Site icon Vistara News

WPL 2024 : ಮುಂಬಯಿ ತಂಡಕ್ಕೆ ಎರಡನೇ ಜಯ, ಗುಜರಾತ್​​ಗೆ ಮುಖಭಂಗ

Mumbai Indians

ಬೆಂಗಳೂರು : ಹಾಲಿ ಚಾಂಪಿಯನ್ ಮುಂಬಯಿ ಇಂಡಿಯನ್ಸ್​ ತಂಡಕ್ಕೆ ಡಬ್ಲ್ಯುಪಿಎಲ್​ನಲ್ಲಿ (WPL 2024) ಎರಡನೇ ಜಯ ಲಭಿಸಿದೆ. ಗುಜರಾತ್​ ಜೈಂಟ್ಸ್​ ತಂಡದ ವಿರುದ್ಧ 5 ವಿಕೆಟ್​ಗಳ ಅಮೋಘ ಜಯ ದಾಖಲಿಸಿದೆ. ಈ ಮೂಲಕ ಐದು ತಂಡಗಳ ಟೂರ್ನಿಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಏತನ್ಮಧ್ಯೆ ಕಳೆದ ಬಾರಿಯೂ ಕಳಪೆ ಪ್ರದರ್ಶನ ನೀಡಿದ್ದ ಗುಜರಾತ್​ ತಂಡ ಸೋಲಿನೊಂದಿಗೆ ಶುಭಾರಂಭ ಮಾಡಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಗುಜರಾತ್ ತಂಡ ಉತ್ತಮ ಆರಂಭ ಪಡೆಯದ ಕಾರಣ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 126 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಮುಂಬಯಿ ತಂಡ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್​ ನಷ್ಟ ಮಾಡಿಕೊಂಡು 129 ರನ್ ಬಾರಿಸಿ ಗೆಲುವು ಸಾಧಿಸಿತು.

ಮುಂಬಯಿ ತಂಡದ ಯಸ್ತಿಕಾ ಮತ್ತು ಹೇಲಿ ಮ್ಯಾಥ್ಯೂ ತಲಾ 7 ರನ್​ಗಳಿಗೆ ಔಟಾಗುವ ಮೂಲಕ ಹಿನ್ನಡೆಗೆ ಕಾರಣರಾದರು. ನ್ಯಾಟ್​ ಸೀವರ್​ ಕೂಡ 22 ರನ್​ ಬಾರಿಸಿ ಔಟಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಹರ್ಮನ್​ಪ್ರೀತ್ ಕೌರ್​ 41 ಎಸೆತಕ್ಕೆ 46 ಹಾಗೂ ಅಮೇಲಿಯಾ ಕೆರ್​ 25 ಎಸೆತಕ್ಕೆ 31 ರನ್ ಬಾರಿಸಿ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು.

ಇದನ್ನೂ ಓದಿ : Rohit Sharma : ಕೊಹ್ಲಿ, ಸಚಿನ್​ ಮಾಡಿದ ವಿಶೇಷ ಸಾಧನೆ ಮಾಡಿದ ರೋಹಿತ್ ಶರ್ಮಾ

ಮೊದಲು ಬ್ಯಾಟ್ ಮಾಡಿದ ಗುಜರಾತ್​ ಪರ ಬೆತ್​ ಮೂನಿ 24 ರನ್ ಬಾರಿಸಿದರು. ಅವರು ಉತ್ತಮ ಆರಂಭ ತಂದುಕೊಟ್ಟರೂ ಉಳಿದವರು ಕಳಪೆ ಬ್ಯಾಟಿಂಗ್ ಮಾಡಿದರು. ವೇದಾ ಕೃಷ್ಣ ಮೂರ್ತಿ ಶೂನ್ಯಕ್ಕೆ ಔಟಾದರೆ ಹರ್ಲಿನ್ ಡಿಯೋಲ್ 8 ರನ್​ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಆ್ಯಶ್ಲೆ ಗಾರ್ಡ್​ನರ್​ 15 ಹಾಗೂ ಕ್ಯಾಥ್ರಿನ್ ಬ್ರೈಸ್​ 25 ರನ್​ ಬಾರಿಸಿ ತಂಡದ ಮರ್ಯಾದೆ ಕಾಪಾಡಿದರು. ಅಂತಿಮವಾಗಿ ತನುಜಾ ಕನ್ವನ್​ 21 ಎಸೆತಕ್ಕೆ 28 ರನ್ ಬಾರಿಸಿ ತಂಡದ ಮರ್ಯಾದೆ ಕಾಪಾಡಿದರು.

Exit mobile version