ಬೆಂಗಳೂರು: 2023ರ ಏಕದಿನ ವಿಶ್ವಕಪ್ ನಂತರ ಪಾಕಿಸ್ತಾನದ ಕ್ರಿಕೆಟ್ (Pakistan cricket) ತಂಡದೊಳಗಿನ ವಾತಾವರಣ ಕೆಟ್ಟಿದೆ. ಪ್ರದರ್ಶನ ಸಂಪೂರ್ಣ ಹದಗೆಟ್ಟಿದೆ. ಏಕದಿನ ವಿಶ್ವಕಪ್ ಗೆಲ್ಲುವ ಭರವಸೆಯೊಂದಿಗೆ ಭಾರತಕ್ಕೆ ಬಂದಿದ್ದ ಪಾಕ್ ತಂಡ 10 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಮಾತ್ರ ಗೆದ್ದಿತು. ಈ ಮೂಲಕ ಗುಂಪು ಹಂತದಲ್ಲೇ ನಿರ್ಗಮನ ಕಂಡಿತು. ಇದು ಕ್ರಿಕೆಟ್ ಪ್ರೇಮಿಗಳ ರಾಷ್ಟ್ರಕ್ಕೆ ಆಘಾತ ಕೊಟ್ಟಿತು. ಏತನ್ಮಧ್ಯೆ ಆ ತಂಡದಲ್ಲಿ ಆಂತರಿಕ ಸಮಸ್ಯೆಗಳು ಹೆಚ್ಚಾದವು. ವಿಶೇಷವಾಗಿ ನಾಯಕ ಬಾಬರ್ ಅಜಮ್ ನಾಯಕತ್ವ ಕಳೆದುಕೊಂಡರು. ಜತೆಗೆ ಒಳಜಗಳ ತಾರಕಕ್ಕೇರಿತು.
ತಂಡದೊಳಗಿನ ಭಿನ್ನಾಭಿಪ್ರಾಯವು ನಾಯಕ ಬಾಬರ್ ಮತ್ತು ಸ್ಟಾರ್ ವೇಗದ ಬೌಲರ್ ಶಾಹೀನ್ ಅಫ್ರಿದಿ ನಡುವಿನ ಸಂಬಂಧಕ್ಕೆ ಹುಳಿ ಹಿಂಡಿತು. ಇದು ತಂಡದ ಮೇಲೆ ಮತ್ತಷ್ಟು ಪರಿಣಾಮ ಬೀರಿತು. ಒಂದು ಕಾಲದಲ್ಲಿ ಅಸಾಧಾರಣ ಶಕ್ತಿಯಾಗಿದ್ದ ಅಫ್ರಿದಿ ಫಾರ್ಮ್ನಲ್ಲಿ ಕುಸಿತ ಕಂಡರು. ತಮ್ಮ ಹೆಸರಿಗೆ ತಕ್ಕ ಪ್ರದರ್ಶನಗಳನ್ನು ನೀಡಲು ವಿಫಲಗೊಂಡರು.
ಪಾಕಿಸ್ತಾನದ ಪತ್ರಕರ್ತ ಇಜಾಜ್ ಬಖ್ರಿ ಈ ಕುರಿತು ವಿಶ್ಲೇಷಣೆ ಮಾಡಿ. ಪಾಕಿಸ್ತಾನದ ಆಟಗಾರರು ಒಗ್ಗಟ್ಟಾಗಿಲ್ಲ. ಶಾಹೀನ್ ಅಫ್ರಿದಿ ನಾಯಕರಾಗಿ ಸ್ಥೈರ್ಯ ಕಳೆದುಕೊಂಡಿದ್ದಾರೆ. ಕಿವೀಸ್ ಬ್ಯಾಟರ್ಗಳಿಂದ ದಂಡನಗೆ ಒಳಗಾದ ಹೊರತಾಗಿಯೂ ಯಾರೊಂದಿಗೂ ಸಮಾಲೋಚಿಸಲಿಲ್ಲ. ಬಾಬರ್ ನಾಯಕತ್ವದಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಿತ್ತು. ಅದನ್ನು ಮುಂದುವರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಏಕದಿನ ವಿಶ್ವಕಪ್ ನಂತರ ಬಾಬರ್ ಅಜಮ್ ನಾಯಕ ಸ್ಥಾನದಿಂದ ಕೆಳಗಿಳಿಯುವ ಕಠಿಣ ನಿರ್ಧಾರ ತೆಗೆದುಕೊಂಡರು. ಇದು ಟಿ 20 ಪಂದ್ಯಗಳಲ್ಲಿ ಶಾಹೀನ್ ಅಫ್ರಿದಿ ಮತ್ತು ಟೆಸ್ಟ್ನಲ್ಲಿ ಶಾನ್ ಮಸೂದ್ಗೆ ಹೊಣೆಗಾರಿಕೆ ಕೊಡುವಂತೆ ಮಾಡಿತು. ಆದಾಗ್ಯೂ, ನಾಯಕತ್ವದ ಬದಲಾವಣೆಯು ತಕ್ಷಣವೇ ಸಕಾರಾತ್ಮಕ ಫಲಿತಾಂಶ ಕೊಡಲಿಲ್ಲ. ಪಾಕಿಸ್ತಾನದ ಆಸ್ಟ್ರೇಲಿಯಾ ಪ್ರವಾಸವು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್ವಾಶ್ ಆಯಿತು. ಶಾಹೀನ್ ಅಫ್ರಿದಿಗೆ ಪ್ರದರ್ಶನ ಗಮನ ಹರಿಸಲು ಆಗಲಿಲ್ಲ. ಒಳಜಗಳವೇ ಹೆಚ್ಚಾಯಿತು.
