ದೋಹಾ : ಮಂಗಳವಾರ ನಡೆದ ಫಿಫಾ ವಿಶ್ವ ಕಪ್ ಫುಟ್ಬಾಲ್ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡದ ವಿರುದ್ಧದ ಸೌದಿ ಅರೇಬಿಯಾ ೨-೧ ಗೋಲ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಅನಿರೀಕ್ಷಿತ ಹಾಗೂ ಅಚ್ಚರಿಯ ವಿಜಯದಿಂದ ಸಂತಸಗೊಂಡಿರುವ ಸೌದಿ ಅರೇಬಿಯಾದ ರಾಜ ಸಲ್ಮಾನ್, ಬುಧವಾರ ದೇಶಾದ್ಯಂತ ಸರಕಾರಿ ರಜೆ ಘೋಷಿಸಿದ್ದಾರೆ. ಖಾಸಗಿ ಕಂಪನಿಗಳ ಉದ್ಯೋಗಿಗಳೂ ರಜೆ ತೆಗೆದುಕೊಂಡು ಸಂಭ್ರಮಾಚರಣೆ ಮಾಡುವಂತೆ ಅವರು ಸೂಚನೆ ನೀಡಿದ್ದಾರೆ. ಶಾಲೆ, ಕಾಲೇಜುಗಳಿಗೂ ನಾಳೆ ರಜೆ ನೀಡಲಾಗಿದೆ.
ಅರ್ಜೆಂಟೀನಾ ತಂಡವನ್ನು ಸೌದಿ ಅರೇಬಿಯಾ ಬಳಗ ಮಣಿಸುತ್ತಿದ್ದಂತೆ ಆ ದೇಶದಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ರಾಜ ಸಲ್ಮಾನ್ ಕೂಡ ಅದೇ ಖುಷಿಯಲ್ಲಿ ರಜೆ ಘೋಷಿಸಿಬಿಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೊಲ್ಲಿ ರಾಷ್ಟ್ರಗಳ ಶಾಲೆ- ಕಾಲೇಜುಗಳಲ್ಲಿ ಅಂತಿಮ ಪರೀಕ್ಷೆ ನಡೆಯುತ್ತಿದ್ದು, ರಜೆಯಿಂದ ರದ್ದಾಗಿರುವ ಪರೀಕ್ಷೆಗಳನ್ನು ಮರು ನಿಗದಿ ಮಾಡಲಾಗಿದೆ.
ಸೌದಿ ಅರೇಬಿಯಾದ ಮನರಂಜನಾ ಪ್ರಾಧಿಕಾರದ ಮುಖ್ಯಸ್ಥರಾಗಿರುವ ಟರ್ಕಿ ಅಲ್ ಶೇಖ್ ಗೆಲುವಿನ ಸಂಭ್ರಮಕ್ಕೆ ಇಂಬು ಕೊಡುವಂತೆ ಮಂಗಳವಾರ ಅಲ್ಲಿನ ಥಿಯೇಟರ್‌ಗಳು, ಪಾರ್ಕ್‌ಗಳು ಹಾಗೂ ಮನರಂಜನಾ ಕೇಂದ್ರಗಳಿಗೆ ಉಚಿತ ಪ್ರವೇಶ ಘೋಷಿಸಿದ್ದಾರೆ. ಬುಧವಾರಕ್ಕೂ ಅದು ಮುಂದುವರಿಯುವ ಸಾಧ್ಯತೆಗಳಿವೆ.
ಇದನ್ನೂ ಓದಿ | FIFA World Cup | ಮೆಸ್ಸಿಯ ತಂಡಕ್ಕೆ ಆರಂಭದಲ್ಲೇ ಆಘಾತ, ಸೌದಿ ಅರೇಬಿಯಾ ವಿರುದ್ಧ 2-1 ಗೋಲ್‌ಗಳ ಸೋಲು