ಮುಂಬಯಿ: ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಕಳಪೆ ಪ್ರದರ್ಶನ ಮುಂದುವರಿಸಿತು. ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿದ ಸ್ಮೃತಿ ಮಂಧಾನಾ ಪಡೆ 138 ರನ್ಗಳಿಗೆ ಆಲ್ಔಟ್ ಆಗಿ ಎದುರಾಳಿ ತಂಡಕ್ಕೆ ಕಡಿಮೆ ಮೊತ್ತದ ಸವಾಲನ್ನು ನೀಡಿದೆ. ಎಲಿಸ್ ಪೆರಿ (52) ಅರ್ಧ ಶತಕ ಬಾರಿಸಿದ್ದೇ ಆರ್ಸಿಬಿ ಅಭಿಮಾನಿಗಳ ಪಾಲಿಗೆ ಸಮಾಧಾನಕರ ಸಂಗತಿ.
ಇಲ್ಲಿನ ಬ್ರಬೊರ್ನ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕಿ ಸ್ಮೃತಿ ಮಂಧಾನಾ ದೊಡ್ಡ ಮೊತ್ತ ಪೇರಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಅವರ ಯೋಜನೆ ಉಲ್ಟಾ ಹೊಡೆಯಿತು. 19.3 ಓವರ್ಗಳಲ್ಲಿ 138 ರನ್ಗಳಿಗೆ ಆಲ್ಔಟ್ ಆಯಿತು. 12.4 ಓವರ್ಗಳಲ್ಲಿ 100 ರನ್ ಬಾರಿಸಿದ್ದ ಆರ್ಸಿಬಿ ಬಳಿಕ ಏಕಾಏಕಿ ಕುಸಿತ ಕಂಡಿತು. ಯುಪಿ ವಾರಿಯರ್ಸ್ ಬಳಗ ಶಿಸ್ತಿನ ಬೌಲಿಂಗ್ ದಾಳಿ ಸಂಘಟಿಸಿ ದುರ್ಬಲ ಆರ್ಸಿಬಿ ಬ್ಯಾಟಿಂಗ್ ಪಡೆಯನ್ನು ಹಿಮ್ಮೆಟ್ಟಿತು. ಯುಪಿ ತಂಡ ಒಂದೇ ಒಂದು ಇತರ ರನ್ ನೀಡದಿರುವುದು ಅವರ ಬೌಲಿಂಗ್ ಶಿಸ್ತಿಗೆ ಸಾಕ್ಷಿ ಎನಿಸಿಕೊಂಡಿತು.
ಸ್ಮೃತಿ ಮಂಧಾನಾ ಮತ್ತೆ ಫೇಲ್
ಡಬ್ಲ್ಯುಪಿಎಲ್ನ (WPL 2023) ದುಬಾರಿ ಬೆಲೆಯ ಆಟಗಾರ್ತಿ ಸ್ಮೃತಿ ಮಂಧಾನಾ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಭಯದಿಂದಲೇ ಬ್ಯಾಟಿಂಗ್ ಆರಂಭಿಸಿದ ಅವರು 4 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. 3.4 ಕೋಟಿ ರೂಪಾಯಿ ಪಡೆದಿದ್ದ ಅವರು ಈ ಪಂದ್ಯದಲ್ಲಾದರೂ ಉತ್ತಮ ಪ್ರದರ್ಶನ ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು. ಮತ್ತೊಬ್ಬರು ಆರಂಭಿಕ ಬ್ಯಾಟರ್ ಸೋಫಿ ಡಿವೈನ್ 34 ರನ್ ಬಾರಿಸಿ ತಂಡಕ್ಕೆ ಸ್ವಲ್ಪ ಮಟ್ಟಿಗೆ ನೆರವಾದರು. ಸೋಫಿ ಮತ್ತು ಎಲಿಸ್ ಹೊರತುಪಡಿಸಿ ಉಳಿದ ಬ್ಯಾಟರ್ಗಳು ರನ್ ಗಳಿಸಲು ಪ್ರಯತ್ನವೇ ಪಡಲಿಲ್ಲ.
ಕನಿಕಾ ಅಹುಜಾ (8), ಹೇದರ್ ನೈಟ್ (2), ರಿಚಾ ಘೋಷ್ (1), ಕೋಮಲ್ ಜಂಜಾದ್ (5), ರೇಣುಕಾ ಸಿಂಗ್ (3) ಒಂದಂಕಿ ಮೊತ್ತಕ್ಕೆ ಸೀಮಿತಗೊಂಡರು. ಶ್ರೇಯಾಂಕಾ ಪಾಟೀಲ್ (15), ಎರಿನ್ ಬರ್ನ್ಸ್ (12) ಪ್ರಯತ್ನವೂ ಲೆಕ್ಕಕ್ಕೆ ಸಿಗಲಿಲ್ಲ. ಅನಗತ್ಯ ರನ್ಔಟ್, ಬೇಕಾಬಿಟ್ಟಿ ಹೊಡೆತಕ್ಕೆ ಆರ್ಸಿಬಿ ತಂಡ ಬೆಲೆ ತೆರಬೇಕಾಯಿತು.
ಯುಪಿ ವಾರಿಯರ್ಸ್ ತಂಡ ಪರ ಸೋಫಿಯಾ ಎಕ್ಲೆಸ್ಟೋನ್ 14 ರನ್ಗಳಿಗೆ 4 ವಿಕೆಟ್ ಉರುಳಿಸಿದರೆ ದೀಪ್ತಿ ಶರ್ಮಾ 26 ರನ್ಗಳಿಗೆ 3 ವಿಕೆಟ್ ಉರುಳಿಸಿದರು.