ಮುಂಬಯಿ: ಸರ್ಫರಾಜ್ ಖಾನ್(Sarfaraz Khan) ಅವರು ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದರೂ ಭಾರತ ತಂಡಕ್ಕೆ ಮಾತ್ರ ಆಯ್ಕೆಯಾಗುವುದಿಲ್ಲ. ಅವರನ್ನು ಬಿಸಿಸಿಐ ಉದ್ದೇಶ ಪೂರ್ವಕವಾಗಿಯೇ ಕಡೆಗಣಿಸುತ್ತಿದೆ ಎಂದು ಹಲವರು ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ನೆಟ್ ಬ್ಯಾಟಿಂಗ್ ಸರಾಸರಿ ಹೊಂದಿದ್ದರೂ ಅವರಿಗೆ ಏಕೆ ಅನ್ಯಾಯವಾಗುತ್ತಿದೆ ಎಂದು ಮಾಜಿ ಆಟಗಾರ ಸುನೀಲ್ ಗವಾಸ್ಕರ್(Sunil Gavaskar) ಆಯ್ಕೆ ಸಮಿತಿಗೆ ಪ್ರಶ್ನಿಸಿದ್ದರು. ಇದೀಗ ಈ ಎಲ್ಲ ಚರ್ಚೆಗಳ ಮಧ್ಯೆ ಬಿಸಿಸಿಐ(BCCI) ಅಧಿಕಾರಿಯೊಬ್ವರು ಸರ್ಫರಾಜ್ ಆಯ್ಕೆ ವಿಚಾರದಲ್ಲಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ಈ ಹಿಂದೆ ಸರ್ಫರಾಜ್ ಖಾನ್ ಫಿಟ್ನೆಸ್ ಹೊಂದಿಲ್ಲ ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸುವುದು ಕಷ್ಟ ಎಂದು ಹೇಳಲಾಗಿತ್ತು. ಆದರೆ ಆತನಿಗಿಂತ ಹೆಚ್ಚು ತೂಕವಿರುವ ಆಟಗಾರರು ಭಾರತ ತಂಡದಲ್ಲಿದ್ದಾರೆ. ಈ ಎಲ್ಲ ಮಾಹಿತಿಯನ್ನು ನೆಟ್ಟಿಗರು ತಾಳೆ ಮಾಡಿ ಬಿಸಿಸಿಐಯನ್ನು ಟ್ರೋಲ್ ಮಾಡಿದ್ದರು. ಇದಕ್ಕೆ ಅನೇಕ ಮಾಜಿ ಆಟಗಾರರು ಕೂಡ ಕೈಜೋಡಿಸಿದ್ದರು. ಇದೀಗ ಈ ವಿಚಾರದಲ್ಲಿ ಸ್ಪಷ್ಟನೆಯೊಂದನ್ನು ನೀಡಿರುವ ಬಿಸಿಸಿಐ ಅಧಿಕಾರಿಯೊಬ್ಬರು ಸದ್ಯಕ್ಕೆ ಸರ್ಫರಾಜ್ ಖಾನ್ ಭಾರತ ತಂಡಕ್ಕೆ ಆಯ್ಕೆಯಾಗುವ ಯಾವುದೇ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.
“ಕಳೆದ ಮೂರು ರಣಜಿ(ranji trophy) ಸೀಸನ್ಗಳಲ್ಲಿ 900 ಪ್ಲಸ್ ರನ್ ಬಾರಿಸಿರುವ ಆಟಗಾರನೊಬ್ಬನ್ನು ಆಯ್ಕೆಗೆ ಪರಿಗಣಿಸದಿರಲು ಆಯ್ಕೆದಾರರೇನು ಮೂರ್ಖರೇ? ಆತನ ಆಯ್ಕೆಗೆ ಇತರೆ ಮಾನದಂಡಗಳು ಅಡ್ಡಿಯಾಗುತ್ತಿದೆ. ಆದ್ದರಿಂದ ಅವರ ಆಯ್ಕೆ ಸದ್ಯಕ್ಕಂತು ಇಲ್ಲ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಚೇತೇಶ್ವರ್ ಪೂಜಾರ ಅವರನ್ನು ಕೈ ಬಿಟ್ಟಾಗ ಗಾಯಕ್ವಾಡ್, ಜೈಸ್ವಾಲ್ ಜತೆ ಸರ್ಫರಾಜ್ ಕೂಡ ಆಯ್ಕೆ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರನ್ನು ಆಯ್ಕೆ ಮಾಡಲಾಗಲಿಲ್ಲ. ಹೀಗಾಗಿ ಬಿಸಿಸಿಐ ವಿರುದ್ಧ ಹಲವರು ವಿರೋಧ ವ್ಯಕ್ತವಾಗಿತ್ತು.
