ಗ್ರಾಸ್ ಐಲೆಟ್ (ಸೇಂಟ್ ಲೂಸಿಯಾ): ಸೂಪರ್-8 ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಸ್ಕಾಟ್ಲೆಂಡ್(SCO vs AUS) ತಂಡ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಅಂತರದ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಆಸ್ಟ್ರೇಲಿಯಾದ ಈ ಗೆಲುವಿನಿಂದಾಗಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಸೂಪರ್-8ಗೆ ಪ್ರವೇಶ ಪಡೆಯುವಂತಾಯಿತು. ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ‘ಬಿ’ ಗುಂಪಿನಲ್ಲಿ ತಲಾ 5 ಅಂಕ ಪಡೆದಿದ್ದರೂ ಕೂಡ ರನ್ ರೇಟ್ ಆಧಾರದಲ್ಲಿ ಇಂಗ್ಲೆಂಡ್ ಮುಂದಿದ್ದ ಕಾರಣ ಈ ಲಾಭ ಜಾಸ್ ಬಟ್ಲರ್ ಪಡೆಗೆ ಲಭಿಸಿತು.
ಇಲ್ಲಿನ ಸೇಂಟ್ ಲೂಸಿಯಾದ ಡ್ಯಾರೆನ್ ಶಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 180 ರನ್ಗಳ ಬೃಹತ್ ಮೊತ್ತ ಪೇರಿಸಿತು. ಈ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 19.4 ಓವರ್ಗಳಲ್ಲಿ 5 ವಿಕೆಟ್ಗೆ 186 ರನ್ ಬಾರಿಸಿ ಗೆಲುವು ದಾಖಲಿಸಿತು. ಆಸೀಸ್ ಬ್ಯಾಟಿಂಗ್ ಸರದಿಯಲ್ಲಿ ಆರಂಭಿಕ ಆಟಗಾರ ಟ್ರಾವಿಸ್ ಹೆಡ್(68) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಮಾರ್ಕಸ್ ಸ್ಟೋಯಿನಿಸ್(59) ಅರ್ಧಶತಕ ಬಾರಿಸಿ ಮಿಂಚಿದರು. ಉಳಿದಂತೆ ಟಿಮ್ ಡೇವಿಡ್ ಅಜೇಯ 24 ರನ್ ಬಾರಿಸಿದರು. ಡೇವಿಡ್ ವಾರ್ನರ್(1) ಮತ್ತು ನಾಯಕ ಮಿಚೆಲ್ ಮಾರ್ಷ್(8) ಮತ್ತೆ ವಿಫಲರಾದರು.
ಪಂದ್ಯದ ತಿರುವು
17 ಓವರ್ ತನಕ ಪಂದ್ಯ ಸ್ಕಾಟ್ಲೆಂಡ್ ತಂಡದ ಪರ ಇತ್ತು. ಆದರೆ 18ನೇ ಓವರ್ನಲ್ಲಿ ಪಂದ್ಯದ ಚಿತ್ರಣವೇ ಬದಲಾಯಿತು. ಬ್ರಾಡ್ ವೀಲ್ ಓವರ್ನಲ್ಲಿ ಕ್ಯಾಮರೂನ್ ಗ್ರೀನ್ ಹ್ಯಾಟ್ರಿಕ್ ಬೌಂಡರಿ ಬಾರಿಸಿ ಒಟ್ಟು 13 ರನ್ ಕಸಿದರು. ಇದಕ್ಕೂ ಮುನ್ನ 2 ಓವರ್ ನಡೆಸಿ ಒಂದು ಮೇಡನ್ ಸಹಿತ ವಿಕೆಟ್ ಕಿತ್ತಿದ್ದ ಬ್ರಾಡ್ ವೀಲ್ ಈ ಓವರ್ನಲ್ಲಿ ದುಬಾರಿಯಾದರು. ಇದು ಸ್ಕಾಟ್ಲೆಂಡ್ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಒಂದೊಮ್ಮೆ ಈ ಓವರ್ ಕಂಟ್ರೋಲ್ ಆಗುತ್ತಿದ್ದರೆ ಸ್ಕಾಟ್ಲೆಂಡ್ಗೆ ಗೆಲುವಿನ ಅವಕಾಶ ಇರುತ್ತಿತ್ತು.
ಇದನ್ನೂ ಓದಿ T20 World Cup 2024 Super 8: ಸೂಪರ್-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್ ಮೊದಲ ಎದುರಾಳಿ
ಮೊದಲು ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್ ಬಿರುಸಿನ ಆಟಕ್ಕೆ ಒತ್ತು ನೀಡಿ ದೊಡ್ಡ ಮೊತ್ತವನ್ನು ಕಲೆಹಾಕಿತು. ಆರಂಭಿಕ ಆಟಗಾರ ಜಾರ್ಜ್ ಮುನ್ಸಿ ಆರಂಭದಿಂದಲೇ ಆಸೀಸ್ ಬೌಲರ್ಗಳ ಮೇಲೆರಗಿ ಮೂರು ಸಿಕ್ಸರ್ ಮತ್ತು 2 ಸಿಕ್ಸರ್ ನೆರವಿನಿಂದ 35 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ವಿಕೆಟ್ ಪತನದ ಬಳಿಕ ಬಂದ ಬ್ರಾಂಡನ್ ಮೆಕ್‌ಮುಲ್ಲೆನ್ ಕೂಡ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಗಮನಸೆಳೆದರು. ಕೇವಲ 34 ಎಸೆತಗಳಿಂದ 60 ರನ್ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಇವರ ಈ ಸೊಗಸಾದ ಬ್ಯಾಟಿಂಗ್ ವೇಳೆ ಬರೋಬ್ಬರಿ 6 ಸಿಕ್ಸರ್ ಮತ್ತು 2 ಬೌಂಡರಿ ಸಿಡಿಯಿತು. ಇವರಿಗೆ ಮತ್ತೊಂದು ತುದಿಯಲ್ಲಿ ನಾಯಕ ರಿಚಿ ಬೆರಿಂಗ್ಟನ್ ಕೂಡ ಉತ್ತಮ ಸಾಥ್ ನೀಡಿದರು. ಬೆರಿಂಗ್ಟನ್ 31 ಎಸೆತಗಳಿಂದ 42 ರನ್ ಬಾರಿಸಿ ಅಜೇಯರಾಗಿ ಉಳಿದರು. ಆದರೆ ಪಂದ್ಯ ಸೋತ ಕಾರಣ ಇವರ ಬ್ಯಾಟಿಂಗ್ ಸಾಹಸ ವ್ಯರ್ಥಗೊಂಡಿತು. ಆಸೀಸ್ ಪರ ಗ್ಲೆನ್ ಮ್ಯಾಕ್ಸ್ವೆಲ್ 44 ರನ್ ವೆಚ್ಚದಲ್ಲಿ 2 ವಿಕೆಟ್ ಕಿತ್ತರು.