ನವದೆಹಲಿ: ಬೆಂಗಳೂರಿನಲ್ಲಿ ನಡೆಯಲಿರುವ 14ನೇ ಆವೃತ್ತಿಯ ಸ್ಯಾಫ್ ಫುಟ್‌ಬಾಲ್(SAFF Football) ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಫುಟ್‌ಬಾಲ್ ತಂಡಕ್ಕೆ(Pakistan football team) ವೀಸಾ ಲಭಿಸಿದೆ. ಪಾಕ್ ತಂಡ ಮಂಗಳವಾರ ಬೆಂಗಳೂರಿಗೆ ತಲುಪುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ತಂಡವು ಮಾರಿಷಸ್‌ನಿಂದ ಭಾರತಕ್ಕೆ ಬರಲು ವೀಸಾ ಸಿಗದ ಕಾರಣ ಈ ಟೂರ್ನಿಯಲ್ಲಿ ಪಾಕ್ ತಂಡದ ಪಾಲ್ಗೊಳ್ಳುವಿಕೆಯ ಬಗ್ಗೆ ಯಾವುದೇ ಖಚಿತತೆ ಇರಲಿಲ್ಲ. ಇದೀಗ ಪಾಕ್ ತಂಡಕ್ಕೆ ವೀಸಾ ಲಭಿಸಿದೆ ಎಂದು ಕೆಎಸ್‌ಎಫ್‌ಎ ಉನ್ನತ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. “ಪಾಕಿಸ್ತಾನ ತಂಡಕ್ಕೆ ವೀಸಾ ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ಬುಧವಾರ ಭಾರತ ವಿರುದ್ಧದ ಬಹುನಿರೀಕ್ಷಿತ ಪಂದ್ಯಕ್ಕೆ ಮುಂಚಿತವಾಗಿ ಪಾಕ್ ತಂಡವು ಮಂಗಳವಾರ ಬೆಂಗಳೂರಿಗೆ ಬಂದಿಳಿಯುವ ಸಾಧ್ಯತೆ ಇದೆ” ಎಂದು ಹೇಳಿದರು.
ಭಾರತ ಮತ್ತು ಪಾಕ್ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು. ಉಭಯ ತಂಡಗಳು 5 ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿವೆ. ಜೂನ್ 21 ರಂದು ನಡೆಯುವ ಪಂದ್ಯದಲ್ಲಿ ಇತ್ತಂಡಗಳು ಸೆಣಸಾಟ ನಡೆಸಲಿವೆ. ‘ಎ’ ಗುಂಪಿನಲ್ಲಿರುವ ಭಾರತ ಮತ್ತು ಪಾಕ್ ಜತೆಗೆ ಕುವೈತ್ ಹಾಗೂ ನೇಪಾಳ ಕೂಡ ಸ್ಥಾನ ಪಡೆದಿದೆ. ಜುಲೈ 4ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಕುವೈತ್ ಮತ್ತು ನೇಪಾಳ ತಂಡಗಳು ಸೆಣಸಾಟ ನಡೆಸಲಿವೆ. ಇದೇ ದಿನ ರಾತ್ರಿ ಬದ್ಧ ಎದುರಾಳಿಗಳಾದ ಇಂಡೋ-ಪಾಕ್ ಹಣಾಹಣಿ ನಡೆಯಲಿದೆ. ಈ ಪಂದ್ಯ ಜೂನ್ 21 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ(Sree Kanteerava Stadium) ನಡೆಯಲಿದೆ. ಟೂರ್ನಿಯ ಎಲ್ಲ ಪಂದ್ಯಗಳು ಇಲ್ಲಿಯೇ ನಡೆಯಲಿವೆ. ಜೂನ್ 21 ರಿಂದ ಜುಲೈ 4ರ ವರೆಗೆ ಟೂರ್ನಿ ಆಯೋಜನೆಗೊಂಡಿದೆ.
