Site icon Vistara News

Hockey: ಒಲಿಂಪಿಕ್ಸ್ ಕ್ವಾಲಿಫೈಯರ್ಸ್‌; ಮಹಿಳಾ ಹಾಕಿ ತಂಡಕ್ಕೆ ಸವಿತಾ ನಾಯಕಿ

Indian Women's Hockey Squad

ನವದೆಹಲಿ: ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​(Paris Olympics 2024) ಕ್ರೀಡಾಕೂಟಕ್ಕೆ ಈಗಾಗಲೇ ಎಲ್ಲ ಕ್ರೀಡಾಪಟುಗಳು ಭರ್ಜರಿ ತಯಾರಿ ಆರಂಭಿಸಿದ್ದಾರೆ. ಇದೀಗ ರಾಂಚಿಯಲ್ಲಿ ಜನವರಿ 13 ರಿಂದ 19ರವರೆಗೆ ನಡೆಯಲಿರುವ ಒಲಿಂಪಿಕ್‌ ಕ್ವಾಲಿಫೈಯರ್ಸ್​ ಹಾಕಿ(FIH Hockey Olympic Qualifiers) ಟೂರ್ನಿಗೆ ಭಾರತ ಮಹಿಳಾ ಹಾಕಿ ತಂಡ(Indian Women’s Hockey Team) ಪ್ರಕಟಗೊಂಡಿದೆ.

ಅನುಭವಿ ಗೋಲ್​ ಕೀಪರ್​ ಸವಿತಾ ಪೂನಿಯಾ(Savita Punia) ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ವಂದನಾ ಕಟಾರಿಯಾ(Vandana Katariya) ಉಪನಾಯಕಿಯಾಗಿದ್ದಾರೆ. ಒಟ್ಟು 18 ಆಟಗಾರ್ತಿಯರ ತಂಡ ಇದಾಗಿದೆ. ತಂಡವನ್ನು ಹಾಕಿ ಇಂಡಿಯಾ ಶನಿವಾರ ಪ್ರಕಟಿಸಿದೆ. ಟೊಕಿಯೋ ಒಲಿಂಪಿಕ್ಸ್​ನಲ್ಲಿ ತಂಡದ ನಾಯಕಿಯಾಗಿದ್ದ ರಾಣಿ ರಾಮ್​ಪಾಲ್​ ಒಲಿಂಪಿಕ್ಸ್​ ಬಳಿಕ ಭಾರತ ತಂಡದದಲ್ಲಿ ಕಾಣಿಸಿಕೊಂಡಿಲ್ಲ. ಒಲಿಂಪಿಕ್ಸ್​ ಕ್ವಾಲಿಫೈಯರ್ಸ್​ನಲ್ಲಿಯೂ ಅವರ ಹೆಸರು ಇಲ್ಲದನ್ನು ನೋಡುವಾಗ ಅವರು ಹಾಕಿಯಿಂದ ದೂರ ಉಳಿದಂತೆ ಕಾಣುತ್ತಿದೆ.

ಭಾರತ ತಂಡ ‘ಬಿ’ ಗುಂಪಿನಲ್ಲಿದ್ದು, ಈ ಗುಂಪಿನಲ್ಲಿ ನ್ಯೂಜಿಲ್ಯಾಂಡ್​, ಇಟಲಿ ಮತ್ತು ಅಮೆರಿಕ ಕೂಡ ಕಾಣಿಸಿಕೊಂಡಿದೆ. ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಪಡೆದು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಭಾರತ ಪ್ರಮುಖ ಗುರಿಯಾಗಿದೆ. ಇತ್ತೀಚಿನ ಟೂರ್ನಿಗಳಲ್ಲಿ ಭಾರತ ತಂಡದ ಪ್ರದರ್ಶನ ನೋಡುವಾಗ ಈ ಕೂಟದಲ್ಲೂ ಶ್ರೇಷ್ಠ ಪ್ರದರ್ಶನ ತೋರುವ ನಂಬಿಕೆ ಇದೆ. ಯುವ ಮತ್ತು ಅನುಭವಿ ಆಟಗಾರ್ತಿರಯ ಉತ್ತಮ ಸಂಯೋಜನೆ ಇದೆ.

ತಂಡದ ಮೇಲೆ ಪೂರ್ಣ ವಿಶ್ವಾಸ

‘ಒಲಿಂಪಿಕ್ಸ್ ಅರ್ಹತೆಯಲ್ಲಿ ಎಫ್‌ಐಎಚ್‌ ಹಾಕಿ ಒಲಿಂಪಿಕ್‌ ಕ್ವಾಲಿಯರ್ಸ್‌ ಮಹತ್ವಪೂರ್ಣ ಟೂರ್ನಿಯಾಗಿದೆ. ನಮ್ಮ ತಂಡದ ಆಟಗಾರ್ತಿಯರು ನಿರೀಕ್ಷೆಗೆ ತಕ್ಕಂತೆ ಆಡುವ ವಿಶ್ವಾಸವಿದೆ. ಎಲ್ಲ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ, ಕೌಶಲ ಮತ್ತು ಅನುಭವ ಹೊಂದಿರುವ ಸಮತೋಲನದ ತಂಡವನ್ನು ಆಯ್ಕೆಮಾಡಿದ್ದೇವೆ’ ಎಂದು ತಂಡದ ಕೋಚ್‌ ಯಾನೆಕ್ ಶೋಪ್ಮನ್ ತಿಳಿಸಿದ್ದಾರೆ.

ಇದನ್ನೂ ಓದಿ Asian Champions hockey: ಅಟ್ಟಾರಿ-ವಾಘಾ ಗಡಿ ದಾಟಿ ಬಂದ ಪಾಕ್ ಹಾಕಿ ಆಟಗಾರರು

ಅಮೆರಿಕ ಮೊದಲ ಎದುರಾಳಿ

ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಲಿದೆ. ಈ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಇತ್ತಂಡಗಳ ಈ ಪಂದ್ಯ ಜನವರಿ 13ರಂದು ನಡೆಯಲಿದೆ. ಮರುದಿನ ಅಂದರೆ ಜ. 14ರಂದು ನ್ಯೂಜಿಲ್ಯಾಂಡ್​ ವಿರುದ್ಧ ಕಣಕ್ಕಿಳಿಯಲಿದೆ. ಗುಂಪು ಹಂತದ ಅಂತಿಮ ಪಂದ್ಯವನ್ನು ಜ.16ರಂದು ಇಟಲಿ ವಿರುದ್ಧ ಆಡಲಿದೆ.

ಭಾರತ ತಂಡ

ಗೋಲ್‌ ಕೀಪರ್ಸ್‌: ಸವಿತಾ ಪೂನಿಯಾ (ನಾಯಕಿ), ಬಿಚು ದೇವಿ ಕರಿಬಮ್.

ಡಿಫೆಂಡರ್ಸ್‌: ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಮೋನಿಕಾ.

ಮಿಡ್‌ಫೀಲ್ಡರ್ಸ್: ನಿಶಾ, ವೈಷ್ಣವಿ ವಿಠ್ಠಲ್ ಫಾಲ್ಕೆ, ನೇಹಾ, ನವನೀತ್ ಕೌರ್‌, ಸಲೀಮಾ ಟೇಟೆ, ಸೋನಿಕಾ, ಜ್ಯೋತಿ, ಬ್ಯೂಟಿ ಡುಂಗ್‌ಡುಂಗ್.

ಫಾರ್ವರ್ಡ್ಸ್‌: ಲಾಲ್ರೆಮ್ಸಿಯಾನಿ, ಸಂಗೀತಾ ಕುಮಾರಿ, ದೀಪಿಕಾ ಮತ್ತು ವಂದನಾ ಕಟಾರಿಯಾ.

Exit mobile version