ಕೊಲೊಂಬೊ : ಮೊದಲೆಲ್ಲ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವೆಂದರೆ ಜಿದ್ದಾಜಿದ್ದಿ ಜೋರು. ಮೈದಾನದ ಹೊರಗೂ, ಒಗಳೂ ಕೆಕ್ಕರಿಸಿ ನೋಡುವುದ, ಟೀಕೆಗಳ ಸುರಿಮಳೆ ಹಾಗೂ ಬೈಗುಳಗಳು ಗ್ಯಾರಂಟಿ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಎರಡೂ ತಂಡಗಳ ಆಟಗಾರರು ಪರಸ್ಪರ ಗೆಳೆತನದಿಂದ ಇರುತ್ತಾರೆ. ಖುಷಿಯಿಂದ ಮಾತನಾಡುತ್ತಾ ಇರುತ್ತಾರೆ. ಇದೀಗ ಇನ್ನೂ ಒಂದು ಹಂತ ಮುಂದಕ್ಕೆ ಹೋಗಿದ್ದು ಗಿಫ್ಟ್ಗಳ ವಿನಿಮಯವೂ ಆರಂಭವಾಗಿದೆ. ಇದೀಗ ಗಿಫ್ಟ್ ಪಡೆದವರು ಭಾರತ ತಂಡದ ಮಾರಕ ವೇಗಿ ಜಸ್ಪ್ರಿತ್ ಬುಮ್ರಾ (Jasprit Bumrah). ಕೊಟ್ಟವರು ಎದುರಾಳಿ ಪಾಕ್ ತಂಡ ವೇಗಿ ಶಾಹೀನ್ ಶಾ ಅಫ್ರಿದಿ!
ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಇತ್ತೀಚೆಗೆ ತಂದೆಯಾಗಿದ್ದಾರೆ. ಅವರ ಪತ್ನಿ ಸಂಜನಾ ಗಣೇಶನ್ ಸೆಪ್ಟೆಂಬರ್ 4 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೃದಯಸ್ಪರ್ಶಿ ವೀಡಿಯೊದಲ್ಲಿ, ಶಾಹೀನ್ ಅಫ್ರಿದಿ ತಮ್ಮ ಎದುರಾಳಿ ಆಟಗಾರ ಬುಮ್ರಾಗೆ ಉಡುಗೊರೆಯೊಂದನ್ನು ಹಸ್ತಾಂತರಿಸಿ ಅಭಿನಂದಿಸುತ್ತಿರುವುದು ಕಂಡುಬಂದಿದೆ. ಉಡುಗೊರೆಯನ್ನು ಸ್ವೀಕರಿಸಿದ ಬುಮ್ರಾ ಅವರು ಎಡಗೈ ವೇಗದ ಬೌಲರ್ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, “ಅಲ್ಲಾಹ್ ಉಸ್ಕೊ ಹಮೇಶಾ ಖುಶ್ ರಾಖೆ ಔರ್ ನಯಾ ಬುಮ್ರಾ ಬನೆ [ದೇವರು ಯಾವಾಗಲೂ ನಿಮ್ಮ ಮಗುವನ್ನು ಸಂತೋಷವಾಗಿರಿಸಲಿ ಮತ್ತು ಮಗುವೂ ಒಂದು ದಿನ ಹೊಸ ಬುಮ್ರಾ ಆಗಲಿ” ಎಂದು ಶಾಹೀನ್ ಹೇಳುವುದನ್ನು ವಿಡಿಯೊದಲ್ಲಿ ಕೇಳಬಹುದು.