ಇದನ್ನೂ ಓದಿ Ind vs wi : ಬಿಸಿಸಿಐ ಆಯ್ಕೆಗಾರರಿಗೆ ಇನ್‌ಸ್ಟಾ ಸ್ಟೋರಿ ಮೂಲಕ ಖಡಕ್ ಉತ್ತರ ಕೊಟ್ಟ ಸರ್ಫರಾಜ್!
ಬಿಸಿಸಿಐಗೆ ತಿರುಗೇಟು ನೀಡಿದ ಸರ್ಫರಾಜ್
ಭಾರತ ತಂಡಕ್ಕೆ ಆಯ್ಕೆಯಾಗದೆ ಸಾಕಷ್ಟು ಬೇಸರಗೊಂಡ ಸರ್ಫರಾಜ್ ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಆಯ್ಕೆಗಾರರಿಗೆ ಪ್ರತ್ಯುತ್ತರ ನೀಡಿದ್ದಾರೆ. ತಮ್ಮ ರಣಜಿ ಟ್ರೋಫಿ ಋತುವಿನ ಮುಖ್ಯಾಂಶಗಳ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಾಗಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಆಯ್ಕೆದಾರರಿಗೆ ತೀಕ್ಷ್ಣ ಸಂದೇಶವನ್ನು ಕಳುಹಿಸಿದ್ದಾರೆ. ಅದರ ಮೇಲೆ ಯಾವುದೇ ಶೀರ್ಷಿಕೆ ಇರಲಿಲ್ಲ. ಯಾವುದೂ ಅಗತ್ಯವೂ ಇಲ್ಲ ಎಂಬುದು ಕ್ರಿಕೆಟ್ ಅಭಿಮಾನಿಗಳ ಅಭಿಪ್ರಾಯ.
ಸರ್ಫರಾಜ್ ಖಾನ್ ದೇಶೀಯ ಕ್ರಿಕೆಟ್‌ನಲ್ಲಿ ದೀರ್ಘಕಾಲದಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅವರು 2019-20ರ ಋತುವಿನಲ್ಲಿ 154 ಸರಾಸರಿಯಲ್ಲಿ 928 ರನ್ ಗಳಿಸಿದ್ದರು. ಮುಂದಿನ ಋತುವಿನಲ್ಲಿ ಮುಂಬಯಿ ತಂಡದ ಬ್ಯಾಟರ್ 122.75 ಸರಾಸರಿಯಲ್ಲಿ 982 ರನ್ ಗಳಿಸಿದ್ದರು. 2022/23ರಲ್ಲಿ 556 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಮೂರು ಶತಕಗಳನ್ನೂ ಬಾರಿಸಿದ್ದರು. 35 ಇನಿಂಗ್ಸ್‌ಗಳಲ್ಲಿ 79.65 ಸರಾಸರಿಯಲ್ಲಿ 3505 ರನ್ ಗಳಿಸಿದ್ದಾರೆ ಮತ್ತು 13 ಶತಕಗಳನ್ನು ಗಳಿಸಿದ್ದಾರೆ. ಈ ಅತ್ಯುತ್ತಮ ಬ್ಯಾಟಿಂಗ್ ಅಂಕಿಅಂಶಗಳ ಹೊರತಾಗಿಯೂ, ಸರ್ಫರಾಜ್ ಭಾರತೀಯ ಟೆಸ್ಟ್ ತಂಡದ ಅಂತಿಮ ಆಯ್ಕೆಯಲ್ಲಿ ಸ್ಥಾನ ಪಡೆದಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.