Site icon Vistara News

Viral Video: ರನ್​ ನೀಡಿದ ಸಿಟ್ಟಿನಲ್ಲಿ ಕ್ಯಾಮೆರಾ ತಳ್ಳಿಹಾಕಿದ ಇಂಗ್ಲೆಂಡ್ ಆಲ್​ರೌಂಡರ್​

Sam Curran pushes camera

ನವದೆಹಲಿ: ಭಾನುವಾರ ನಡೆದ ಅಫ್ಘಾನಿಸ್ತಾನ(England vs Afghanistan) ವಿರುದ್ಧದ ಪಂದ್ಯದ ಇಂಗ್ಲೆಂಡ್‌ ತಂಡದ ಸ್ಟಾರ್ ಆಲ್‌ರೌಂಡರ್ ಸ್ಯಾಮ್‌ ಕರನ್‌(Sam Curran)​ ಅವರು ಬೌಂಡರಿ ಲೈನ್ ಬಳಿ ಕ್ಯಾಮೆರಾ ತಳ್ಳಿ ಹಾಕಿದ(Sam Curran pushes camera) ಘಟನೆ ನಡೆದಿದೆ. ಇದಕ್ಕೆ ಕಾರಣ ಅವರ ಓವರ್​ನಲ್ಲಿ ಸೋರಿಕೆಯಾದ 20 ರನ್​ಗಳು. ಈ ವಿಡಿಯೊ ವೈರಲ್​ ಆಗಿದೆ(Viral Video).

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಅಫ್ಘಾನಿಸ್ತಾನ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರ ರಹಮತುಲ್ಲಾ ಗುರ್ಬಾಜ್ ಅವರು ಆಂಗ್ಲ ಬೌಲರ್​ಗಳ ಮೇಲೆರಗಿ ಹೊಡಿಬಡಿ ಆಟದ ಮೂಲಕ ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. ಅವರ ಆಕ್ರಮಣಕಾರಿ ಆಟಕ್ಕೆ ಪವರ್​ ಪ್ಲೇಯಲ್ಲಿ ಬೌಲಿಂಗ್​ ನಡೆಸಲು ಬಂದ ಸ್ಯಾಮ್​ ಕರನ್​ 20 ರನ್​ ಹೊಡೆಸಿಕೊಂಡರು.

20 ರನ್​ ಬಿಟ್ಟುಕೊಟ್ಟ ಸಿಟ್ಟಿನಲ್ಲಿ ಓವರ್​ ಮುಗಿದ ಬಳಿಕ ಸ್ಯಾಮ್​ ಬೌಂಡರಿ ಲೈನ್​ ಬಳಿ ಫೀಲ್ಡಿಂಗ್​ ನಡೆಸಲು ಮುಂದಾದರು. ಇದೇ ವೇಳೆ ಕ್ಯಾಮೆರಮೇನ್​ ಸ್ಯಾಮ್​ ಬಳಿ ತನ್ನ ಕ್ಯಾಮರ ಫೋಕಸ್​ ಮಾಡಿದರು. ಮೊದಲೇ ಸಿಟ್ಟಿನಲ್ಲಿದ್ದ ಸ್ಯಾಮ್​ ಕರನ್​ ಈ ಸಿಟ್ಟನ್ನು ಕ್ಯಾಮರದ ಮೇಲೆ ತೋರಿಸಿಕೊಂಡರು. ಕ್ಯಾಮೆರಾವನ್ನು ಜೋರಾಗಿ ತಲ್ಲಿ ಏನೋ ಬೈದರು. ಈ ವಿಡಿಯೊ ವೈರಲ್​ ಆಗಿದ್ದು ಇದು ನಿಜಕ್ಕೂ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಕೆಲ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಐಸಿಸಿ ನೀತಿ ಸಂಹಿತೆ ಪ್ರಕಾರ ಸ್ಯಾಮ್​ ಕನ್​ಗೆ ದಂಡ ಬೀಳುವ ಸಾಧ್ಯತೆ ಇದೆ.