ನೇಪಾಳ ವಿರುದ್ಧ ಆಡದ ಬುಮ್ರಾ
ಬುಮ್ರಾ ತಮ್ಮ ಮೊದಲ ಮಗುವಿನ ತಂದೆಯಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧದ ಗ್ರೂಪ್ ಎ ಪಂದ್ಯವನ್ನು ಮುಗಿಸಿದ ತಕ್ಷಣ ಭಾರತಕ್ಕೆ ಮರಳಿದ್ದರು. ಹೀಗಾಗಿ ನೇಪಾಳ ವಿರುದ್ಧದ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಶಮಿ ಸ್ಥಾನ ಪಡೆದಿದ್ದರು. ಬುಮ್ರಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮೂಲಕ ತಮ್ಮ ಗಂಡು ಮಗುವಿನ ಜನನವನ್ನು ಘೋಷಿಸಿದ್ದರು. ಮುದ್ದಾದ ಮಗುವಿನ ಹೆಸರು ಅಂಗದ್ ಜಸ್ಪ್ರೀತ್ ಬುಮ್ರಾ ಎಂದು ಬಹಿರಂಗಪಡಿಸಿದ್ದರು.
“ನಮ್ಮ ಪುಟ್ಟ ಕುಟುಂಬ ಬೆಳೆದಿದೆ, ಮತ್ತು ನಮ್ಮ ಹೃದಯಗಳು ನಾವು ಊಹಿಸಲಾಗದಷ್ಟು ತುಂಬಿವೆ! ಇಂದು ಬೆಳಿಗ್ಗೆ, ನಾವು ಅಂಗದ್ ಜಸ್ಪ್ರೀತ್ ಬುಮ್ರಾ ಎಂಬ ಪುಟ್ಟ ಹುಡುಗನನ್ನು ಜಗತ್ತಿಗೆ ಸ್ವಾಗತಿಸಿದ್ದೇವೆ. ನಾವು ಚಂದ್ರನ ಮೇಲಿದ್ದೇವೆ ಮತ್ತು ನಮ್ಮ ಜೀವನದ ಈ ಹೊಸ ಅಧ್ಯಾಯವು ತರುವ ಎಲ್ಲದಕ್ಕೂ ಕಾಯಲು ಸಾಧ್ಯವಿಲ್ಲ”ಎಂದು ಬುಮ್ರಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : Asia Cup 2023: ಭಾರತ-ಪಾಕ್ ನಡುವಣ ಸೂಪರ್-4 ಪಂದ್ಯಕ್ಕೆ ಮಳೆ ಬಂದರೆ ಮೀಸಲು ದಿನ ಇದೆಯೇ?
ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಮತ್ತು ನಂತರದ ಏಕದಿನ ವಿಶ್ವಕಪ್ನಂತಹ ಪ್ರತಿಷ್ಠಿತ ಪಂದ್ಯಾವಳಿಗಳೊಂದಿಗೆ ಮುಂಬರುವ ತಿಂಗಳುಗಳಲ್ಲಿ ಭಾರತಕ್ಕಾಗಿ ವೇಗದ ಬೌಲರ್ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಮೈದಾನ ಒಣಗಿಸಲು ಸರ್ಕಸ್
ಪ್ರೇಮದಾಸ ಕ್ರೀಡಾಂಗಣದ ಸಿಬ್ಬಂದಿಗಳ ಬದ್ದತೆ ಮತ್ತೊಂದು ಬಾರಿ ಪ್ರಶಂಸೆಗೆ ಪಾತ್ರವಾಯಿತು. ಸೆ. 2ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ಪಂದ್ಯ ನಡೆದಾಗ ಮಳೆ ಬಂದು ಪಂದ್ಯ ಮೊಟುಕುಗೊಂಡಿತ್ತು. ಈ ವೇಳೆ ಮೈದಾನದ ಸಿಬ್ಬಂದಿ ಇಡೀ ಕ್ರೀಡಾಂಗಣಕ್ಕೆ ಹೊದಿಕೆ ಹಾಕಿ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದರು. ಅದೇ ಭಾನುವಾರವೂ ಮತ್ತೆ ಅದೇ ರೀತಿ ಸ್ಟೇಡಿಯಮ್ ಒದ್ದೆಯಾಗದಂತೆ ನೋಡಿಕೊಳ್ಳಲು ಯತ್ನಿಸಿದರು. ಆದರೆ, ನೀವು ಒಳಗೆ ನುಗ್ಗಿದ ಕಾರಣ ಅವರಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ.