Site icon Vistara News

ICC World Cup 2023 : ವಿಶ್ವ ಕಪ್​ ಮೊದಲ ಪಂದ್ಯದಲ್ಲಿಯೇ ನ್ಯೂಜಿಲ್ಯಾಂಡ್ ತಂಡ ಸೃಷ್ಟಿಸಿದ ದಾಖಲೆಗಳ ವಿವರ ಇಲ್ಲಿದೆ

Rachin Ravindra

ಅಹಮದಾಬಾದ್​ : ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ನಡುವಿನ ವಿಶ್ವ ಕಪ್​ ಮೊದಲ ಪಂದ್ಯ ಬ್ಯಾಟಿಂಗ್ ಅಬ್ಬರದೊಂದಿಗೆ ಮುಕ್ತಾಯಕಂಡಿದೆ. 2019ರ ವಿಶ್ವ ಕಪ್ ಆವೃತ್ತಿಯ ರನ್ನರ್​ ಅಪ್​ ನ್ಯೂಜಿಲ್ಯಾಂಡ್ ತಂಡ ಆ ವರ್ಷದ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 9 ವಿಕೆಟ್​ಗಳ ನಿರಾಯಾಸ ವಿಜಯವನ್ನು ದಾಖಲಿಸಿದೆ. ಇದರೊಂದಿಗೆ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವ ಕಪ್ ಶುಭಾರಂಭಗೊಂಡಿದೆ. ಏತನ್ಮಧ್ಯೆ, ನ್ಯೂಜಿಲ್ಯಾಂಡ್ ತಂಡದ ಆಟಗಾರರು ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆದ ಇಂಗ್ಲೆಂಡ್ ತಂಡ ಬಹುತೇಕ ವೈಫಲ್ಯ ಎದುರಿಸಿತು. ನಿಗದಿತ 50 ಓವರ್​ಗಳ ಮುಕ್ತಾಯಕ್ಕೆ 9 ವಿಕೆಟ್​ಗಳನ್ನು ಕಳೆದುಕೊಂಡು ಸಾಧಾರಣ 282 ರನ್​ಗಳ ಮೊತ್ತವನ್ನು ಪೇರಿಸಿತ್ತು. ಬ್ಯಾಟಿಂಗ್​ಗೆ ಅದರಲ್ಲೂ ಚೇಸಿಂಗ್​ಗೆ ನೆರವಾಗುವ ನರೇಂದ್ರ ಮೋದಿ ಸ್ಟೇಡಿಯಮ್​ನ ಪಿಚ್​ನಲ್ಲಿ ಇದು ದೊಡ್ಡ ಮೊತ್ತವೇ ಆಗಿರಲಿಲ್ಲ. ಅಂತೆಯೇ ಆಯಿತು. ನ್ಯೂಜಿಲ್ಯಾಂಡ್ ತಂಡದ ಡೇವೋನ್​ ಕಾನ್ವೆ 152 ರನ್ ಹಾಗೂ ರಚಿನ್​ ರವೀಂದ್ರ 123 ರನ್​ಗಳ ನೆರವಿನಿಂದ ನ್ಯೂಜಿಲ್ಯಾಂಡ್ ತಂಡ ಸುಲಭ ವಿಜಯ ಸಾಧಿಸಿತು. ಕಿವೀಸ್ ಬಳಗ 10 ರನ್​ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಹೊರತಾಗಿಯೂ ಎರಡನೇ ವಿಕೆಟ್​ಗೆ ಅಮೋಘ 273 ರನ್​ಗಳ ಜತೆಯಾಟವಾಡಿತು. ಹೀಗಾಗಿ ಪಂದ್ಯ ಸುಲಭದಲ್ಲಿ ಕೈವಶವಾಯಿತು. ಇದರೊಂದಿಗೆ ವಿಶ್ವ ಕಪ್​ ಹಾಗೂ ಏಕ ದಿನ ಕ್ರಿಕೆಟ್ ಮಾದರಿಯಲ್ಲಿ ಹಲವಾರು ದಾಖಲೆಗಳು ಸೃಷ್ಟಿಯಾದವು.

