Site icon Vistara News

INDvsSL | ಘಟಾನುಘಟಿಗಳಿರುವ ಟೀಮ್​ ಇಂಡಿಯಾಗೆ ಆಯ್ಕೆ ಸಮಸ್ಯೆ; ಮೊದಲ ಏಕ ದಿನ ಪಂದ್ಯದಲ್ಲಿ ಯಾರಿಗೆಲ್ಲ ಅವಕಾಶ?

INDvsSL

ಗುವಾಹಟಿ : ಶ್ರೀಲಂಕಾ ತಂಡದ ವಿರುದ್ಧದ ಏಕ ದಿನ ಸರಣಿಯ (INDvsSL) ಮೊದಲ ಪಂದ್ಯ ಗುವಾಹಟಿಯಲ್ಲಿ ಮಂಗಳವಾರ (ಜನವರಿ 10) ನಡೆಯಲಿದ್ದು, ಅದಕ್ಕಿಂತ ಮೊದಲು ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್​ಗೆ ಆಯ್ಕೆ ಸಮಸ್ಯೆ ಎದುರಾಗಿದೆ. ಜತೆಗೆ ಹಿರಿಯ ಮತ್ತು ಅನುಭವಿ ಆಟಗಾರರಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಹಾಗೂ ಕೆ. ಎಲ್​ ರಾಹುಲ್​ ತಂಡಕ್ಕೆ ಪ್ರವೇಶ ಪಡೆದ ಹೊರತಾಗಿಯೂ, ಬುಮ್ರಾ ಅವರ ಅಲಭ್ಯತೆಯ ಚಿಂತೆ ಎದುರಾಗಿದೆ. ಈ ಎಲ್ಲ ಸವಾಲುಗಳ ನಡುವೆ ಮೊದಲ ಪಂದ್ಯಕ್ಕೆ ಯಾರೆಲ್ಲ ಅವಕಾಶ ಪಡೆಯಲಿದ್ದಾರೆ ಎಂಬ ಕುತೂಹಲ ಸೃಷ್ಟಿಯಾಗಿದೆ.

ಗುವಾಹಟಿಯ ಬರ್ಸಾಪಾರಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಈ ಹಣಾಹಣಿ ಆಯೋಜನೆಗೊಂಡಿದೆ. ಏಷ್ಯಾ ಕಪ್​ ಹಾಗೂ ಏಕ ದಿನ ವಿಶ್ವ ಕಪ್​ಗೆ ಸಿದ್ಧವಾಗುತ್ತಿರುವ ಭಾರತ ತಂಡಕ್ಕೆ ಇದು ವರ್ಷಾರಂಭದ ಮೊದಲ ಸವಾಲು. ಏಷ್ಯಾ ಕಪ್​ಗೆ ಮುನ್ನ ಭಾರತ ತಂಡ ಒಟ್ಟು 15 ಏಕ ದಿನ ಪಂದ್ಯಗಳಲ್ಲಿ ಆಡಬೇಕಾಗಿದೆ. ಅದರ ಜತೆಗೆ ವಿಶ್ವ ಕಪ್​ಗೆ ಸಿದ್ಧತೆ ನಡೆಸಿಕೊಳ್ಳಬೇಕಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಆಟಗಾರರ ಮೇಲಿನ ಕಾರ್ಯದೊತ್ತಡ ಹಾಗೂ ಗಾಯದ ಸಮಸ್ಯೆಯನ್ನೂ ನಿರ್ವಹಣೆ ಮಾಡಬೇಕಾಗಿದೆ.

ಬುಮ್ರಾ ಏಕಾಏಕಿ ಅಲಭ್ಯ

ಲಂಕಾ ವಿರುದ್ಧದ ಸರಣಿಯ ಮೊದಲ ಪಂದ್ಯಕ್ಕೆ ಮುನ್ನಾದಿನವೇ ವೇಗಿ ಜಸ್​ಪ್ರಿತ್​ ಬುಮ್ರಾ ಅವರ ಅಲಭ್ಯತೆ ತಂಡದ ಪಾಲಿಗೆ ಆಘಾತಕಾರಿ ಸುದ್ದಿಯಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಅವರನ್ನು ಆಡಿಸುತ್ತಿಲ್ಲ ಎಂಬುದಾಗಿಯೂ ಬಿಸಿಸಿಐ ಸೋಮವಾರ ಸಂಜೆಯ ವೇಳೆಗೆ ಪ್ರಕಟಣೆ ಹೊರಡಿಸಿದೆ. ಹೀಗಾಗಿ ಬೌಲಿಂಗ್​ ವಿಭಾಗವನ್ನು ಬಲಿಷ್ಠಗೊಳಿಸುವ ಟೀಮ್​ ಇಂಡಿಯಾದ ಮ್ಯಾನೇಜ್ಮೆಂಟ್​ ಯೋಜನೆ ವಿಫಲಗೊಂಡಿದೆ. ಲಭ್ಯ ಇರುವ ಉತ್ತಮ ಆಟಗಾರರಲ್ಲಿ ಮೂವರು ಅವಕಾಶ ಪಡೆಯಲಿದ್ದಾರೆ.

ಬುಮ್ರಾ 18ರಿಂದ ಆರಂಭವಾಗುವ ನ್ಯೂಜಿಲೆಂಡ್​ ವಿರುದ್ಧದ ಸೀಮಿತ ಓವರ್​ಗಳ ಸರಣಿಗೆ ಮತ್ತು ಬಾರ್ಡರ್​ ಗವಾಸ್ಕರ್​ ಟ್ರೋಫಿಗೆ ಲಭ್ಯರಾಗುವರೇ ಎಂಬ ಲೆಕ್ಕಾಚಾರ ಶುರುವಾಗಿದೆ.

ಬ್ಯಾಟಿಂಗ್​ ಆಯ್ಕೆ ಹೇಗೆ

ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿ ತಂಡಕ್ಕೆ ಮರಳಿದ್ದು, ಆರಂಭಿಕ ಹಾಗೂ ಮೂರನೇ ಕ್ರಮಾಂಕದ ಸ್ಥಾನವನ್ನು ತುಂಬಲಿದ್ದಾರೆ. ಆದರೆ, ರೋಹಿತ್​ ಜತೆ ಇನಿಂಗ್ಸ್ ಆರಂಭಿಸುವುದು ಯಾರು ಎಂಬುದೇ ಸದ್ಯದ ಪ್ರಶ್ನೆ. ಶುಬ್ಮನ್​ ಗಿಲ್​, ಕೆ ಎಲ್​ ರಾಹುಲ್​ ಹಾಗೂ ಇಶಾನ್​ ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಶುಬ್ಮನ್​ಗೆ ಅವಕಾಶ ಸಿಕ್ಕರೆ ಇಶಾನ್​ ಬೆಂಚು ಕಾಯಬೇಕಾಗಿದು. ಆದರೆ, ವಿಕೆಟ್​ಕೀಪರ್​ ಜವಾಬ್ದಾರಿ ವಹಿಸುವ ಕಾರಣ ಅವರು ಕೆ. ಎಲ್​ ರಾಹುಲ್​ ಜತೆ ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಾಗಿದೆ. ಇವರೆಲ್ಲರ ಜತೆಗೆ ಉತ್ತಮ ಫಾರ್ಮ್​ನಲ್ಲಿರುವ ಶ್ರೇಯಸ್​ ಅಯ್ಯರ್​ ಕೂಡ ನಾಲ್ಕನೇ ಕ್ರಮಾಂಕದ ಬ್ಯಾಟರ್​ ಸ್ಥಾನಕ್ಕೆ ಪೈಪೋಟಿ ಒಡ್ಡಲಿದ್ದಾರೆ. ಅವರು ಕಳೆದ ವರ್ಷ 15 ಇನಿಂಗ್ಸ್​ಗಳಲ್ಲಿ 724 ರನ್ ಬಾರಿಸಿದ್ದರು. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಸ್ಟ್ರೈಕ್​ ರೊಟೇಷನ್​ ಹಾಗೂ ಸ್ಪಿನ್​ ದಾಳಿ ಎದುರಿಸುವಲ್ಲಿ ನಿಸ್ಸೀಮರು.

