ನವ ದೆಹಲಿ: ಭಾರತದ ಬ್ಯಾಡ್ಮಿಂಟನ್ (Badminton) ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮಂಗಳವಾರ ವಿಶ್ವದ ನಂ.1 ಸ್ಥಾನವನ್ನು ತಲುಪಿದ ದೇಶದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದ ಬ್ಯಾಡ್ಮಿಂಟನ್ ಕ್ಷೇತ್ರದ ಪಾಲಿಗೆ ಇದು ದೊಡ್ಡ ಸಾಧನೆಯಾಗಿದೆ. ಕಳೆದ ವಾರ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಡಬಲ್ಸ್ ಚಿನ್ನದ ಪದಕ ಗೆದ್ದ ನಂತರ ಇವರಿಬ್ಬರು ಈ ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು ಪ್ರಕಾಶ್ ಪಡುಕೋಣೆ, ಸೈನಾ ನೆಹ್ವಾಲ್ ಮತ್ತು ಕಿಡಂಬಿ ಶ್ರೀಕಾಂತ್ ಸಿಂಗಲ್ಸ್ ವಿಭಾಗದಲ್ಲಿ ಈ ಸಾಧನೆ ಮಾಡಿದ್ದರು.
On 🔝 of the 🌏!
— BAI Media (@BAI_Media) October 10, 2023
1️⃣st 🇮🇳 pair to achieve this feat 🫡@himantabiswa | @sanjay091968 | @lakhaniarun1 #BWFWorldRankings#IndiaontheRise#BadmintonTwitter #Badminton pic.twitter.com/B8t9cmEeZc
ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಅಡ್ರಿಯಾಂಟೊ ಅವರನ್ನು ಹಿಂದಿಕ್ಕಿ ಭಾರತದ ಜೋಡಿ ವಿಶ್ವದ ಅಗ್ರ ಶ್ರೇಯಾಂಕಿತ ತಂಡವಾಗಿ ಹೊರಹೊಮ್ಮಿತು. ಅವರು ಒಟ್ಟು 92,411 ಅಂಕಗಳನ್ನು ಹೊಂದಿದ್ದಾರೆ. ಏಷ್ಯನ್ ಗೇಮ್ಸ್ ಫೈನಲ್ನಲ್ಲಿ ದಕ್ಷಿಣ ಕೊರಿಯಾದ ಸೋಲ್ ಗ್ಯು ಚೋಯ್ ಮತ್ತು ವೊನ್ ಹೋ ಕಿಮ್ ಅವರನ್ನು ಸೋಲಿಸಿ ಸ್ವರ್ಣ ಪದಕ ಗೆಲ್ಲುವ ಜತೆಗೆ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ತಲುಪಿದ್ದಾರೆ.
ಸಾತ್ವಿಕ್-ಚಿರಾಗ್ ಅವರಿಗಿಂತ ಮೊದಲು, ವಿ ದಿಜು / ಜ್ವಾಲಾ ಗುಟ್ಟಾ ಮತ್ತು ಜ್ವಾಲಾ ಗುಟ್ಟಾ / ಅಶ್ವಿನಿ ಪೊನ್ನಪ್ಪ ಮಾತ್ರ ಬಿಡಬ್ಲ್ಯೂಎಫ್ ಶ್ರೇಯಾಂಕದಲ್ಲಿ ಡಬಲ್ಸ್ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಭಾರತೀಯ ಜೋಡಿಗಳೆನಿಸಿಕೊಂಡಿದ್ದರು. ಮಿಶ್ರ ಡಬಲ್ಸ್ ಜೋಡಿ ಒಮ್ಮೆ ವಿಶ್ವ ರ್ಯಾಂಕಿಂಗ್ನಲ್ಲಿ -6 ನೇ ಸ್ಥಾನ ಪಡೆದಿದ್ದರೆ, ಜ್ವಾಲಾ ಮತ್ತು ಪೊನ್ನಪ್ಪ ವೃತ್ತಿಜೀವನದ ಅತ್ಯುತ್ತಮ 10ನೇ ಶ್ರೇಯಾಂಕ ಪಡೆದುಕೊಂಡಿದ್ದರು.
