Site icon Vistara News

US Open | ಗಾಯದ ಸಮಸ್ಯೆಯಲ್ಲಿ ಸಿಲುಕಿರುವ ಸಾನಿಯಾ ಮಿರ್ಜಾ ಗ್ರ್ಯಾನ್‌ಸ್ಲಾಮ್‌ ಟೂರ್ನಿಗೆ ಅಲಭ್ಯ

US OPEN

ಹೈದರಾಬಾದ್‌ : ಭಾರತದ ಸ್ಟಾರ್‌ ಟೆನಿಸ್‌ ಪಟು ಸಾನಿಯಾ ಮಿರ್ಜಾ ಅವರು ಮೊಣಕೈ ಗಾಯದ ಸಮಸ್ಯೆಗೆ ಒಳಗಾಗಿದ್ದು, ಮುಂಬರುವ ಯುಎಸ್‌ ಓಪನ್‌ನಿಂದ (US Open)ಹಿಂದೆ ಸರಿದಿದ್ದಾರೆ. ಸಾನಿಯಾ ಅವರು ಗ್ರ್ಯಾನ್‌ ಸ್ಲಾಮ್‌ ಟೂರ್ನಿಗಳಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಗಾಯದ ಸಮಸ್ಯೆಯಿಂದಾಗಿ ಅವರು ಹಿಂದೆ ಸರಿಯುವಂತಾಗಿದೆ. ಜತೆಗೆ ಅವರು ಈ ಟೆನಿಸ್‌ ಋತು ಮುಗಿದ ಬಳಿಕ ನಿವೃತ್ತಿ ಹೇಳುವ ನಿರ್ಧಾರಕ್ಕೂ ಮುಂದಾಗಿದ್ದರು.

ಕೆನಡಾದಲ್ಲಿ ಇತ್ತೀಚೆಗೆ ಟೂರ್ನಮಂಟ್‌ ಒಂದರಲ್ಲಿ ಪಾಲ್ಗೊಂಡಿದ್ದ ಸಾನಿಯಾ ಅವರಿಗೆ ಗಾಯದ ಸಮಸ್ಯೆ ಎದುರಾಗಿದೆ. ಹೀಗಾಗಿ ಅವರು ಯುಎಸ್‌ಗೆ ಹೋಗದೇ ಭಾರತಕ್ಕೆ ವಾಪಸಾಗಿದ್ದಾರೆ. ಸ್ಕ್ಯಾನ್‌ ಮಾಡಿದಾಗ ಗಾಯದ ಸಮಸ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ.

ಗಾಯದ ಸಮಸ್ಯೆ ನಿರ್ವಹಣೆ ಹಾಗೂ ಕುಟುಂಬದ ಜತೆ ಕಾಲ ಕಳೆಯುವ ಉದ್ದೇಶದಿಂದ ವಿಶ್ರಾಂತಿ ಪಡೆಯಲು ನಿರ್ಧರಿಸಿರುವುದಾಗಿ ಸಾನಿಯಾ ಈ ಹಿಂದೆ ಹೇಳಿದ್ದರು. ಬಹುತೇಕ ಈ ಬಾರಿಯ ಟೆನಿಸ್ ಋತುವಿನ ಬಳಿಕ ನಿವೃತ್ತಿ ಹೇಳುವ ಸಾಧ್ಯತೆಗಳು ಇತ್ತು. ಆದರೆ, ಗಾಯದ ಸಮಸ್ಯೆಯಿಂದ ಮೊದಲೇ ಹಿಂಜರಿಯುವಂತಾಗಿದ್ದು, ನಿವೃತ್ತಿ ನಿರ್ಧಾರ ಪ್ರಕಟಿಸುವ ದಿನಗಳು ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.

ಆರು ಗ್ರ್ಯಾನ್‌ ಸ್ಲಾಮ್‌ ಡಬಲ್ಸ್‌ ಪ್ರಶಸ್ತಿ ಗೆದ್ದಿರುವ ಸಾನಿಯಾ ಮಿರ್ಜಾ ಅವರು ಮಾಜಿ ಡಬಲ್ಸ್‌ ಒನ್ ಶ್ರೇಯಾಂಕ ಹೊಂದಿದ ಆಟಗಾರ್ತಿಯೂ ಆಗಿದ್ದಾರೆ. ಅವರು ಮಹಿಳೆಯ ಡಬಲ್ಸ್‌ ವಿಭಾಗದಲ್ಲಿ ಯುಎಸ್‌ ಓಪನ್‌, ವಿಂಬಲ್ಡನ್‌ ಹಾಗೂ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಗೆದ್ದಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಫ್ರೆಂಚ್ ಓಪನ್‌, ಆಸ್ಟ್ರೇಲಿಯನ್‌ ಓಪನ್‌ ಮತ್ತು ಯುಎಸ್ ಓಪನ್‌ ಜಯಿಸಿದ್ದಾರೆ.

ಇದನ್ನೂ ಓದಿ | Wimbeldon : ಸಾನಿಯಾ- ಪಾವಿಕ್‌ ಜೋಡಿ ಸೆಮೀಸ್‌ಗೆ

Exit mobile version