Site icon Vistara News

Vijay Hazare Trophy | ಒಂದೇ ಓವರ್‌ನಲ್ಲಿ 7 ಸಿಕ್ಸರ್‌, 43 ರನ್‌; ಇತಿಹಾಸ ಸೃಷ್ಟಿಸಿದ ಟೀಮ್‌ ಇಂಡಿಯಾ ಓಪನರ್‌

vijay hazare trophy

ಅಹಮದಾಬಾದ್‌ : ಟೀಮ್‌ ಇಂಡಿಯಾ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ನ ಸ್ಟಾರ್‌ ಬ್ಯಾಟರ್‌ ಋತುರಾಜ್‌ ಗಾಯಕ್ವಾಡ್‌ ಕ್ರಿಕೆಟ್‌ ಕ್ಷೇತ್ರದಲ್ಲೊಂದು ವಿನೂತನ ದಾಖಲೆ ನಿರ್ಮಿಸಿದ್ದಾರೆ. ವಿಜಯ್‌ ಹಜಾರೆ ಟ್ರೋಫಿಯ (Vijay Hazare Trophy) ಕ್ವಾರ್ಟರ್‌ ಫೈನಲ್ಸ್‌ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡದ ವಿರುದ್ಧದ ಪಂದ್ಯದಲ್ಲಿ ಈ ವಿಶೇಷ ದಾಖಲೆಯನ್ನು ಸೃಷ್ಟಿಸಿದ್ದು, ಇನಿಂಗ್ಸ್‌ನ ೪೯ನೇ ಓವರ್‌ನಲ್ಲಿ ಏಳು ಸಿಕ್ಸರ್‌ ಸಮೇತ ೪೩ ರನ್‌ ಸಿಡಿಸಿದ್ದಾರೆ. ಇದು ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಸೃಷ್ಟಿಯಾದ ನೂತನ ದಾಖಲೆ. ಅಂತೆಯೇ ಅವರು ೨೨೦ ರನ್‌ ಬಾರಿಸಿ ಅಜೇಯರಾಗಿ ಉಳಿದರು.

ಉತ್ತರ ಪ್ರದೇಶದ ಶಿವ ಸಿಂಗ್ ಅವರು ೪೯ನೇ ಓವರ್‌ ಎಸೆದಿದ್ದರು. ಅದಕ್ಕಿಂತ ಮೊದಲು ಋತುರಾಜ್‌ ೧೪೭ ಎಸೆತಗಳಿಗೆ ೧೬೫ ರನ್‌ ಪೇರಿಸಿದ್ದರು. ಶಿವ ಸಿಂಗ್ ಅವರ ಮೊದಲ ನಾಲ್ಕು ಎಸೆತಗಳಿಗೆ ಸತತವಾಗಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ್ದ ಋತುರಾಜ್‌, ದ್ವಿ ಶತಕ ಬಾರಿಸುವ ಸೂಚನೆ ಕೊಟ್ಟರು. ಆದರೆ, ಐದನೇ ಎಸೆತ ಎಸೆಯುವ ವೇಳೆ ಶಿವ ಸಿಂಗ್‌ ಲೈನ್‌ಗಿಂತ ಮುಂದೆ ಕಾಲಿಟ್ಟರು. ಅಂಪೈರ್ ನೋ ಬಾಲ್‌ ಎಂದು ಘೋಷಿಸಿದರು. ಆ ಚೆಂಡನ್ನೂ ಋತುರಾಜ್‌ ಗಾಳಿಯಲ್ಲಿ ಬೌಂಡರಿ ಗೆರೆ ದಾಟಿಸಿದರು. ಮುಂದುವರಿದ ಅವರು ಬಳಿಕದ ಎರಡು ಎಸೆತಗಳನ್ನು ಸಿಕ್ಸರ್‌ಗಟ್ಟಿದರು. ಋತುರಾಜ್‌ ಬಾರಿಸಿದ ಅಷ್ಟೂ ಎಸೆತಗಳು ನೈಜ ಕ್ರಿಕೆಟ್‌ ಹೊಡೆತಗಳಾಗಿದ್ದವು. ಅಲ್ಲದೆ, ಆ ಓವರ್‌ ಮುಗಿಯುವುದರೊಳಗೆ ದ್ವಿಶತಕ (೨೦೮) ಪೂರ್ಣಗೊಳಿಸಿದರು. ಋತುರಾಜ್‌ ಅವರ ಬ್ಯಾಟಿಂಗ್ ನೆರವಿನಿಂದ ಮಹಾರಾಷ್ಟ್ರ ತಂಡ ನಿಗದಿತ ೫೦ ಓವರ್‌ಗಳಲ್ಲಿ ೫ ವಿಕೆಟ್‌ ನಷ್ಟಕ್ಕೆ ೩೩೦ ರನ್‌ ಬಾರಿಸಿತು.