ಸಾತ್ವಿಕ್-ಚಿರಾಗ್ ಹೊರತುಪಡಿಸಿ, ಉಳಿದವರು ಈ ವಾರದ ಶ್ರೇಯಾಂಕದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಏಷ್ಯನ್ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರೂ ಎಚ್.ಎಸ್.ಪ್ರಣಯ್ ವಿಶ್ವ ರ್ಯಾಂಕಿಂಗ್ನಲ್ಲಿ 8ನೇ ಸ್ಥಾನಕ್ಕೆ ಕುಸಿದಿದ್ದಾರೆ. ಲಕ್ಷ್ಯ ಸೇನ್ ವಿಶ್ವ ರ್ಯಾಂಕಿಂಗ್ನ 14ಕ್ಕೆ ಕುಸಿದರೆ, ಕಿಡಂಬಿ ಶ್ರೀಕಾಂತ್ ಒಂದು ಸ್ಥಾನ ಮೇಲೇರಿ 20ಕ್ಕೆ ತಲುಪಿದ್ದಾರೆ.
ಇದನ್ನೂ ಓದಿ : Asian Games : ಬೆಳ್ಳಿಯ ಪದಕ ಗೆದ್ದು ಏಷ್ಯನ್ ಗೇಮ್ಸ್ನಲ್ಲಿ ವಿನೂತನ ಸಾಧನೆ ಮಾಡಿದ ಪುರುಷರ ಬ್ಯಾಡ್ಮಿಂಟನ್ ತಂಡ
ಟಾಪ್ 10ರ ಸಮೀಪಕ್ಕೆ ಬಂದ ಪಿ.ವಿ.ಸಿಂಧು
ಏಷ್ಯಾಡ್ ಕ್ವಾರ್ಟರ್ ಫೈನಲ್ನಲ್ಲಿ ಸೋತರೂ, ಪಿವಿ ಸಿಂಧು ಶ್ರೇಯಾಂಕದಲ್ಲಿ ಎರಡು ಸ್ಥಾನಗಳನ್ನು ಮೇಲಕ್ಕೆ ಏರಿದ್ದಾರೆ. ಹೊಸ ಪಟ್ಟಿಯಲ್ಲಿ 13 ಆಟಗಾರ್ತಿಯಾಗಿದ್ದಾರೆ. ಆಕರ್ಷಿ ಕಶ್ಯಪ್ ಪಟ್ಟಿಯ 41 ನೇ ಸ್ಥಾನ ಪಡೆದು ಮಹಿಳಾ ಸಿಂಗಲ್ಸ್ ನಲ್ಲಿ ಮುಂದಿನ ಅತ್ಯುತ್ತಮ ಭಾರತೀಯರಾಗಿದ್ದಾರೆ. ಇದಲ್ಲದೆ ವಿಭಾಗದಲ್ಲಿ ಯಾವುದೇ ಗಮನಾರ್ಹ ಲಾಭ / ನಷ್ಟ ಕಂಡುಬಂದಿಲ್ಲ. ಮಹಿಳೆಯರ ಡಬಲ್ಸ್ನಲ್ಲಿ ತ್ರಿಸಾ ಜೊಲ್ಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ವಿಶ್ವ ರ್ಯಾಂಕ್ 16ಕ್ಕೆ ಏರಿದ್ದಾರೆ. ಮಿಶ್ರ ಡಬಲ್ಸ್ನಲ್ಲಿ ರೋಹನ್ ಕಪೂರ್ ಮತ್ತು ಸಿಕ್ಕಿ ರೆಡ್ಡಿ 38ರಲ್ಲಿ ಭಾರತದ ಅತ್ಯುತ್ತಮ ಆಟಗಾರರಾಗಿದ್ದಾರೆ.