Site icon Vistara News

Ind vs Nz : ಹಳೆ ಸೋಲಿಗೆ ಸೇಡು ತೀರಿಸಿಕೊಳ್ಳುವುದೇ ಭಾರತ?

Ravindra Jadeja

ಮುಂಬಯಿ: ಏಕದಿನ ವಿಶ್ವಕಪ್​ನ ಸೆಮಿಫೈನಲ್ ಹಂತದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (Ind vs Nz) ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಪಂದ್ಯಾವಳಿಯ ಕಳೆದ ಆವೃತ್ತಿಯಲ್ಲಿ ಮೆನ್ ಇನ್ ಬ್ಲೂ ಕಿವೀಸ್ ಕೈಯಲ್ಲಿ ಆಘಾತಕಾರಿ ಸೋಲನ್ನು ಅನುಭವಿಸಿತ್ತು. ಹೀಗಾಗಿ ಈ ಸೆಮಿಫೈನಲ್ ಪಂದ್ಯ ಅದಕ್ಕೆ ಸೇಡು ತೀರಿಸಿಕೊಳ್ಳುವುದಕ್ಕೆ ಹಾಗೂ ಮತ್ತೊಂದು ವಿಶ್ವ ಕಪ್ ಎತ್ತಿ ಹಿಡಿವುದಕ್ಕೆ ಅತ್ಯಂತ ಸೂಕ್ತ ಸಂದರ್ಭವಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ವಿಷಯಗಳು ಬದಲಾಗಿವೆ. ಪ್ರಮುಖವಾಗಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಈ ಬಾರಿ ಭಾರತದ ನೆಚ್ಚಿನ ಕ್ರಿಕೆಟ್​ ಕ್ರೀಡಾಂಗಣ ವಾಂಖೆಡೆಯಲ್ಲಿ ಆಡುತ್ತಿದೆ. ಕಳೆದ ಆವೃತ್ತಿಯಲ್ಲಿ ಭಾರತಕ್ಕೆ ಮಳೆಯೂ ಕೈಕೊಟ್ಟಿತ್ತು. ಈ ಬಾರಿ ಹಾಗಾಗದು. ಕಿವೀಸ್ ಪಡೆಯನ್ನು ರೋಹಿತ್ ಬಳಗ ಬಗ್ಗು ಬಡಿಯಲೇಬೇಕಾಗಿದೆ.

2019 ರ ವಿಶ್ವಕಪ್ ಎಂಎಸ್ ಧೋನಿಯ ಅಂತಾರಾಷ್ಟ್ರೀಯ ಕರ್ತವ್ಯದ ಕೊನೆಯ ವರ್ಷವಾಗಿತ್ತು. 2023 ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಕೊನೆಯ ವರ್ಷವಾಗಬಹುದು ಎಂದು ಅಂದುಕೊಳ್ಳಬಹುದು. ಕಳೆದ 12 ವರ್ಷಗಳಿಂದ ಟ್ರೋಫಿಗಾಗಿ ಕಾಯುತ್ತಿರುವ ಅವರಿಗೆ ಮತ್ತು ಒಂದು ಶತಕೋಟಿಗೂ ಹೆಚ್ಚು ಅಭಿಮಾನಿಗಳಿಗೆ ಈ ಗೆಲುವು ಅನಿವಾರ್ಯ. ಆದಾಗ್ಯೂ ಲೀಗ್ ಹಂತದ ಅಬ್ಬರದ ಹೊರತಾಗಿಯೂ ಸವಾಲು ಸುಲಭದ್ದಲ್ಲ.

ಚೇಸಿಂಗ್​ ಸುಲಭವಲ್ಲ

ಹಾಲಿ ಏಕದಿನ ವಿಶ್ವಕಪ್​ನಲ್ಲಿ ವಾಂಖೆಡೆ ಸ್ಟೇಡಿಯಮ್​ನಲ್ಲಿ ಚೇಸಿಂಗ್ ಕಠಿಣ ಸವಾಲಾಗಿದೆ. ಆದ್ದರಿಂದ, ಸೆಮಿ ಫೈನಲ್​ನಲ್ಲಿ ಟಾಸ್ ಪ್ರಮುಖ ಅಂಶವಾಗಲಿದೆ. ಚಳಿಗಾಲವು ಬರುತ್ತಿದ್ದರೂ ಮುಂಬೈನ ಶೆಕೆ ಆಟಗಾರರ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಅನುಕೂಲ ಹೆಚ್ಚು. ರೋಹಿತ್ ಶರ್ಮಾ ನೇತೃತ್ವದ ತಂಡವು ಬ್ಯಾಟಿಂಗ್​ನಲ್ಲಿ ಅಸಾಧಾರಣವಾಗಿದೆ. ಆದ್ದರಿಂದ ಮತ್ತೊಮ್ಮೆ ಅಬ್ಬರದ ಪ್ರದರ್ಶನ ನಿರೀಕ್ಷಿಸಬಹುದು.