ಒಟ್ಟು 4 ಓವರ್​ ಬೌಲಿಂಗ್​ ನಡೆಸಿ ಸ್ಯಾಮ್​ ಕರನ್​ 46 ರನ್​ ಬಿಟ್ಟುಕೊಟ್ಟು ವಿಕೆಟ್​ ಲೆಸ್​ ಎನಿಸಿಕೊಂಡರು. ಬ್ಯಾಟಿಂಗ್​ನಲ್ಲಿಯೂ ವೈಫಲ್ಯ ಕಂಡರು. ಕೇವಲ 10 ರನ್​ ಗಳಿಸಿ ವಿಕೆಟ್​ ಕಳೆದುಕೊಂಡರು. ಈ ಬಾರಿಯ ಐಪಿಎಲ್​ನಲ್ಲಿಯೂ ಅವರು ಕಮಾಲ್​ ಮಾಡಲು ವಿಫಲರಾಗಿದ್ದರು.

ಪಂದ್ಯ ಗೆದ್ದ ಅಫಘಾನಿಸ್ತಾನ

ಅರುಣ್​ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್​ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್​ಗೆ ಪೂರಕವಾಗಿರುವ ಪಿಚ್​ನಲ್ಲಿ ಚೇಸ್ ಮಾಡಿ ಗೆಲ್ಲುವುದು ಸುಲಭ ಎಂಬ ಲೆಕ್ಕಾಚಾರದೊಂದಿಗೆ ಈ ನಿರ್ಧಾರ ತೆಗೆದುಕೊಂಡಿತು. ಜತೆಗೆ ಅಫಘಾನಿಸ್ತಾನ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಉದ್ದೇಶ ಹೊಂದಿತ್ತು. ಆಂತೆಯೇ ಮೊದಲು ಬ್ಯಾಟ್​ ಮಾಡಿದ ಅಫಘಾನಿಸ್ತಾನ ತಂಡ 49.5 ಓವರ್​ಗಳಲ್ಲಿ 284 ರನ್ ಬಾರಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 40.3 ಓವರ್​ಗಳಲ್ಲಿ 215 ರನ್​ಗಳಿಗೆ ಆಲ್​ಔಟ್​ ಆಗುವ ಮೂಲಕ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ ICC World Cup 2023: ವಿಶ್ವಕಪ್​ ಇತಿಹಾಸದಲ್ಲೇ ಆಸ್ಟ್ರೇಲಿಯಾಕ್ಕೆ ಭಾರಿ ಮುಖಭಂಗ

2019ರ ವಿಶ್ವಕಪ್​ನಲ್ಲಿ​ ಮ್ಯಾಂಚೆಸ್ಟರ್​ನಲ್ಲಿ ನಡೆದ ಪಂದ್ಯದಲ್ಲಿ ಅಫಘಾನಿಸ್ತಾನ ತಂಡ ಇಂಗ್ಲೆಂಡ್​ ವಿರುದ್ಧ 150 ರನ್​ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಇದೀಗ ಈ ಸೇಡನ್ನು ತೀರಿಸಿಕೊಂಡಿದೆ. ಆಂಗ್ಲರಿಗೆ ಅಚ್ಚರಿಯ ಸೋಲಿನ ಶಾಕ್ ನೀಡಿದೆ. ಇತ್ತಂಡಗಳ ಮೂರನೇ ಮುಖಾಮುಖಿ ಇದಾಗಿತ್ತು. 2015ರಲ್ಲಿ ಹಾಗೂ 2019ರಲ್ಲಿ ಇಂಗ್ಲೆಂಡ್​ ಪಾರಮ್ಯ ಮೆರೆದಿತ್ತು. ಇದೀಗ ನವ ದೆಹಲಿಯಲ್ಲಿ ಆಫ್ಘನ್​ ಗೆದ್ದು ಬೀಗಿದೆ. ಈ ಫಲಿತಾಂಶವನ್ನು ಕ್ರಿಕೆಟ್ ಪಂಡಿತರು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಕ್ರಿಕೆಟ್​ನಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಈ ಫಲಿತಾಂಶವೇ ಮತ್ತೊಂದು ಸಾಕ್ಷಿ ಎನಿಸಿತು. ಈ ಗೆಲುವಿನಿಂದ ಆಫ್ಘನ್​ ಆತ್ಮವಿಶ್ವಾಸ ಹೆಚ್ಚಿದರಲ್ಲಿ ಯಾವುದೇ ಅನುಮಾನವಿಲ್ಲ. ಜತೆಗೆ ಬಲಿಷ್ಠ ತಂಡಗಳಿಗೂ ಭಯವೊಂದು ನಿರ್ಮಾಣವಾಗಿದೆ.

Exit mobile version