ನವದೆಹಲಿ: ಟೆನಿಸ್ ಬಾಳ್ವೆಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ(Sania Mirza) ಅವರಿಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಪ್ರಶಂಸನೀಯ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಸಾನಿಯಾ ಮಿರ್ಜಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ದುಬೈ ಓಪನ್ ಟೂರ್ನಿಯ ಮೂಲಕ ಸಾನಿಯಾ ಮಿರ್ಜಾ(Sania Mirza) ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರೂ, ತಮ್ಮ ಟೆನಿಸ್ ಬದುಕನ್ನು ಆರಂಭಿಸಿದ ಹೈದರಾಬಾದ್‌ನಲ್ಲಿ ಪ್ರದರ್ಶನ ಪಂದ್ಯವಾಡಿ ರ‍್ಯಾಕೆಟ್ ತ್ಯಜಿಸಿದರು. ಕಳೆದ ಭಾನುವಾರ(ಮಾರ್ಚ್ 5) ಲಾಲ್ ಬಹಾದೂರ್ ಟೆನಿಸ್ ಸ್ಟೇಡಿಯಂನಲ್ಲಿ ಅವರು ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಆಡುವ ಮೂಲಕ ಟೆನಿಸ್ಗೆ ವಿದಾಯ ಹೇಳಿದ್ದರು.
ಟೆನಿಸ್ಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ ಅವರಿಗೆ ಪ್ರಧಾನಿ ಮೋದಿ ಪ್ರಶಂಸನೀಯ ಪತ್ರ ಬರೆದಿದ್ದು “ನೀವು ಭಾರತದ ಚಾಂಪಿಯನ್. ಕ್ರೀಡೆಗೆ ನೀವು ಕೊಟ್ಟ ಸಾಧನೆ ಅಪಾರ. ಭಾರತೀಯ ಕ್ರೀಡಾಕ್ಷೇತ್ರದಲ್ಲಿ ನೀವು ಅಳಿಸಲಾಗದ ಛಾಪು ಮೂಡಿಸಿದ್ದೀರಿ. ನಿಮ್ಮ ಸಾಧನೆ ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಫೂರ್ತಿ” ಎಂದು ಮೋದಿ ಅವರು ಸಾನಿಯಾ ಮಿರ್ಜಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋದಿ ಅವರು ಬರೆದ ಪತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡ ಸಾನಿಯಾ ಮಿರ್ಜಾ ನನ್ನ ಜೀವನದ ಡೈನಾಮಿಕ್ ಹೀರೋ ಪ್ರಧಾನಿ ನರೇಂದ್ರ ಮೋದಿ. ಅವರ ವಾಕ್ ಚಾತುರ್ಯ, ಅದ್ಭುತ ನೆನಪಿನ ಶಕ್ತಿ ನಮ್ಮನ್ನು ಬೆರಗುಗೊಳಿಸುತ್ತದೆ. ಭಾರತದಲ್ಲಿ ಕ್ರೀಡೆಯ ಬೆಳವಣಿಗೆಗೆ ಅವರು ನೀಡುತ್ತಿರುವ ಪ್ರೋತ್ಸಾಹವನ್ನು ಮೆಚ್ಚಲೇ ಬೇಕು. ನಿಮ್ಮ ಪ್ರಶಂಸನೀಯ ಪತ್ರದಿಂದ ನಾನು ಅಪಾರ ಸಂತಸಗೊಂಡಿದ್ದೇನೆ, ಧನ್ಯವಾದಗಳು ಸರ್” ಎಂದು ಸಾನಿಯಾ ಮಿರ್ಜಾ ಬರೆದುಕೊಂಡಿದ್ದಾರೆ.