Site icon Vistara News

ಬ್ರಿಜ್​ಭೂಷಣ್​ ಬೆಂಬಲಿತ ಸಂಜಯ್​ ಸಿಂಗ್​ ಕುಸ್ತಿ ಒಕ್ಕೂಟದ ನೂತನ ಅಧ್ಯಕ್ಷ

Sanjay Singh

ನವ ದೆಹಲಿ: ಡಿಸೆಂಬರ್ 21 ರಂದು ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಅನಿತಾ ಶಿಯೋರನ್ ಅವರನ್ನು ಸೋಲಿಸಿದ ಸಂಜಯ್ ಸಿಂಗ್ ಡಬ್ಲ್ಯುಎಫ್ಐ (Wrestling Federation of India) ನೂತನ ಅಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ. ಸಂಜಯ್ ಸಿಂಗ್​ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಕುಸ್ತಿ ಕ್ಷೇತ್ರದ ಪ್ರಭಾವಿ ವ್ಯಕ್ತಿ ಹಾಗೂ ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬಣಕ್ಕೆ ಸೇರಿದವರು ಎಂದು ನಂಬಲಾಗಿದೆ. ಒಟ್ಟು 47 ಮತಗಳಲ್ಲಿ ಸಂಜಯ್​ ಸಿಂಗ್​​ 40 ಮತಗಳನ್ನೂ ಪಡೆಯುವ ಮೂಲಕ ಪೂರ್ಣ ಬಹುಮತ ಪಡೆದುಕೊಂಡಿದ್ದಾರೆ. ಏತನ್ಮಧ್ಯೆ, ಶಿಯೋರನ್ ಬಣಕ್ಕೆ ಸೇರಿದ ಆರ್​ಎಸ್​​ಪಿಬಿ ಕಾರ್ಯದರ್ಶಿ ಪ್ರೇಮ್ ಚಂದ್ ಲೋಚಾಬ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಈ ಹಿಂದೆ ವರದಿಯಾದಂತೆ ಪ್ರತಿಭಟನಾನಿರತ ಕುಸ್ತಿಪಟುಗಳು ಸಂಜಯ್ ಸಿಂಗ್ ಅವರ ಉಮೇದುವಾರಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು ಶಿಯೋರನ್ ಅವರನ್ನು ಬೆಂಬಲಿಸಿದ್ದರು. ಈಗ, ಪ್ರತಿಭಟನಾ ಗುಂಪು ಮತ್ತೊಮ್ಮೆ ಧರಣಿ ನಡೆಸಬಹುದು ಎಂದು ಹೇಳಲಾಗಿದೆ. ಅದನ್ನು ತಕ್ಷಣವೇ ಅವರು ಪ್ರಕಟಿಸಬಹುದು.

ಎಲ್ಲಿಂದ ಆರಂಭ

ಸುಮಾರು ಒಂದು ವರ್ಷದ ಹಿಂದೆ, ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಮಹಿಳಾ ಕುಸ್ತಿಪಟುಗಳು ಅವರನ್ನು ಮುಖ್ಯ ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದರು. ಭಾರತದ ಅಗ್ರ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಜಂತರ್ ಮಂತರ್​ನಲ್ಲಿ ಪ್ರತಿಭಟನೆ ನಡೆಸಿದ್ದರು. ಹಲವು ಬೆಳವಣಿಗೆಗಳ ಬಳಿಕ ಜೂನ್​ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ (354, 354 ಎ ಮತ್ತು 354 ಡಿ) ಅಡಿ ಬ್ರೂಜ್ ಭೂಷಣ್ ಸಿಂಗ್ ವಿರುದ್ಧ ಡೆಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದರು.

ಇದನ್ನೂ ಓದಿ : ಖೇಲ್‌ ರತ್ನ ಸಿಗದ ನಿರಾಸೆಯಲ್ಲಿ ಕೋರ್ಟ್​ ಮೆಟ್ಟಿಲೇರಲು ಮುಂದಾದ ಜ್ಯೋತಿ ಸುರೇಖಾ

ಹಲವು ವಿಳಂಬಗಳ ಬಳಿಕ ಚುನಾವಣೆ

ಡಬ್ಲ್ಯುಎಫ್ಐ ಚುನಾವಣೆಯ ಮೊದಲ ದಿನಾಂಕವನ್ನು ಮೇ 7 ಎಂದು ನಿಗದಿಪಡಿಸಲಾಗಿತ್ತು. ಆದರೆ ಕುಸ್ತಿಪಟುಗಳು ಮತ್ತೆ ಪ್ರತಿಭಟಿಸಲು ನಿರ್ಧರಿಸಿದ ನಂತರ ಕ್ರೀಡಾ ಸಚಿವಾಲಯವು ಮುಂದೂಡಿತು. ಜುಲೈನಲ್ಲಿ ಒಂದೆರಡು ಬಾರಿ ದಿನಾಂಕಗಳನ್ನು ಬದಲಾಯಿಸಲಾಯಿತು. ರಾಜ್ಯ ಕುಸ್ತಿ ಸಂಸ್ಥೆಗಳು ಮತದಾನದ ಹಕ್ಕನ್ನು ಕೇಳಿದವು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಡೆಯಾಜ್ಞೆ ನೀಡಿದ ನಂತರ ಆಗಸ್ಟ್ 12 ರ ಚುನಾವಣಾ ದಿನಾಂಕದಂದು ಮತ್ತೊಂದು ವಿಳಂಬವಾಯಿತು. ಇದೀಗ ಚುನಾವಣೆ ನಡೆದು ಸಂಜಯ್​ ಸಿಂಗ್ ಆಯ್ಕೆಯಾಗಿದ್ದಾರೆ.

Exit mobile version