Site icon Vistara News

IPL 2023 : ಸಿಎಸ್​ಕೆ ವಿರುದ್ಧ ಗೆದ್ದ ಖುಷಿಯಲ್ಲಿದ್ದ ಸಂಜು ಸ್ಯಾಮ್ಸನ್​ಗೆ 12 ಲಕ್ಷ ರೂಪಾಯಿ ದಂಡ

sanju-samson-who-was-happy-to-win-against-csk-was-fined-rs-12-lakh

sanju-samson-who-was-happy-to-win-against-csk-was-fined-rs-12-lakh

ಚೆನ್ನೈ: ಐಪಿಎಲ್​ 16ನೇ ಆವೃತ್ತಿಯ ಪಂದ್ಯಗಳು ರೋಚಕವಾಗಿ ಮುಕ್ತಾಯಗೊಳ್ಳುತ್ತಿವೆ. ಹಲವು ಪಂದ್ಯಗಳಲ್ಲಿ ಕೊನೇ ಎಸೆತದಲ್ಲಿ ಫಲಿತಾಂಶ ಪ್ರಕಟಗೊಂಡಿವೆ. ಬುಧವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್​ ರಾಯಲ್ಸ್​ ನಡುವಿನ ಪಂದ್ಯವೂ ಇದೇ ರೀತಿ ಆಗಿತ್ತು. ಕೊನೇ ಎಸೆತದಲ್ಲಿ ರಾಜಸ್ಥಾನ್​ ರಾಯಲ್ಸ್​ ಬೌಲರ್​ ಸಂದೀಪ್​, ವಿಶ್ವದ ಅತ್ಯಂತ ಶ್ರೇಷ್ಠ ಫಿನಿಶರ್​ ಮಹೇಂದ್ರ ಸಿಂಗ್ ಧೋನಿಯನ್ನು ಕಟ್ಟಿ ಹಾಕಿದ್ದರು. ಅವರಿಗೆ ಕೇವಲ ಒಂದು ರನ್​ ಮಾತ್ರ ತೆಗೆಯಲು ಸಾಧ್ಯವಾದ ಕಾರಣ ಮೂರು ರನ್​ಗಳಿಂದ ರಾಜಸ್ಥಾನ್​ ರಾಯಲ್ಸ್​ ತಂಡ ಗೆಲುವು ಸಾಧಿಸಿತ್ತು. ಅದಕ್ಕಿಂತ ಮೊದಲು ಧೋನಿ ಎರಡು ಸಿಕ್ಸರ್​ ಬಾರಿಸುವ ಮೂಲಕ ಪ್ರೇಕ್ಷಕರು ಉಸಿರು ಬಿಗಿಹಿಡಿದು ಕಾಯುವಂತೆ ಮಾಡಿದ್ದರು. ಆದರೆ, ಈ ಪಂದ್ಯದ ಗೆಲುವಿನ ಖುಷಿಯನ್ನು ಅನುಭವಿಸಲು ರಾಜಸ್ಥಾನ್​ ತಂಡದ ನಾಯಕ ಸಂಜು ಸ್ಯಾಮ್ಸನ್​ಗೆ ಆಗುತ್ತಿಲ್ಲ. ಯಾಕೆಂದರೆ ಪಂದ್ಯದ ರೆಫರಿ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ಸೂಪರ್‌ ಕಿಂಗ್ಸ್‌ ಎದುರು 3 ರನ್‌ಗಳ ಜಯ ದಕ್ಕಿಸಿಕೊಂಡ ರಾಜಸ್ಥಾನ್‌ ರಾಯಲ್ಸ್‌ ತಂಡ ಇದೀಗ ಆಡಿದ 4 ಪಂದ್ಯಗಳಲ್ಲಿ 3 ಜಯದೊಂದಿಗೆ ಐಪಿಎಲ್​​ 2023ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಆದರೆ. ಸಿಎಸ್‌ಕೆ ವಿರುದ್ಧ ಬೌಲಿಂಗ್‌ ವೇಳೆ ರಾಯಲ್ಸ್‌ ಬಳಗ ನಿಗದಿತ ಆಟದ ಅವಧಿಯಲ್ಲಿ 20 ಓವರ್‌ಗಳನ್ನು ಎಸೆದಿರಲಿಲ್ಲ. ಆ ಅವಧಿಯಲ್ಲಿ ಅವರು ಎರಡು ಓವರ್​ ಕಡಿಮೆ ಎಸೆದಿದ್ದರು. ಹೀಗಾಗಿ ಸಂಜು ಸ್ಯಾಮ್ಸನ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

“ಹಾಲಿ ಆವೃತ್ತಿಯ ಟೂರ್ನಿಯಲ್ಲಿ ರಾಸ್ಥಾನ್‌ ರಾಯಲ್ಸ್‌ ತಂಡದಿಂದ ಆಗಿರುವ ಮೊದಲ ಪ್ರಮಾದ ಇದು. ಐಸಿಸಿ ನೀತಿ ಸಂಹಿತೆಯ ಅನುಗುಣವಾಗಿ ಕನಿಷ್ಠ ದಂಡದ ರೂಪದಲ್ಲಿ ಕ್ಯಾಪ್ಟನ್‌ ಸಂಜು ಸ್ಯಾಮ್ಸನ್‌ ಅವರ ಮೇಲೆ 12 ಲಕ್ಷ ರೂ.ಗಳ ದಂಡ ಹಾಕಲಾಗಿದೆ,” ಎಂದು ಐಪಿಎಲ್‌ ಆಡಳಿತ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಬಾರಿ ಸ್ಲೋ ಓವರ್‌ ರೇಟ್‌ಗಾಗಿ ದಂಡ ತೆತ್ತ ಎರಡನೇ ನಾಯಕ ಸಂಜು ಸ್ಯಾಮ್ಸನ್​. ಇದಕ್ಕಿಂತ ಮೊದಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ಫಾಫ್ ಡು’ಪ್ಲೆಸಿಸ್‌ ದಂಡ ಕಟ್ಟಿಸಿಕೊಂಡಿದ್ದರು. ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ ಕೂಡ ನಿಗದಿತ ಸಮಯದ ಅಂತ್ಯಕ್ಕೆ 1 ಓವರ್‌ ಬಾಕಿ ಉಳಿಸಿಕೊಂಡಿತ್ತು. ಆ ಪಂದ್ಯದಲ್ಲಿ ಆರ್‌ಸಿಬಿ ತಂಡ ಲಕ್ನೊ ಸೂಪರ್​ ಜಯಂಟ್ಸ್​ ಎದುರು ಕೊನೇ ಎಸೆತದಲ್ಲಿ 1 ವಿಕೆಟ್‌ ಸೋಲುಂಡಿತ್ತು.

ರಾಯಲ್ಸ್​ಗೆ ರೋಚಕ ಗೆಲುವು

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ತಂಡ ಜೋಸ್‌ ಬಟ್ಲರ್‌ (52) ಅವರ ಅರ್ಧಶತಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಹೋರಾಟದ ಫಲವಾಗಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 175 ರನ್​ ಬಾರಿಸಿತ್ತು. ಗುರಿ ಬೆನ್ನತ್ತಿದ ಸಿಎಸ್‌ಕೆ, ಆರಂಭದಲ್ಲಿ ಋತುರಾಜ್‌ ಗಾಯಕ್ವಾಡ್‌ ವಿಕೆಟ್‌ ಕಳೆದುಕೊಂಡರೂ, ಡೆವೋನ್‌ ಕಾನ್ವೆ ಮತ್ತು ಅಜಿಂಕ್ಯ ರಹಾನೆ ಅವರ ಸ್ಫೋಟಕ ಬ್ಯಾಟಿಂಗ್​ ಬಲದಿಂದ ಜಯದತ್ತ ದಾಪುಗಾಲಿಟ್ಟಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು.

ಕೊನೇ 3 ಓವರ್‌ಗಳಲ್ಲಿ ಎಂ.ಎಸ್‌ ಧೋನಿ (32*) ಮತ್ತು ರವೀಂದ್ರ ಜಡೇಜಾ (25) ಎದುರಾಳಿ ತಂಡಕ್ಕೆ ಭಯ ಮೂಡಿಸಿದರು. ಆದರೆ 3 ಎಸೆತಗಳಲ್ಲಿ 7 ರನ್‌ ಗಳಿಸಲಾಗದೆ ಸೋಲಿಗೆ ಶರಣಾಯಿತು. ರಾಯಲ್ಸ್‌ ಪರ ಅಂತಿಮ ಓವರ್‌ ಎಸೆದ ಸಂದೀಪ್‌ ಶರ್ಮಾ, ಮೊದಲ 3 ಎಸೆತಗಳಲ್ಲಿ 2 ಸಿಕ್ಸರ್‌ಗಳನ್ನು ಹೊಡೆಸಿಕೊಂಡರೂ, ಅಂತಿಮ 3 ಎಸೆತಗಳಲ್ಲಿ ಯಾರ್ಕರ್‌ಗಳ ಬಳಕೆ ಮಾಡಿ ಕೇವಲ 3 ರನ್‌ ಮಾತ್ರ ಕೊಟ್ಟರು. ಆಲ್‌ರೌಂಡ್‌ ಆಟವಾಡಿದ ಆರ್‌. ಅಶ್ವಿನ್‌ ಪಂದ್ಯಶ್ರೇಷ್ಠ ಗೌರವ ಪಡೆದುಕೊಂಡರು.

Exit mobile version