ಬೆಂಗಳೂರು: 14ನೇ ಆವೃತ್ತಿಯ ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಲೆಬನಾನ್(india vs lebanon football) ವಿರುದ್ಧ ಸೆಣಸಾಡಲಿದೆ. ಮತ್ತೊಂದು ಸೆಮೀಸ್‌ನಲ್ಲಿ ಕುವೈತ್-ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಎರಡೂ ಪಂದ್ಯಗಳು ಶನಿವಾರ (ಜುಲೈ1) ನಡೆಯಲಿವೆ. 8 ಬಾರಿ ಚಾಂಪಿಯನ್ ಭಾರತ ಈ ಬಾರಿಯೂ ಕೂಟದ ನೆಚ್ಚಿನ ತಂಡವಾಗಿದೆ. ಲೀಗ್ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಸುನೀಲ್ ಚೆಟ್ರಿ(sunil chhetri) ಪಡೆ 2 ಗೆಲುವು ಮತ್ತು ಒಂದು ಡ್ರಾ ಸಾಧಿಸಿತ್ತು.
‘ಎ’ ಗುಂಪಿನಲ್ಲಿದ್ದ ಭಾರತ ಉದ್ಘಾಟನ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ 4-0 ಅಂತರದ ಗೆಲುವು ಸಾಧಿಸಿತ್ತು. ಬಳಿಕ ನೇಪಾಳ ವಿರುದ್ಧ ಜಯ ಕಂಡಿತ್ತು. ಆದರೆ ಬಲಿಷ್ಠ ಕುವೈತ್ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಭಾರತದ ಎದುರಾಳಿ ಲೆಬನಾನ್ ‘ಬಿ’ ಗುಂಪಿನಲ್ಲಿ 3 ಪಂದ್ಯಗಳಲ್ಲೂ ಗೆದ್ದು ಸೆಮೀಸ್ ತಲುಪಿದೆ. ಬುಧವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಮಾಲ್ಡೀವ್ಸ್ ವಿರುದ್ಧ ಲೆಬನಾನ್ 1-0 ಗೋಲಿನ ಜಯ ಸಾಧಿಸಿತ್ತು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭೂತನ್ ತಂಡವನ್ನು ಬಾಂಗ್ಲಾದೇಶ 3-1ರಲ್ಲಿ ಬಗ್ಗುಬಡಿದು ಸೆಮಿಗೆ ಲಗ್ಗೆಯಿಟ್ಟಿತ್ತು.
ಭಾರತ ಹಾಗೂ ಲೆಬನಾನ್ ತಂಡಗಳು ಇತ್ತೀಚೆಗಷ್ಟೇ ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯ ಫೈನಲ್ನಲ್ಲಿ ಮುಖಾಮುಖಿಯಾಗಿತ್ತು. ಇಲ್ಲಿ ಭಾರತ ತಂಡ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೇ ಆತ್ಮವಿಶ್ವಾಸದಲ್ಲಿ ಈ ಪಂದ್ಯದಲ್ಲಿ ಹಿಡಿತ ಸಾಧಿಸುವ ಯೋಜನೆಯಲ್ಲಿದೆ ಭಾರತ ತಂಡ.
ಇದನ್ನೂ ಓದಿ SAFF Football: 5 ವರ್ಷಗಳ ಬಳಿಕ ಭಾರತ-ಪಾಕ್ ಕಾಲ್ಚೆಂಡಿನ ಕಾಳಗಕ್ಕೆ ವೇದಿಕೆ ಸಜ್ಜು
ಅದ್ಭುತ ಫಾರ್ಮ್ನಲ್ಲಿರುವ ಸುನೀಲ್ ಚೆಟ್ರಿ
ಭಾರತ ತಂಡದ ನಾಯಕ ಸುನೀಲ್ ಚೆಟ್ರಿ ಅವರು ಅದ್ಭುತ ಫಾರ್ಮ್ನಲ್ಲಿದ್ದಾರೆ. ಇದರಿಂದ ತಂಡ ಹೆಚ್ಚಿನ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲಿದೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲ್ ಬಳಿಕ ನೇಪಾಳ ವಿರುದ್ಧವು ಗೋಲ್ ಬಾರಿಸಿ ಮಿಂಚಿದ್ದರು. ಈ ಎರಡೂ ಪಂದ್ಯಗಳಲ್ಲಿಯೂ ಅವರು ಮೊದಲ ಗೋಲ್ ಬಾರಿಸುವ ಮೂಲಕ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದ್ದರು. ಸೆಮಿ ಪಂದ್ಯದಲ್ಲಿಯೂ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರಿಸಲಾಗಿದೆ.
At the end of an intense group stage, here’s how the #SAFFChampionship2023 🏆 Semifinal clashes are set-up 🔥⚔️ #IndianFootball ⚽️ #BlueTigers 🐯 pic.twitter.com/s2ofNXGQkG
— Indian Football Team (@IndianFootball) June 29, 2023
8 ಬಾರಿ ಚಾಂಪಿಯನ್ ಪಟ್ಟ
ಸ್ಯಾಫ್ ಕಪ್ ಟೂರ್ನಿಯಲ್ಲಿ ಭಾರತ ಎಂಟು ಸಲ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಾಲ್ಕು ಸಲ ರನ್ನರ್ಸ್ ಅಪ್ ಆಗಿದೆ. 2003 ರಲ್ಲಿ ಢಾಕಾದಲ್ಲಿ ನಡೆದಿದ್ದ ಟೂರ್ನಿಯನ್ನು ಹೊರತುಪಡಿಸಿ ಉಳಿದ ಎಲ್ಲ ಕೂಟಗಳಲ್ಲಿಯೂ ಭಾರತ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಈ ಬಾರಿಯೂ ಭಾರತ ತಂಡ ಕೂಟದ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದೆ.