Site icon Vistara News

IPL 2023 : ನಾಯಕನಾಗಿದ್ದೂ ಆರ್​ಆರ್​ ತಂಡ ಪರ ಕಳಪೆ ದಾಖಲೆ ಬರೆದ ಸಂಜು ಸ್ಯಾಮ್ಸನ್​

Sanju Samson wrote a poor record for RR team despite being the captain

ಚೆನ್ನೈ; ಚೆಪಾಕ್​ ಸ್ಟೇಡಿಯಮ್​ನಲ್ಲಿ ಬುಧವಾರ ನಡೆದ ಚೆನ್ನೈ ಸೂಪರ್​ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಐಪಿಎಲ್​ (IPL 2023) ಪಂದ್ಯದ ವೇಳೆ ಇತ್ತಂಡಗಳ ನಾಯಕರು ಹೊಸ ಮೈಲುಗಲ್ಲು ಸೃಷ್ಟಿಸಿದ್ದಾರೆ. ಅದರಲ್ಲಿ ಚೆನ್ನೈ ತಂಡದ ನಾಯಕ ಎಮ್​ಎಸ್​ ಧೋನಿ ಈ ಫ್ರಾಂಚೈಸಿ ಪರವಾಗಿ 200 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದ ವಿಶೇಷ ದಾಖಲೆ ಮಾಡಿದ್ದಾರೆ. ಆದರೆ, ಆರ್​ಆರ್​ ತಂಡದ ನಾಯಕ ಸಂಜು ಸ್ಯಾಮ್ಸನ್​ ತನ್ನ ತಂಡದ ಪರವಾಗಿ ಕಳಪೆ ದಾಖಲೆ ಮಾಡಿದ್ದಾರೆ. ಅದೇನೆಂದರೆ ಈ ತಂಡದ ಪರವಾಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾಗಿರುವ ಅನವಶ್ಯಕ ದಾಖಲೆ ಸೃಷ್ಟಿಸಿದ್ದಾರೆ.

ಸಂಜು ಸ್ಯಾಮ್ಸನ್ ಕಳೆದ ಕೆಲವು ವರ್ಷಗಳಿಂದ ಪ್ರದರ್ಶನ ವಿಚಾರಕ್ಕೆ ಚರ್ಚೆಯಲಿದ್ದಾರೆ. ಒಂದು ವರ್ಗ ಸಂಜು ಸ್ಯಾಮ್ಸನ್​ ಅವರಿಗೆ ಭಾರತ ತಂಡದಲ್ಲಿ ಅವಕಾಶ ಕೊಡಲೇಬೇಕು ಎಂದು ಒತ್ತಾಯ ಮಾಡುತ್ತಿರುವ ನಡುವೆಯೆ ಅವರ ಬ್ಯಾಟಿಂಗ್ ಪ್ರದರ್ಶನದಲ್ಲಿ ಏರಿಳಿತ ಮುಂದವರಿದಿದೆ. ಅಂತೆಯೇ ಹಾಲಿ ಆವೃತ್ತಿಯ ಐಪಿಎಲ್​ನ ಮೊದಲೆರಡು ಪಂದ್ಯಗಳಲ್ಲಿ ಚೆನ್ನಾಗಿ ಆಡಿದ್ದ ಅವರು ಮುಂದಿನ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ರಾಜಸ್ಥಾನ್​ ರಾಯಲ್ಸ್​ ತಂಡದ ಪರವಾಗಿ ಅತಿ ಹೆಚ್ಚು ಬಾರಿ ಗೋಲ್ಡನ್​ ಡಕ್​ ಕಳಪೆ ಸಾಧನೆ ಮಾಡಿದ ಅಟಗಾರ ಎನಿಸಿಕೊಂಡಿದ್ದಾರೆ.

ಸಂಜು ಸ್ಯಾಮ್ಸನ್​ ರಾಜಸ್ಥಾನ್​ ರಾಯಲ್ಸ್​ ಪರ ಎಂಟು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಹಿಂದೆ ಈ ದಾಖಲೆ ಮಾಜಿ ಕ್ರಿಕೆಟಿಗ ಹಾಗೂ ದಿವಂಗತ ಶೇನ್​ ವಾರ್ನೆ ಅವರ ಹೆಸರಿನಲ್ಲಿತ್ತು ಈ ದಾಖಲೆ. ಅವರು ಏಳು ಬಾರಿ ರಾಜಸ್ಥಾನ್​ ರಾಯಲ್ಸ್ ಪರ ಶೂನ್ಯಕ್ಕೆ ಔಟಾಗಿದ್ದರು. ಸ್ಟುವರ್ಟ್​ ಬಿನ್ನಿ ಕೂಡ ಇದೇ ರೀತಿ ಏಳು ಬಾರಿ ಶೂನ್ಯಕ್ಕೆ ಔಟಾಗಿದ್ದರು. ಕಳಪೆ ದಾಖಲೆಯಲ್ಲಿ ಅವರಿಬ್ಬರನ್ನೂ ಹಿಂದಕ್ಕೆ ತಳ್ಳಿದ್ದಾರೆ ಸ್ಯಾಮ್ಸನ್​.

ಇದನ್ನೂ ಓದಿ : IPL 2023 : ಸಿಎಸ್​ಕೆ ವಿರುದ್ಧ ಗೆದ್ದ ಖುಷಿಯಲ್ಲಿದ್ದ ಸಂಜು ಸ್ಯಾಮ್ಸನ್​ಗೆ 12 ಲಕ್ಷ ರೂಪಾಯಿ ದಂಡ

ಅಂದ ಹಾಗೆ ಸಂಜು ಸ್ಯಾಮ್ಸನ್​ ಐಪಿಎಲ್ ಇತಿಹಾಸದಲ್ಲಿ ಒಟ್ಟು 10 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. 2016 ಹಾಗೂ 2017ರಲ್ಲಿ ಅವರ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಭಾಗವಾಗಿದ್ದರು. ಈ ವೇಳೆಯೂ ಅವರು ಮೂರು ಬಾರಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದರು. ಸಂಜು ಸ್ಯಾಮ್ಸನ್​ ಆರಂಭದಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡದ ಭಾಗವಾಗಿದ್ದರು. ಆದರೆ, ಆ ತಂಡದಲ್ಲಿ ಆಡುವ ಅವಕಾಶ ಪಡೆದುಕೊಂಡಿರಲಿಲ್ಲ.

ಸಂಜು ಸ್ಯಾಮ್ಸನ್​ 2013ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದಾರೆ. ಹೀಗಾಗಿ ಹಾಲಿ ಆವೃತ್ತಿ ಅವರಿಗೆ 9ನೇ ಐಪಿಎಲ್ ಟೂರ್ನಿ. 2021ರ ಬಳಿಕ ಆರ್​ಆರ್​ ತಂಡದ ಪೂರ್ಣ ಪ್ರಮಾಣದ ನಾಯಕರಾಗಿ ಅವರು ಆಯ್ಕೆಗೊಂಡಿದ್ದಾರೆ. 2022ರಲ್ಲಿ ಸಂಜು ನಾಯಕತ್ವದ ತಂಡ ಫೈನಲ್​ಗೆ ಪ್ರವೇಶ ಮಾಡಿ ರನ್ನರ್​ಅಪ್​ ಆಗಿತ್ತು.

Exit mobile version