ಟಿ20 ಶತಕ ವೀರ ಸೂರ್ಯಕುಮಾರ್ ಅವರಿಗೆ ಏಕ ದಿನ ಸರಣಿಯಲ್ಲೂ ಅವಕಾಶ ನೀಡುವ ಒತ್ತಡ ಆಯ್ಕೆ ಸಮಿತಿ ಮೇಲಿದೆ. ಬೌಲಿಂಗ್​ ವಿಭಾಗದಲ್ಲಿ ಮೊಹಮ್ಮದ್​ ಶಮಿ, ಅರ್ಶ್​ದೀಪ್​ ಸಿಂಗ್​, ಮೊಹಮ್ಮದ್​ ಸಿರಾಜ್​ ಹಾಗೂ ಉಮ್ರಾನ್​ ಮಲಿಕ್ ನಡುವೆ ಪೈಪೋಟಿಯಿದೆ. ಸ್ಪಿನ್ನರ್​ಗಳ ಸ್ಥಾನದಲ್ಲಿ ಅಕ್ಷರ್​ ಪಟೇಲ್​ ಹಾಗೂ ಯಜ್ವೇಂದ್ರ ಆಯ್ಕೆಯಾಗಬಹುದು. ಕುಲ್ದೀಪ್​ ಯಾದವ್​ ಆಡುವ ಬಳಗದಲ್ಲಿ ಅವಕಾಶ ಪಡೆಯಬಲ್ಲ ಇನ್ನೊಬ್ಬ ಸ್ಪಿನ್ನರ್​.

ವಿಶ್ವಾಸದಲ್ಲಿ ಲಂಕಾ ಬಳಗ

ಪ್ರವಾಸಿ ತಂಡದ ಟಿ20 ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿದೆ. ಆದಾಗ್ಯೂ ಕೆಲವು ಆಟಗಾರರ ಪ್ರದರ್ಶನ ಪ್ರವಾಸಿ ತಂಡದ ವಿಶ್ವಾಸ ಹೆಚ್ಚಿಸಿದೆ. ಪಾಥುಮ್​ ನಿಸ್ಸಂಕ, ನಾಯಕ ದಸುನ್ ಶನಕ, ಕುಸಲ್​ ಮೆಂಡಿಸ್​ ಭಾರತಕ್ಕೆ ಸೆಡ್ಡು ಹೊಡೆಯಬಲ್ಲರು. ಬೌಲಿಂಗ್​ನಲ್ಲಿ ಜೆಫ್ರಿ ವಂಡರ್ಸೆ ಕಳೆದ ವರ್ಷ 7 ಪಂದ್ಯಗಳಲ್ಲಿ 14 ವಿಕೆಟ್​ ಕಬಳಿಸಿದ್ದಾರೆ. ಅವರೂ ಅವಕಾಶಕ್ಕಾಗಿ ಕಾಯಬಲ್ಲರು.

ಸಂಭಾವ್ಯ ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಶುಬ್ಮನ್​ ಗಿಲ್​, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್​ಕೀಪರ್​) ಸೂರ್ಯಕುಮಾರ್ ಯಾದವ್/ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಅಕ್ಷರ್​ ಪಟೇಲ್​ , ಯಜ್ವೇಂದ್ರ ಚಹಲ್/ಕುಲ್ದೀಪ್​ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಅರ್ಶ್​ದೀಪ್​ ಸಿಂಗ್, ಉಮ್ರಾನ್​ ಮಲಿಕ್​.

ಶ್ರೀಲಂಕಾ: ದಾಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್ (ವಿಕೆಟ್​ಕೀಫರ್​), ಪಾಥುಮ್ ನಿಸ್ಸಂಕ, ಅವಿಷ್ಕ ಫರ್ನಾಂಡೋ, ಧನಂಜಯ ಡಿ ಸಿಲ್ವ, ಚರಿತ್ ಅಸಲಂಕ, ವನಿಂದು ಹಸರಂಗ, ಚಾಮಿಕ ಕರುಣಾರತ್ನ, ಮಹೀಶ್ ತೀಕ್ಷಣ, ಕಸುನ್​ ರಜಿತ, ದಿಲ್ಶನ್​ ಮದುಶಂಕ/ಲಾಹಿರು ಕುಮಾರ.

ಇದನ್ನೂ ಓದಿ | INDvsSL | ಭಾರತ- ಶ್ರೀಲಂಕಾ ನಡುವಿನ ಪಂದ್ಯ ವೀಕ್ಷಿಸಲು ಅರ್ಧ ದಿನ ಸರಕಾರಿ ರಜೆ!

Exit mobile version