Site icon Vistara News

RCB v/s GT ಪಂದ್ಯದ ವೇಳೆ ಭದ್ರತಾ ವೈಫಲ್ಯ: 240 ಸಿಸಿಟಿವಿಗಳನ್ನು ನಿಷ್ಕ್ರಿಯಗೊಳಿಸಿದ್ದೇಕೆ? ಹೊರಬಿತ್ತು ಶಾಕಿಂಗ್‌ ಸತ್ಯ!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 24ರಂದು ನಡೆದ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಹೈ-ಪ್ರೊಫೈಲ್ ಪಂದ್ಯಕ್ಕೂ ಮುನ್ನ ಭಾರಿ ಭದ್ರತಾ ಲೋಪ ಉಂಟಾಗಿದೆ. ಕ್ರೀಡಾಂಗಣದ ಸುರಕ್ಷತೆಯ ದೃಷ್ಟಿಯಿಂದ ಅಳವಡಿಸಲಾಗಿದ್ದ ಸುಮಾರು 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಇಬ್ಬರು ಸಿಬ್ಬಂದಿಗಳು ಉದ್ದೇಶಪೂರ್ವಕವಾಗಿ ನಿಷ್ಕ್ರಿಯಗೊಳಿಸಿದ್ದಾರೆ. ಪಂದ್ಯದ ವೇಳೆ ಸಾವಿರಾರು ಪ್ರೇಕ್ಷಕರು ಸೇರುವ ಇಷ್ಟು ದೊಡ್ಡ ಕ್ರೀಡಾಂಗಣದಲ್ಲಿ ಏಕಾಏಕಿ ಕ್ಯಾಮೆರಾಗಳು ಸ್ಥಗಿತಗೊಂಡಿದ್ದು ಪೊಲೀಸರು ಮತ್ತು ಕ್ರೀಡಾ ಅಭಿಮಾನಿಗಳಲ್ಲಿ ಭಾರಿ ಆತಂಕ ಮೂಡಿಸಿತ್ತು.

ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಜುನಾಥ್ ಮತ್ತು ಅಬ್ದುಲ್ ಕಲಾಂ ಎಂಬ ಇಬ್ಬರು ಸಿಬ್ಬಂದಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆಯ ವೇಳೆ ಇವರು ಹಳೆಯ ಪ್ರವೇಶ ಕಾರ್ಡ್ ಬಳಸಿ ಗುಟ್ಟಾಗಿ ಸರ್ವರ್ ರೂಂಗೆ ನುಗ್ಗಿರುವುದು ಮತ್ತು ಅಲ್ಲಿನ ನೆಟ್‌ವರ್ಕ್ ವೈರ್‌ಗಳನ್ನು ಕತ್ತರಿಸಿ ಸಿಸಿಟಿವಿ ಸಂಪರ್ಕ ಕಟ್ ಮಾಡಿರುವುದು ದೃಶ್ಯಗಳಲ್ಲಿ ಪತ್ತೆಯಾಗಿದೆ. ಈ ಘಟನೆಯಿಂದಾಗಿ ಕ್ರೀಡಾಂಗಣದ ಪ್ರವೇಶ ದ್ವಾರಗಳು ಮತ್ತು ಕಾರ್ಪೊರೇಟ್ ಸ್ಟ್ಯಾಂಡ್‌ಗಳು ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸ್ವಲ್ಪ ಸಮಯದವರೆಗೆ ಯಾವುದೇ ಕಣ್ಗಾವಲು ಇಲ್ಲದಂತಾಗಿತ್ತು.

ಇಷ್ಟೊಂದು ದೊಡ್ಡ ಮಟ್ಟದ ಅಪಾಯಕಾರಿ ಕೆಲಸ ಮಾಡಲು ಕಾರಣವೇನು ಎಂದು ವಿಚಾರಿಸಿದಾಗ ಶಾಕಿಂಗ್ ಸತ್ಯ ಹೊರಬಿದ್ದಿದೆ. ಈ ಸಿಬ್ಬಂದಿಗಳಿಗೆ ಕೆಲಸ ನೀಡಿದ್ದ ಸಂಸ್ಥೆಯಿಂದ ಬರಬೇಕಿದ್ದ ಸುಮಾರು 10 ಲಕ್ಷ ರೂಪಾಯಿ ಬಾಕಿ ಹಣ ಪಾವತಿಯಲ್ಲಿ ವಿಳಂಬವಾಗಿತ್ತು. ಇದರಿಂದ ಬೇಸರಗೊಂಡು ಕಂಪನಿಗೆ ತೊಂದರೆ ಕೊಡಲು ಈ ರೀತಿ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಭದ್ರತಾ ಅಧಿಕಾರಿಗಳು ತಕ್ಷಣವೇ ಬ್ಯಾಕಪ್ ವ್ಯವಸ್ಥೆಯ ಮೂಲಕ ಕಣ್ಗಾವಲನ್ನು ಪುನಃಸ್ಥಾಪಿಸಿದ್ದರಿಂದ ಪಂದ್ಯಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಸದ್ಯ ಈ ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

Exit mobile version