Site icon Vistara News

ಕ್ರಿಕೆಟ್‌ಗೆ ವಿದಾಯ ಹೇಳಲು ಹೊರಟ ಸೆಹ್ವಾಗ್‌ಗೆ ಧೈರ್ಯ ತುಂಬಿದ್ದು ಸಚಿನ್

ನವ ದೆಹಲಿ: ತಮ್ಮನ್ನು 2008ರಲ್ಲಿ ತಂಡದಿಂದ ಡ್ರಾಪ್‌ ಮಾಡಿದಾಗ ಕ್ರಿಕೆಟ್‌ಗೆ ವಿದಾಯ ಹೇಳಬೇಕು ಅಂದುಕೊಂಡಿದ್ದರಂತೆ ವಿರೇಂದ್ರ ಸೆಹ್ವಾಗ್‌. ಹೌದು! 2008ರಲ್ಲಿ ಮಹೇಂದ್ರ ಸಿಂಗ್‌ ಧೋನಿ ಭಾರತ ತಂಡದ ಕ್ಯಾಪ್ಟನ್‌ ಆಗಿದ್ದಾಗ ಆಸ್ಟ್ರೇಲಿಯಾ ಟೂರ್‌ಗೆ ವಿರೇಂದ್ರ ಸೆಹ್ವಾಗ್‌ರನ್ನು ಆಸ್ಟ್ರೇಲಿಯಾ ಟೂರ್‌ನಿಂದ ಡ್ರಾಪ್‌ ಮಾಡಿದ್ದರು. ಈ ಬಗ್ಗೆ ವಿರೇಂದ್ರ ಸೆಹ್ವಾಗ್‌ ಮುಕ್ತವಾಗಿ ಮಾತನಾಡಿದ್ದಾರೆ.

ಭಾರತದ ಶ್ರೇಷ್ಠ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಿರೇಂದ್ರ ಸೇಹ್ವಾಗ್‌ ತಮ್ಮ ಅಗ್ರೆಸಿವ್‌ ಆಟಕ್ಕೆ ಹೆಸರಾದವರು. ಸೆಹ್ವಾಗ್‌ ಏನಿದ್ದರೂ ಬೌಂಡರಿಗಳಲ್ಲೇ ಕಮಾಲ್‌ ಮಾಡುವ ಆಟಗಾರ. 99 ರನ್‌ನಲ್ಲಿದ್ದರೂ ಎಚ್ಚರ ವಹಿಸಿ, ಸಿಂಗಲ್‌ ಪಡೆದು ಸೆಂಚುರಿ ಬಾರಿಸುವುದಕ್ಕಿಂತ, ಸಿಕ್ಸರ್ ಹೊಡೆಯುವ ಧೈರ್ಯದವರು. ಎದುರಾಳಿ ಬೌಲರ್‌ ಯಾರೇ ಇರಲಿ‌, ಸೆಹ್ವಾಗ್‌ ಅದನ್ನು ಲೆಕ್ಕಿಸದೇ ತಮ್ಮ ಆಟವನ್ನಾಡುವವರು.

ಈವರೆಗೆ ಸೆಹ್ವಾಗ್‌ ಒಟ್ಟು 8586 ಟೆಸ್ಟ್‌ ಹಾಗೂ 8273 ಏಕದಿನ ಪಂದ್ಯಗಳನ್ನಾಡಿ 38 ಸೆಂಚುರಿ ಬಾರಿಸಿದ್ದಾರೆ.‌ ಅಂತಾರಾಷ್ಟ್ರೀಯ ಟೆಸ್ಟ್‌ ಸರಣಿಯಲ್ಲಿ ಎರಡು ತ್ರಿಶತಕ ಬಾರಿಸಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಆದರೆ, ಅವರು ನಿವೃತ್ತಿಯಾಗುವಾಗ ಸೂಕ್ತ ವಿದಾಯ ಸಿಗದಿರುವುದು ವಿಷಾದಕರ!

ಸೆಹ್ವಾಗ್‌ ತಮ್ಮ ಕ್ರಿಕೆಟ್‌ ವೃತ್ತಿಜೀವನದ ಏರುಪೇರುಗಳ ಬಗ್ಗೆ ಮಾತನಾಡಿ 2008ರಲ್ಲೇ ಏಕದಿನ ಪಂದ್ಯಕ್ಕೆ ವಿದಾಯ ಹೇಳಬೇಕು ಅಂದುಕೊಂಡಿದ್ದ ವಿಷಯವನ್ನು ಬಿಚ್ಚಿಟ್ಟಿದ್ದಾರೆ. 2008ರಲ್ಲಿ ಧೋನಿ ಕ್ಯಾಪ್ಟನ್‌ ಆದಾಗ ಆಸ್ಟ್ರೇಲಿಯಾ ಟೂರ್‌ಗೆ ಸೆಲೆಕ್ಷನ್‌ ನಡೆದಿತ್ತು. ಆ ಸಂದರ್ಭದಲ್ಲಿ ಸೆಹ್ವಾಗ್‌ ಟೆಸ್ಟ್‌ನಲ್ಲಿ ಉತ್ತಮ ಆಟವಾಡುತ್ತಿದ್ದರು. ಆದರೆ ಏಕದಿನ ಪಂದ್ಯಗಳಲ್ಲಿ ಭರವಸೆಯ ಆಟವಾಡಲು ಸಾಧ್ಯವಾಗಿರಲಿಲ್ಲ. ಅದೇ ಆಧಾರದ ಮೇರೆಗೆ ಅವರನ್ನು ಆಸ್ಟ್ರೇಲಿಯಾ ಟೂರ್‌ಗೆ ಸೆಲೆಕ್ಟ್‌ ಮಾಡಿರಲಿಲ್ಲ. ಇದರಿಂದ ಬೇಸರಗೊಂಡು ಸೆಹ್ವಾಗ್‌ ಏಕದಿನ ಪಂದ್ಯದಿಂದ ನಿವೃತ್ತಿ ಹೊಂದುವ ಯೋಚನೆ ಮಾಡಿದ್ದರಂತೆ.

ಆದರೆ, ಅವರ ಈ ಯೋಚನೆಯನ್ನು ಬದಲಾಯಿಸಿದ್ದು ʼಗಾಡ್‌ ಆಫ್‌ ಕ್ರಿಕೆಟ್‌ʼ ಸಚಿನ್‌ ತೆಂಡೂಲ್ಕರ್.‌ ಸಚಿನ್‌ ತೆಂಡೂಲ್ಕರ್‌ ಅವರ ಧೈರ್ಯದ ಹಾಗೂ ಸಮಾಧಾನದ ಮಾತುಗಳು ಸೆಹ್ವಾಗ್‌ ಅವರ ನಿರ್ದಾರವನ್ನು ಬದಲಾಯಿಸುವಂತೆ ಮಾಡಿತು. ʼಇದು ಜೀವನದ ಒಂದು ಫೇಸ್‌ ಅಷ್ಟೇ. ಇದಕ್ಕೆ ಹೆದರುವ ಅವಶ್ಯಕತೆಯಿಲ್ಲ. ಸರಣಿಯ ಬಳಿಕ ಮನೆಗೆ ಹೋಗಿ ನಿಧಾನವಾಗಿ ಯೋಚಿಸಿ ನಿರ್ಧಾರ ಮಾಡುʼ ಎಂದು ಹೇಳಿದ ಅವರ ಮಾತುಗಳೇ ಸೆಹ್ವಾಗ್‌ ಅವರಿಗೆ ಧೈರ್ಯ ತುಂಬಿತು. ಸೆಹ್ವಾಗ್ ನಿವೃತ್ತಿಯ ಯೋಚನೆಯನ್ನು ಕೈಬಿಟ್ಟರು.

ಅಂದು ನಿವೃತ್ತಿಯನ್ನು ಘೋಷಿಸದೇ ಇದ್ದಿದ್ದು ಒಳ್ಳೆಯದೇ ಆಯಿತು. ನಂತರ 2011ರ ವಿಶ್ವಕಪ್‌ನಲ್ಲಿ ಆಡಲು ಅವಕಾಶ ದೊರಕಿತು ಎಂದು ಸೆಹ್ವಾಗ್‌ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: IPL 2022 | IPLಗಷ್ಟೇ ಹೊಸಬರು, ಕ್ರಿಕೆಟ್‌ಗಲ್ಲ !: ಮೊದಲ ಟೂರ್ನಿಯಲ್ಲೇ ಗುಜರಾತ್‌ ಟೈಟಾನ್ಸ್‌ ಚಾಂಪಿಯನ್

Exit mobile version