ಮಾತು ಬಿಟ್ಟ ಮಾಜಿ ಹಾಗೂ ಹಾಲಿ ನಾಯಕ
ಶಾಹಿನ್ ಅಫ್ರಿದಿ ನಾಯಕತ್ವದಲ್ಲಿ, ಪಾಕಿಸ್ತಾನವು ನ್ಯೂಜಿಲೆಂಡ್ನ ಮೊದಲ ಎರಡು ಟಿ 20 ಪಂದ್ಯಗಳನ್ನು ಸೋತಿದೆ. ಇದಕ್ಕೆ ತಂಡದೊಳಗಿನ ಅಶಾಂತಿ ಹಾಗೂ ಕಾರಣ ಎನ್ನಲಾಗಿದೆ. ಪ್ರಮುಖವಾಗಿ ಹಾಲಿ ನಾಯಕ ಶಾಹಿನ್ ಅಫ್ರಿದಿ ಹಾಗೂ ಮಾಜಿ ನಾಯಕ ಬಾಬರ್ ಅಜಂ ಮಾತನಾಡುವುದನ್ನೇ ಬಿಟ್ಟಿದ್ದಾರೆ. ಇದು ಪಾಕಿಸ್ತಾನ ಕ್ರಿಕೆಟ್ಗೆ ಸವಾಲಾಗಿದೆ.
ಇದನ್ನೂ ಓದಿ : Shaheen Afridi : ನಾಯಕನಿಗೇ ಆಘಾತ; ಒಂದೇ ಓವರ್ಗೆ 24 ರನ್ ಚಚ್ಚಿಸಿಕೊಂಡ ಅಫ್ರಿದಿ
ಪಾಕಿಸ್ತಾನದ ಪತ್ರಕರ್ತ ಇಜಾಜ್ ಬಖ್ರಿ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಸ್ತುತ ಸಮನ್ವಯದ ಕೊರತೆಯಿಂದ ಹಾಳಾಗಿದೆ. ನಾಯಕನಾಗಿ ಶಾಹೀನ್ ಅಫ್ರಿದಿ ಅವರ ಪ್ರದರ್ಶನದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಇದು ವೈಫಲ್ಯದ ಸಂಕೇತ ಎಂದು ಹೇಳಿದ್ದಾರೆ. ನಾಯಕ ತಮ್ಮ ಸಹ ಆಟಗಾರರೊಂದಿಗೆ ಸಮಾಲೋಚಿಸಲು ವಿಫಲಗೊಂಡಿದ್ದಾರೆ ಎಂದು ದೂರಿದ್ದಾರೆ.
ಶಾಹೀನ್ ಅಫ್ರಿದಿ ಮಾಜಿ ನಾಯಕ ಬಾಬರ್ ಅಜಮ್ ಆಟದ ಸಮಯದಲ್ಲಿ ಮಾತುಕತೆಯೇ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಬಾಬರ್ ಅಜಮ್ ಒಂದು ಕಾಲದಲ್ಲಿ ನಾಯಕರಾಗಿದ್ದರು. ಅವರ ಅಡಿಯಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಿತ್ತು. ಅವರ ಅನುಭವ ಬಳಸಿಕೊಳ್ಳುವುದಕ್ಕೆ ಶಾಹಿನ್ ವಿಫಲರಾದರು ಎಂದು ಬಖ್ರಿ ಹೇಳಿದ್ದಾರೆ.
ಝಾಕಾ ಅಶ್ರಫ್ ಅವರ ನಿರ್ಧಾರವನ್ನು ಟೀಕಿಸಿದ ಪತ್ರಕರ್ತ, ನಾಯಕತ್ವ, ಕೋಚಿಂಗ್ ಸಿಬ್ಬಂದಿ ಮತ್ತು ಆಟಗಾರರಲ್ಲಿ ಬದಲಾವಣೆಗಳ ಹೊರತಾಗಿಯೂ ತಂಡದ ಕಾರ್ಯಕ್ಷಮತೆ ಸುಧಾರಿಸಿಲ್ಲ ಎಂದಿದ್ದಾರೆ. ಅಶ್ರಫ್ ಮಾಡಿದ ಬದಲಾವಣೆಗಳು ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.