ಇದರೊಂದಿಗೆ ಋತುರಾಜ್‌ ಗಾಯಕ್ವಾಡ್‌ ಅವರು ಲಿಸ್ಟ್‌ ಎ ಕ್ರಿಕೆಟ್‌ನ ಓವರ್‌ ಒಂದರಲ್ಲಿ ೪೩ ರನ್‌ ಬಾರಿಸಿದ ಮೊದಲ ಭಾರತದ ಬ್ಯಾಟರ್‌ ಎನಿಸಿಕೊಂಡರು. ಋತುರಾಜ್‌ ಅವರು ಪಂದ್ಯದಲ್ಲಿ ಒಟ್ಟಾರೆ ೧೬ ಸಿಕ್ಸರ್‌ ಬಾರಿಸಿದ್ದರು. ಆ ಮೂಲಕ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ೧೬ ಸಿಕ್ಸರ್‌ಗಳನ್ನು ಬಾರಿಸಿದ ರೋಹಿತ್‌ ಶರ್ಮ, ಎಬಿ ಡಿವಿಲಿಯರ್ಸ್‌, ಜಸ್‌ಕರಣ್‌ ಮಲ್ಹೋತ್ರಾ, ಸೌಮ್ಯ ಸರ್ಕಾರ್‌, ಅವರ ಎಲೈಟ್‌ ಗುಂಪಿಗೆ ಸೇರಿಕೊಂಡರು. ಇಯಾನ್‌ ಮಾರ್ಗನ್‌ ಹಾಗೂ ಗೆರಿ ನಿನ್‌ಮನ್‌ ೧೭ ಸಿಕ್ಸರ್‌ ಬಾರಿಸಿ ಇವರಿಗಿಂತ ಮೊದಲಿದ್ದಾರೆ. ಡಿ ಆರ್ಕಿ ಶಾರ್ಟ್‌ ೨೩ ಸಿಕ್ಸರ್‌ ಬಾರಿಸುವ ಮೂಲಕ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

ಗ್ಯಾರಿ ಸೋಬರ್ಸ್‌, ರವಿ ಶಾಸ್ತ್ರಿ, ಹರ್ಷೆಲ್‌ ಗಿಬ್ಸ್‌, ಯುವರಾಜ್‌ ಸಿಂಗ್‌, ರಾಸ್ ವೈಟ್ಲಿ, ಹಜರತುಲ್ಲಾ ಜಜೈ, ಲಿಯೋ ಕಾರ್ಟರ್‌, ಕೀರನ್‌ ಪೊಲಾರ್ಡ್‌, ತಿಸಾರ ಪೆರೆರಾ ವಿವಿಧ ಮಾದರಿಯ ಕ್ರಿಕೆಟ್‌ನಲ್ಲಿ ಓವರ್‌ ಒಂದಕ್ಕೆ ಸತತ ಅರು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್‌ಗಳು. ಋತುರಾಜ್‌ ಗಾಯಕ್ವಾಡ್‌ ಒಂದು ಸಿಕ್ಸರ್‌ ಹೆಚ್ಚು ಬಾರಿಸಿದ್ದಾರೆ.

ಇದನ್ನೂ ಓದಿ | ಗ್ರೌಂಡ್ಸ್‌ಮನ್‌ ತಳ್ಳಿದ ಋತುರಾಜ್‌ ಗಾಯಕ್ವಾಡ್‌: ಸರಿಯೊ, ತಪ್ಪೊ

Exit mobile version