Site icon Vistara News

Saina Nehwal: ಸ್ತ್ರೀಯರು ಅಡುಗೆ ಮನೆಗೆ ಸೀಮಿತ; ಶಾಮನೂರು ಹೇಳಿಕೆಗೆ ಸೈನಾ ನೆಹ್ವಾಲ್ ಆಕ್ರೋಶ

Saina Nehwal

ಬೆಂಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದ (Davangere Lok Sabha constituency) ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ (Gayatri Siddeshwar) ವಿರುದ್ಧ ಮಾತನಾಡುವಾಗ, “ಮಹಿಳೆಯರು ಅಡುಗೆ ಮಾಡಲು ಲಾಯಕ್ಕು” ಎಂಬಂತೆ ಹೇಳಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಭಾರತದ ಖ್ಯಾತ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​(Saina Nehwal) ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ನೆಹ್ವಾಲ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ “ಸಮಾಜದಲ್ಲಿ ಮಹಿಳೆ ಅಬಲೆ ಅಲ್ಲ ಸಬಲೆ. ಪುರುಷರಂತೆ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್​ ಅಭಿಯಾನವೊಂದನ್ನು ಆರಂಭಿಸಿತ್ತು. ಆದರೆ ಕರ್ನಾಟಕದ ಹಿರಿಯ ಕಾಂಗ್ರೆಸ್​ ನಾಯಕರೊಬ್ಬರು ಮಹಿಳೆಯರ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್​ನ ನಿಜವಾದ ಮನಸ್ಥಿಯನ್ನು ತೋರಿಸುತ್ತದೆ’ ಎಂದು ಶಿವಶಂಕರಪ್ಪ ಹೇಳಿಯನ್ನು ಖಂಡಿಸಿದ್ದಾರೆ.

ದಾವಣಗೆರೆ ಬಂಟರ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಾಂಗ್ರೆಸ್‌ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ, ಗಾಯತ್ರಿ ಸಿದ್ದೇಶ್ವರ್‌ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ಮಾತನಾಡಲು ಬಾರದ ಗಾಯತ್ರಿ ಸಿದ್ದೇಶ್ವರ್‌ ಅವರು ಅಡುಗೆ ಮಾಡುವುದಕ್ಕೆ ಲಾಯಕ್ಕು. ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವ ಶಕ್ತಿ ಅವರಿಗಿಲ್ಲ. ಹೀಗಾಗಿ ನಮ್ಮ ಕಾಂಗ್ರೆಸ್ಸಿಗರ ‘ಕೈ’ ಮೇಲಿದೆ ಎಂಬುದನ್ನು ನಾವು ತೋರಿಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಗಾಯತ್ರಿ ಸಿದ್ದೇಶ್ವರ್‌ ಕೆಂಡಾಮಂಡಲ

ಶಾಮನೂರು ಶಿವಶಂಕರಪ್ಪ ಅವರ ಈ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುನ್ನುಗ್ಗುತ್ತಿದ್ದಾರೆ. ಆಗಸದಲ್ಲಿ ಹಾರುವ ಹಂತವನ್ನು ತಲುಪಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಅವರ ಕೊಡುಗೆ ಇದೆ. ಈ ವಿಚಾರ ಅಜ್ಜನಿಗೆ ಗೊತ್ತಿಲ್ಲವೆಂದು ಅನ್ನಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ Saina Nehwal | ಏಷ್ಯನ್ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​; ಟ್ರಯಲ್ಸ್‌ನಿಂದ ಹಿಂದೆ ಸರಿದ ಸೈನಾ, ಮಾಳವಿಕಾ

ತಾಯಿಯಾದವಳು ಅಡುಗೆ ಮಾಡಿ, ಕೈ ತುತ್ತು ಕೊಡುವ ಪ್ರೀತಿ ಅವರಿಗೆ ಗೊತ್ತಿಲ್ಲ. ಹಾಗಾದರೆ ಮಹಿಳೆಯರು ಅಡುಗೆ ಮಾಡೋಕೆ ಮಾತ್ರ ಸೀಮಿತವೇ? ಮಹಿಳೆ ಅಡುಗೆಯನ್ನೂ ಮಾಡುತ್ತಾಳೆ, ಆಕಾಶದಲ್ಲೂ ಹಾರಾಡುತ್ತಾಳೆ. ಇಂಥ ಹೇಳಿಕೆ ನೀಡುವ ಮೂಲಕ ಶಾಮನೂರು ಶಿವಶಂಕರಪ್ಪ ಅವರು ಮಹಿಳೆಯರಿಗೆ ಅಗೌರವ ತೋರಿದ್ದಾರೆ ಎಂದು ಗಾಯತ್ರಿ ಸಿದ್ದೇಶ್ವರ್‌ ಆಕ್ರೋಶವನ್ನು ಹೊರಹಾಕಿದರು.

ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಇದೊಂದು ಕೆಟ್ಟ ಹೇಳಿಕೆ ಎಂದಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಹಿರಿಯ ರಾಜಕಾರಣಿಯಾಗಿದ್ದಾರೆ. ಅವರಿಗೆ ಬುದ್ಧಿ ಹೇಳುವ ವಯಸ್ಸು ನನ್ನದಲ್ಲ. ಆದರೆ, ಅವರ ಮಾತಿಗೆ ವಿರೋಧ ವ್ಯಕ್ತಪಡಿಸುತ್ತೇನೆ. ನಮ್ಮ‌ ಪಕ್ಷದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ಬಗ್ಗೆ ಕೆಟ್ಟ ಹೇಳಿಕೆ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ತಮ್ಮ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸಿದ್ದಾರೆ. ಅಂಥದರಲ್ಲಿ ಈ ರೀತಿ ಹೇಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ.

Exit mobile version