ಇದನ್ನೂ ಓದಿ: Ind vs Nz : ಸೆಮಿಫೈನಲ್​ಗೂ ಮೊದಲು ಭಾರತದ ಬ್ಯಾಟರ್​ಗಳ ಇದುವರೆಗಿನ ಪ್ರದರ್ಶನದ ವಿವರ ಇಂತಿದೆ

ಕಿವೀಸ್ ತಂಡ 2015 ಮತ್ತು 2019ರ ವಿಶ್ವ ಕಪ್​ನಲ್ಲಿ ಫೈನಲ್ ಪ್ರವೇಶಿಸಿತ್ತು. ರೋಹಿತ್ ಮತ್ತು ಕೊಹ್ಲಿಯಂತೆ, ಏಕದಿನ ವಿಶ್ವಕಪ್​ ಬಳಿಕ ಕೇನ್ ವಿಲಿಯಮ್ಸನ್, ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ನಿವೃತ್ತಿ ಹೇಳಬಹುದು. ಈ ಮೂವರು ಅಂಡರ್ 19 ದಿನಗಳಿಂದ ಒಟ್ಟಿಗೆ ಇದ್ದಾರೆ. ಹೀಗಾಗಿ ಅವರೂ ವಿಶ್ವ ಕಪ್​ ಗೆಲ್ಲುವ ಗುರಿಯನ್ನು ಹೊಂದಿದ್ದಾರೆ.

ಒಟ್ಟಾರೆಯಾಗಿ, ಈ ಎರಡೂ ತಂಡಗಳಲ್ಲಿ ಸಾಕಷ್ಟು ಮ್ಯಾಚ್ ವಿನ್ನರ್​ಗಳಿದ್ದಾರೆ. ನವೆಂಬರ್ 15 ರಂದು ಅದ್ಭುತ ಪಂದ್ಯವನ್ನು ನಿರಿಕ್ಷೆ ಮಾಡಬಹುದು. ವಿಜೇತರು ಅಹ್ಮದಾಬಾದ್ ನಲ್ಲಿ ಫೈನಲ್ ಆಡಲು ಹೋಗುತ್ತಾರೆ ಮತ್ತು ಸೋತ ತಂಡಕ್ಕೆ ಮತ್ತೊಂದು ಆಘಾತ ಗ್ಯಾರಂಟಿ.

ಭಾರತದ ಸಂಯೋಜನೆ ಬದಲಾಗದು

ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ಭಾರತ ತಂಡವು ಅದೇ 11ರ ಬಳಗವನ್ನು ಕಣಕ್ಕಿಳಿಸಬಹುದು. ತಂಡ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್​ನಲ್ಲಿ ಅದ್ಭುತವಾಗಿದೆ. ಈ ತಂಡಕ್ಕೆ ಕಪ್ ಗೆಲ್ಲುವ ಎಲ್ಲ ವಿಶ್ವಾಸವಿದೆ. ಅತ್ತ ನ್ಯೂಜಿಲ್ಯಾಂಡ್ ತಂಡಕ್ಕೆ ಟಾಮ್ ಲಾಥಮ್ ಅವರ ಫಾರ್ಮ್ ಕಳವಳಕಾರಿ ವಿಷಯವಾಗಿದೆ. ಬ್ಲ್ಯಾಕ್ ಕ್ಯಾಪ್ಸ್ ಅವರ ಸ್ಥಾನದಲ್ಲಿ ಜೇಮ್ಸ್ ನೀಶಮ್ ಅವರನ್ನು ಕರೆತರಬಹುದು. ನೀಶಮ್ ಮುಂಬೈನಲ್ಲಿ ಪರಿಣಾಮಕಾರಿಯಾಗಿರಬಹುದು.

ವಾಂಖೆಡೆ ಸ್ಟೇಡಿಯಂ ಪಿಚ್ ವರದಿ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿನ ಮೇಲ್ಮೈ ಸಾಮಾನ್ಯವಾಗಿ ಬ್ಯಾಟರ್​ಗಳಿಗೆ ಅನುಕೂಲಕರವಾಗಿದೆ. ಆದರೆ ಬೆಳಕಿನಲ್ಲಿ ಬ್ಯಾಟಿಂಗ್ ಮಾಡುವುದು ಇಲ್ಲಿ ಕಠಿಣ ಕೆಲಸವಾಗಿದೆ. ಆದ್ದರಿಂದ, ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಬೇಕು. 340 ಕ್ಕಿಂತ ಹೆಚ್ಚು ರನ್ ಗಳಿಸಿದರೆ ಉತ್ತಮ ಮೊತ್ತವಾಗಿರುತ್ತದೆ.

ತಂಡಗಳು

ಭಾರತ: ಶುಬ್ಮನ್ ಗಿಲ್, ರೋಹಿತ್ ಶರ್ಮಾ (ಸಿ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

ನ್ಯೂಜಿಲ್ಯಾಂಡ್: ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಜೇಮ್ಸ್ ನೀಶಮ್, ಟಿಮ್ ಸೌಥಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.

ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ ದಾಖಲೆಗಳು

ಭಾರತ ವಿರುದ್ಧ ನ್ಯೂಜಿಲೆಂಡ್ ಪ್ರಸಾರ ವಿವರಗಳು

Exit mobile version