ಹರಾರೆ: ಜಿಂಬಾಬ್ವೆ(IND vs ZIM) ವಿರುದ್ಧ ಭಾನುವಾರ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಭಾರತ 42 ರನ್ ಅಂತರದ ಗೆಲುವು ಸಾಧಿಸಿ ಸರಣಿಯನ್ನು 4-1 ಅಂತರದಿಂದ ಕೈವಶ ಮಾಡಿಕೊಂಡಿತ್ತು. ಅಂತಿಮ ಪಂದ್ಯದಲ್ಲಿ ಸಂಜು ಸ್ಯಾಮ್ಸನ್(Sanju Samson) ಬಾರಿಸಿದ ಬಿಗ್ ಹಿಟ್ಟರ್ ಸಿಕ್ಸರ್ನ ವಿಡಿಯೊವೊಂದು ಇದೀಗ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್ ಒಟ್ಟು 45 ಎಸೆತಗಳನ್ನು ಎದುರಿಸಿ 1 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡಂತೆ 58 ರನ್ ಬಾರಿಸಿದರು. ಇದರಲ್ಲಿ ಒಂದು ಸಿಕ್ಸರ್ 110 ಮೀಟರ್(Sanju Samson Smashes 110m Six) ದೂರ ಚಿಮ್ಮಿತು. ಈ ಸಿಕ್ಸರ್ನ ವಿಡಿಯೊವನ್ನು ಸೋನಿ ಸ್ಪೋರ್ಟ್ಸ್ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಜತೆಗೆ ಚೆಂಡನ್ನು ಕಕ್ಷೆಗೆ ಉಡಾಯಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಸಂಜು ಈ ಬಾರಿಯ ಐಪಿಎಲ್ನಲ್ಲಿಯೂ ಪ್ರಚಂಡ ಬ್ಯಾಟಿಂಗ್ ನಡೆಸಿ ಗಮನಸೆಳೆದಿದ್ದರು. ಇದೇ ಕಾರಣಕ್ಕೆ ಅವರನ್ನು ಟಿ20 ವಿಶ್ವಕಪ್ ಟೂರ್ನಿಗೂ ಆಯ್ಕೆ ಮಾಡಲಾಗಿತ್ತು. ಆದರೆ ಅವರಿಗೆ ಒಂದೇ ಒಂದು ಪಂದ್ಯ ಆಡುವ ಅವಕಾಶ ಲಭಿಸಿರಲಿಲ್ಲ.
ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಜಿಂಬಾಬ್ವೆ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಜಿಂಬಾಬ್ವೆ 18.3 ಓವರ್ಗಳಲ್ಲಿ 125 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ 12 ರನ್ಗಳಿಗೆ ಯಶಸ್ವಿ ಜೈಸ್ವಾಲ್ ಔಟಾಗುವ ಮೂಲಕ ಆರಂಭಿಕ ಹಿನ್ನಡೆಗೆ ಒಳಗಾಯಿತು. ಜತೆಗೆ ಶುಭ್ಮನ್ ಗಿಲ್ ಕೂಡ 13 ರನ್ಗೆ ಸೀಮಿತಗೊಂಡರು. ನಂತರದಲ್ಲಿ ಅಭಿಷೇಕ್ ಶರ್ಮಾ 14 ರನ್ಗೆ ಔಟಾಗುವ ಮೂಲಕ 40 ರನ್ಗಳಿಗೆ 3 ವಿಕೆಟ್ ನಷ್ಟ ಮಾಡಿಕೊಂಡಿತು. ಸಂಜು ಸ್ಯಾಮ್ಸನ್ (58) ಹಾಗೂ ರಿಯಾನ್ ಪರಾಗ್ (22) ತಂಡವನ್ನು ಆರಂಭಿಕ ಆಘಾತದಿಂದ ಕಾಪಾಡಿದರು. ಇವರಿಬ್ಬರೂ ಸೇರಿ ತಂಡದ ಮೊತ್ತವನ್ನು 105 ರನ್ಗಳಿಗೆ ಕೊಂಡೊಯ್ದರು.
ಇದನ್ನೂ ಓದಿ IND vs ZIM : ಜಿಂಬಾಬ್ವೆ ವಿರುದ್ಧದ ಐದನೇ ಪಂದ್ಯದಲ್ಲಿಯೂ ವಿಜಯ, 4-1 ಅಂತರದಲ್ಲಿ ಸರಣಿ ಭಾರತದ ಕೈವಶ
ಬೌಲರ್ಗಳ ಅಬ್ಬರ
ಭಾರತ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ಶೂನ್ಯಕ್ಕೆ ಔಟಾದರು. 15 ರನ್ಗೆ 2 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಬಿತ್ತು. ಬಳಿಕ ಡಿಯೋನ್ ಮೈರ್ಸ್ 34 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಲ್ಲದೆ ಕೊನೆಯಲ್ಲಿ ಫರಾಜ್ ಅಕ್ರಮ್ 27 ರನ್ ಬಾರಿಸಿದರು. ಮರುಮಣಿ 27 ರನ್ ಬಾರಿಸಿದ್ದು ಹೊರತುಪಡಿಸಿದರೆ ಜಿಂಬಾಬ್ವೆ ತಂಡದಿಂದ ಹೆಚ್ಚು ಪ್ರತಿರೋಧ ಬರಲಿಲ್ಲ. ಇನ್ನೂ 9 ಎಸೆತಗಳು ಇರುವಂತೆಯೇ ಆಲ್ಔಟ್ ಆಯಿತು. ಭಾರತ ಪರ ಬೌಲಿಂಗ್ನಲ್ಲಿ ಮುಕೇಶ್ ಕುಮಾರ್ 22 ರನ್ಗಳಿಎ 4 ವಿಕೆಟ್ ಉರುಳಿಸಿದರೆ ಶಿವಂ ದುಬೆ 2 ವಿಕೆಟ್ ತಮ್ಮದಾಗಿಸಿಕೊಂಡರು.