ಮೊದಲ ಪಂದ್ಯದಲ್ಲಿಯೇ ಸೃಷ್ಟಿಯಾದ ದಾಖಲೆಗಳು ಇಂತಿವೆ

ಎಲೈಟ್ ಪಟ್ಟಿಗೆ ರಚಿನ್​, ಕಾನ್ವೆ

ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕ್ರಮವಾಗಿ 2023ರ ಆವೃತ್ತಿಯ ಮೊದಲ ಮತ್ತು ಎರಡನೇ ಶತಕಗಳನ್ನು ಬಾರಿಸಿದ ದಾಖಲೆ ಮಾಡಿದ್ದಾರೆ ರಚಿನ್ ರವೀಂದ್ರ ಹಾಗೂ ಡವೋನ್ ಕಾನ್ವೆ. ಎಡಗೈ ಬ್ಯಾಟರ್​ ಕಾನ್ವೇ ಕೇವಲ 83 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಕಿವೀಸ್ ತಂಡಕ್ಕೆ 283 ರನ್​ಗಳ ಗುರಿ ಬೆನ್ನಟ್ಟುವಲ್ಲಿ ಯಶಸ್ವಿಯಾದರು. ಅವರು 121 ಎಸೆತಗಳಲ್ಲಿ 152 ರನ್ ಬಾರಿಸಿ ಅಜೇಯರಾಗಿ ಉಳಿದರು. ಅಂತೆಯೇ ರಚಿನ್​ ರವೀಂದ್ರ 96 ಎಸೆತಗಳ 123 ರನ್​ಗಳ ನ್ನು ಬಾರಿಸಿ ಮಿಂಚಿದರು. ಈ ಮೂಲಕ ಅವರಿಬ್ಬರು ವಿಶ್ವ ಕಪ್​ನ ತಮ್ಮ ಚೊಚ್ಚಲ ಪಂದ್ಯಗಳಲ್ಲಿ ಶತಕ ಬಾರಿಸಿದ ಎಲೈಟ್​ ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ : ICC World Cup 2023 : ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ ರಚಿನ್ ಯಾರು? ಸಚಿನ್​ಗೂ ಅವರಿಗೂ ಏನು ಸಂಬಂಧ?

ಇದು ಏಕ ದಿನ ಕ್ರಿಕೆಟ್​ ಸ್ವರೂಪದಲ್ಲಿ ಎಡಗೈ ಬ್ಯಾಟರ್ ಕಾನ್ವೆ ಅವರ ಐದನೇ ಶತಕವಾಗಿದ್ದರೆ, ರವೀಂದ್ರ 31 ಪಂದ್ಯಗಳಲ್ಲಿ ನಾಲ್ಕನೇ ಬಾರಿ ಮೂರಂಕಿ ಮೊತ್ತ ದಾಟಿದ್ದಾರೆ. ಈ ಜೋಡಿಯು ಇಂಗ್ಲೆಂಡ್ ತಂಡ ನೀಡಿದ್ದ 283 ರನ್​ಗಳ ಸವಾಲನ್ನು ಮೀರುವಲ್ಲಿ ಎರಡನೇ ವಿಕೆಟ್​ಗೆ 273 ರನ್​ಗಳ ಜತೆಯಾಟವನ್ನು ನೀಡಿದೆ. ಈ ಇಬ್ಬರು ಆಟಗಾರರು ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿ ಶತಕದ ಸಾಧನೆ ಮಾಡಿದ ಕ್ರಮವಾಗಿ 15 ಮತ್ತು 16 ನೇ ಬ್ಯಾಟರ್​ಗಳು ಎನಿಸಿಕೊಂಡರು. ಕಾನ್ವೆ ಅವರ 152 ರನ್​ಗಳಲ್ಲಿ 19 ಫೋರ್ ಹಾಗೂ 3 ಸಿಕ್ಸರ್ ಸೇರಿಕೊಂಡಿದ್ದರೆ, ರಚಿನ್ ಅವರ 123 ರನ್​ಗಳಲ್ಲಿ 11 ಫೋರ್​ಗಳು ಹಾಗೂ 5 ಅಮೋಘ ಸಿಕ್ಸರ್​ಗಳು ಸೇರಿಕೊಂಡಿವೆ.

Exit mobile version