‘ಬಿ’ ಗುಂಪಿನಲ್ಲಿ ಲೆಬನಾನ್, ಮಾಲ್ಡೀವ್ಸ್, ಬಾಂಗ್ಲಾದೇಶ ಮತ್ತು ಭೂತಾನ್ ತಂಡಗಳು ಕಾಣಿಸಿಕೊಂಡಿವೆ. ಭಾರತ ಮತ್ತು ಪಾಕಿಸ್ತಾನದ ಫುಟ್‌ಬಾಲ್ ತಂಡಗಳು ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿ ಮುಖಾಮುಖಿಯಾಗಲಿವೆ. 2018ರ ಸ್ಯಾಫ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಇವೆರಡು ತಂಡಗಳು ಕೊನೆಯದಾಗಿ ಹೋರಾಟ ನಡೆಸಿದ್ದವು. ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿದ್ದ ಈ ಪಂದ್ಯವನ್ನು ಭಾರತ 3-1 ಗೋಲ್ಗಳ ಅಂತರದಿಂದ ಪಾಕ್ಗೆ ಸೋಲುಣಿಸಿತ್ತು. ಟೂರ್ನಿಯಲ್ಲಿ ನೆಚ್ಚಿನ ತಂಡವಾಗಿದ್ದ ಭಾರತ ಫೈನಲ್ನಲ್ಲಿ ಮಾಲ್ಡೀವ್ಸ್ ವಿರುದ್ಧ 2-1 ಅಂತರದಲ್ಲಿ ಮಂಡಿಯೂರಿತ್ತು.
See you soon, India! 🙏🏻#wearepakistanfootball #dilsayfootball #shaheens pic.twitter.com/9a3uxiyJuv
— Pakistan Football Federation (@TheRealPFF) June 19, 2023
ಇದನ್ನೂ ಓದಿ Football: ಇಂಟರ್ ಕಾಂಟಿನೆಂಟಲ್ ಕಪ್ ವಿಜೇತ ಭಾರತ ತಂಡಕ್ಕೆ 1 ಕೋಟಿ ರೂ. ಬಹುಮಾನ ಘೋಷಿಸಿದ ಒಡಿಶಾ ಸರ್ಕಾರ
ವೇಳಾಪಟ್ಟಿ
ಜೂನ್ 21: ಕುವೈತ್- ನೇಪಾಳ (ಆರಂಭ: ಮಧ್ಯಾಹ್ನ 3.30).
ಭಾರತ- ಪಾಕಿಸ್ತಾನ (ಆರಂಭ: ರಾತ್ರಿ 7.30)
ಜೂನ್ 22: ಲೆಬನಾನ್- ಬಾಂಗ್ಲಾದೇಶ (3.30).
ಮಾಲ್ಡೀವ್ಸ್- ಭೂತಾನ್ (7.30)
ಜೂನ್ 24: ಪಾಕಿಸ್ತಾನ- ಕುವೈತ್ (3.30)
ನೇಪಾಳ-ಭಾರತ (7.30)
ಜೂನ್ 25: ಬಾಂಗ್ಲಾದೇಶ- ಮಾಲ್ಡೀವ್ಸ್ (3.30).
ಭೂತಾನ್- ಲೆಬನಾನ್ (7.20)
ಜೂನ್ 27: ನೇಪಾಳ- ಪಾಕಿಸ್ತಾನ (3.30).
ಭಾರತ- ಕುವೈತ್ (7.30)
ಜೂನ್ 28: ಲೆಬನಾನ್- ಮಾಲ್ಡೀವ್ಸ್ (3.30).
ಭೂತಾನ್- ಬಾಂಗ್ಲಾದೇಶ (7.30)
ಜುಲೈ 1: ಸೆಮಿಫೈನಲ್ ಪಂದ್ಯಗಳು, ಜುಲೈ 4: ಫೈನಲ್