Site icon Vistara News

Ind vs wi : ಬಿಸಿಸಿಐ ಆಯ್ಕೆಗಾರರಿಗೆ ಇನ್‌ಸ್ಟಾ ಸ್ಟೋರಿ ಮೂಲಕ ಖಡಕ್‌ ಉತ್ತರ ಕೊಟ್ಟ ಸರ್ಫರಾಜ್‌!

Sarfaraz Khan

#image_title

ಮುಂಬಯಿ: ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ (Ind vs wi) 16 ಸದಸ್ಯರ ಭಾರತ ತಂಡವನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಕೆರಿಬಿಯನ್‌ ನಾಡಿನಲ್ಲಿ ಭಾರತ ತಂಡವು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅದು ಮುಂದಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಋತುವಿಗೆ ಭಾರತ ತಂಡಕ್ಕೆ ಮೊದಲ ಸರಣಿಯಾಗಿದೆ. ಈ ತಂಡಕ್ಕೆ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಮತ್ತು ಮುಖೇಶ್ ಕುಮಾರ್ ಸೇರ್ಪಡೆಗೊಂಡಿದ್ದಾರೆ. ಆದರೆ, ಕಳೆದ ಮೂರು ರಣಜಿ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸರ್ಫರಾಜ್‌ಖಾನ್‌ ಕರೆ ಹೋಗಿಲ್ಲ. ಇದರಿಂದ ಅವರು ಸಾಕಷ್ಟು ಬೇಸರಗೊಂಡಿದ್ದು ತಮ್ಮ ಇನ್‌ಸ್ಟಾಗ್ರಾಮ್‌ ಮೂಲಕ ಆಯ್ಕೆಗಾರರಿಗೆ ಪ್ರತ್ಯುತ್ತರ ಕೊಟ್ಟಿದ್ದಾರೆ.

ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಮತ್ತು ಮುಖೇಶ್ ಕುಮಾರ್ ಅವರಂತಹ ಯುವ ಆಟಗಾರರು ಕರೆಯನ್ನು ಸ್ವೀಕರಿಸಿದರೂ, ಸರ್ಫರಾಜ್ ಖಾನ್ ಅವರ ಬಗೆಗಿನ ನಿರ್ಲಕ್ಷ್ಯ ಮತ್ತೊಮ್ಮೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಪ್ರಶ್ನಾರ್ಥಕ ಸಂಗತಿಯಾಗಿದೆ. ಹಿರಿಯ ಆಟಗಾರರನೇಕರು ಅದನ್ನು ಪ್ರಶ್ನಿಸಿದ್ದಾರೆ. ಇವೆಲ್ಲದರ ನಡುವೆ ಮೂರನೇ ಬಾರಿಗೆ ತಂಡದಲ್ಲಿ ಅವಕಾಶ ಪಡೆಯಲು ವಿಫಲಗೊಂಡ ಸರ್ಫರಾಜ್ ಇನ್‌ಸ್ಟಾಗ್ರಾಮ್‌ ಸ್ಟೋರಿ ಮೂಲಕ ಬಿಸಿಸಿಐ ಆಯ್ಕೆದಾರರಿಗೆ ಖಡಕ್‌ ಸಂದೇಶವನ್ನು ರವಾನಿಸಿದ್ದಾರೆ.

ಸ್ಥಿರ ಪ್ರದರ್ಶನ

ಸರ್ಫರಾಜ್ ಖಾನ್ ದೇಶೀಯ ಕ್ರಿಕೆಟ್‌ನಲ್ಲಿ ದೀರ್ಘಕಾಲದಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅವರು 2019-20ರ ಋತುವಿನಲ್ಲಿ 154 ಸರಾಸರಿಯಲ್ಲಿ 928 ರನ್ ಗಳಿಸಿದ್ದರು. ಮುಂದಿನ ಋತುವಿನಲ್ಲಿ ಮುಂಬಯಿ ತಂಡದ ಬ್ಯಾಟರ್‌ 122.75 ಸರಾಸರಿಯಲ್ಲಿ 982 ರನ್ ಗಳಿಸಿದ್ದರು. 2022/23ರಲ್ಲಿ 556 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಮೂರು ಶತಕಗಳನ್ನೂ ಬಾರಿಸಿದ್ದರು. 35 ಇನಿಂಗ್ಸ್‌ಗಳಲ್ಲಿ 79.65 ಸರಾಸರಿಯಲ್ಲಿ 3505 ರನ್ ಗಳಿಸಿದ್ದಾರೆ ಮತ್ತು 13 ಶತಕಗಳನ್ನು ಗಳಿಸಿದ್ದಾರೆ. ಈ ಅತ್ಯುತ್ತಮ ಬ್ಯಾಟಿಂಗ್‌ ಅಂಕಿಅಂಶಗಳ ಹೊರತಾಗಿಯೂ, ಸರ್ಫರಾಜ್ ಭಾರತೀಯ ಟೆಸ್ಟ್ ತಂಡದ ಅಂತಿಮ ಆಯ್ಕೆಯಲ್ಲಿ ಸ್ಥಾನ ಪಡೆದಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.

