ ಸಾಗುತ್ತಿದ್ದ ಈ ಪಂದ್ಯದ 44ನೇ ನಿಮಿಷದಲ್ಲಿ ಗೋಲು ಬಾರಿಸುವ ಧಾವಂತದಲ್ಲಿ ಭಾರತ ಹಾಗೂ ಪಾಕ್​ ಆಟಗಾರರು ಚೆಂಡು ನಿಯಂತ್ರಿಸಲು ಯತ್ನಿಸಿದರು. ಈ ವೇಳೆ ಚೆಂಡು ಕೋರ್ಟ್‌ನಿಂದ ಹೊರಬಿದ್ದಿತ್ತು. ಭಾರತೀಯ ಆಟಗಾರನ ತಪ್ಪಿನಿಂದ ಚೆಂಡು ಹೋರಹೋದ ಕಾರಣ ಪಾಕಿಸ್ತಾನದ ಅಬ್ದುಲ್ಲಾ ಇಕ್ಬಾಲ್ ಥ್ರೋ ಇನ್ ಮಾಡಲು ಮುಂದಾಗಿದ್ದಾರೆ. ಆದರೆ ಅಂಪೈರ್ ನಿರ್ಧಾರಕ್ಕೂ ಮುನ್ನವೇ ಅಬ್ದುಲ್ಲಾ ಥ್ರೋ ಇನ್ ಮಾಡಲು ಚೆಂಡು ಕೈಗೆತ್ತಿಕೊಂಡರು. ಇದೇ ವೇಳೆ ಹಿಂಭಾಗದಲ್ಲಿದ್ದ ಭಾರತ ತಂಡದ ಮ್ಯಾನೇಜರ್ ಸ್ಟಿಮ್ಯಾಕ್‌(Igor Stimac) ಅವರು ಸಿಟ್ಟಿನಿಂದ ಪಾಕ್ ಆಟಗಾರ ಕೈಯಲ್ಲಿದ್ದ ಚೆಂಡನ್ನು ತಲ್ಲಿದ್ದಾರೆ.

ಇದು ಪಾಕಿಸ್ತಾನ ತಂಡದ ಕೋಚ್ ಮತ್ತು ಆಟಗಾರರಿಗೆ ಕೆರಳಿಸುವಂತೆ ಮಾಡಿತು. ಸಿಟ್ಟಿನಿಂದ ನೇರವಾಗಿ ಮೈದಾನಕ್ಕೆ ನುಗ್ಗಿದ ಪಾಕ್​ ತಂಡ ಕೋಚ್​ ಅಂಪೈರ್​ ಜತೆ ಜಗಳ ಆರಂಭಿಸಿದ್ದಾರೆ. ಇದೇ ವೇಳೆ ಉಭಯ ತಂಡಗಳ ಆಟಗಾರರು ಕೂಡ ಗುಂಪು ಸೇರಿ ತಳ್ಳಾಟ, ವಾಗ್ವಾದ ನಡೆಸಿದ್ದಾರೆ. ಕೆಲ ಆಟಗಾರರು ಗಲಾಟೆಯನ್ನು ತಣ್ಣಗಾಗಿಸಲು ಪ್ರಯತ್ನಿಸಿದರು. ಒಂದು ಹಂತದಲ್ಲಿ ಈ ಘಟನೆ ಕೈ ಮಿಲಾಯಿಸುವ ಹಂತದವರೆಗೆ ಸಾಗಿತು. ಆದರೆ ಅಂಪೈರ್​ಗಳು ಈ ಗಲಾಟೆಯನ್ನು ನಿಯಂತ್ರಿಸುವಲ್ಲಿ ಕೊನೆಗೂ ಯಶಸ್ವಿಯಾದರು. ಆಟಕ್ಕೆ ಅಡ್ಡಿ ಪಡಿಸಿದ ಭಾರತ ತಂಡದ ಮ್ಯಾನೇಜರ್‌ಗೆ ರೆಫ್ರಿ ರೆಡ್ ಕಾರ್ಡ್ ನೀಡಿ ಹೊರಗೆ ಕಳುಹಿಸಿದ್ದಾರೆ. ಪಾಕಿಸ್ತಾನ ತಂಡದ ಮ್ಯಾನೇಜರ್ ಶೆಹಜಾದ್ ಅನ್ವರ್‌ಗೆ ಯೆಲ್ಲೋ ಕಾರ್ಡ್ ನೀಡಿದರು. ಉಭಯ ತಂಡಗಳ ನಡುವೆ ನಡೆದ ಈ ಜಗಳದ ವಿಡಿಯೊ ಇದೀಗ ವೈರಲ್​ ಆಗಿದೆ.

ಇದನ್ನೂ ಓದಿ SAFF Football: ಪಾಕ್​ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; ಟೂರ್ನಿಯಲ್ಲಿ ಶುಭಾರಂಭ

ಈ ಪಂದ್ಯದಲ್ಲಿ ಹ್ಯಾಟ್ರಿಕ್​ ಗೋಲು ಬಾರಿಸಿದ ಸುನೀಲ್​ ಚೆಟ್ರಿ ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ 2ನೇ ಅತ್ಯಧಿಕ ಗೋಲು ಬಾರಿಸಿದ ಏಷ್ಯನ್‌ ಆಟಗಾರನೆನಿಸಿದರು. ಚೆಟ್ರಿ ಅವರ ಒಟ್ಟು ಗೋಲುಗಳ ಸಂಖ್ಯೆ ಸದ್ಯ 90ಕ್ಕೆ ಏರಿದೆ. ಮುಂದಿನ ಪಂದ್ಯಗಳಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

Exit mobile version