ಸರ್ಫರಾಜ್ ಖಾನ್ ಶುಕ್ರವಾರ ತಮ್ಮ ರಣಜಿ ಟ್ರೋಫಿ ಋತುವಿನ ಮುಖ್ಯಾಂಶಗಳ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಾಗಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಆಯ್ಕೆದಾರರಿಗೆ ತೀಕ್ಷ್ಣ ಸಂದೇಶವನ್ನು ಕಳುಹಿಸಿದ್ದಾರೆ. ಅದರ ಮೇಲೆ ಯಾವುದೇ ಶೀರ್ಷಿಕೆ ಇರಲಿಲ್ಲ. ಯಾವುದೂ ಅಗತ್ಯವೂ ಇಲ್ಲ ಎಂಬುದು ಕ್ರಿಕೆಟ್‌ ಅಭಿಮಾನಿಗಳ ಅಭಿಪ್ರಾಯ.

ಸರ್ಫರಾಜ್ ಖಾನ್ ಅವರನ್ನು ಪದೇ ಪದೇ ಅವಕಾಶ ವಂಚಿತರನ್ನಾಗಿ ಮಾಡುವ ನಿರ್ಧಾರಗಳನ್ನು ಭಾರತ ತಂಡದ ಮಾಜಿ ನಾಯಕ ಸುನೀಲ್‌ ಗವಾಸ್ಕರ್‌ ಪ್ರಶ್ನಿಸಿದ್ದಾರೆ. ಯಾವ ಮಾನದಂಡ ಬಳಸಿ ಆಟಗಾರರನ್ನು ತಂಡಕ್ಕೆ ಸೇರಿಸುತ್ತಿದ್ದೀರಿ ಎಂಬುದಾಗಿ ಪ್ರಶ್ನಿಸಿದ್ದಾರೆ.

ಸರ್ಫರಾಜ್ ಖಾನ್ ಕಳೆದ ಮೂರು ಋತುಗಳಲ್ಲಿ 100 ಸರಾಸರಿಯಲ್ಲಿ ಸ್ಕೋರ್ ಮಾಡುತ್ತಿದ್ದಾರೆ. ತಂಡಕ್ಕೆ ಆಯ್ಕೆಯಾಗಲು ಅವರು ಇನ್ನು ಏನು ಮಾಡಬೇಕು? ಅವರು ಆಡುವ ಇಲೆವೆನ್‌ನಲ್ಲಿ ಸ್ಥಾನ ಪಡೆಯದೇ ಹೋಗಬಹುದು. ಆದರೆ, ಆದರೆ ನೀವು ಅವರನ್ನು ತಂಡಕ್ಕೆ ಆಯ್ಕೆ ಮಾಡದೇ ಇರುವುದು ಸರಿಯಲ್ಲ. ಅವರನ್ನು ಆಯ್ಕೆ ಮಾಡಿಲ್ಲ ಎಂದಾದರೆ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಲು ಯಾವ ಮಾನದಂಡ ಬಳಸಲಾಗುತ್ತದೆ ಎಂಬುದನ್ನು ಪ್ರಶ್ನಿಸಬೇಕಾಗುತ್ತದೆ ಎಂದು ಗವಾಸ್ಕರ್‌ ಸ್ಪೋರ್ಟ್ಸ್ ಟುಡೇ ಜತೆ ಮಾತನಾಡುತ್ತಾ ಅಭಿಪ್ರಾಯ ಹೇಳಿದ್ದರು.

ರಣಜಿ ಟ್ರೋಫಿಯ ಅತ್ಯುತ್ತಮ ಪ್ರದರ್ಶನಗಳನ್ನು ಗುರುತಿಸಲಾಗುತ್ತಿದೆ ಎಂಬುದನ್ನು ಕ್ರಿಕೆಟ್‌ ಜಗತ್ತಿಗೆ ತಿಳಿಸುವ ಅಗತ್ಯವಿದೆ. ಪರಿಗಣಿಸದೇ ಹೋದರೆ ಆಡಿಸುವುದನ್ನೇ ನಿಲ್ಲಿಸುವುದು ಒಳಿತು. ಐಪಿಎಲ್‌ ಆಡಿಸಿ ಅವರನ್ನೇ ಟೆಸ್ಟ್‌ ಕ್ರಿಕೆಟ್‌ಗೆ ಸೂಕ್ತ ಎಂದು ಪರಿಗಣಿಸುವುದು ಸರಿಯಲ್ಲ. ಸೂಕ್ತ ಮಾದರಿಗೆ ಸೂಕ್ತ ಆಟಗಾರರನ್ನೇ ಆಯ್ಕೆ ಮಾಡಬೇಕು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

Exit mobile version