ನವ ದೆಹಲಿ: ಜಾಗತಿಕ ಕ್ರಿಕೆಟ್ ಕ್ಷೇತ್ರದಲ್ಲಿ BCCI ಹೇಳಿದ್ದೇ ನಡೆಯುವುದಕ್ಕೆ ಅದು ಹೊಂದಿರುವ ಆರ್ಥಿಕ ಸಾಮರ್ಥ್ಯವೇ ಕಾರಣ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಐಪಿಎಲ್ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು BCCI 48,390 ಕೋಟಿ ರೂಪಾಯಿಗೆ ಮಾರಾಟ ಮಾಡಿತ್ತು. ಇದನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಅಫ್ರಿದಿ ಈ ಮಾತನ್ನು ಹೇಳಿದ್ದಾರೆ.
ಬಿಸಿಸಿಐ ಜಾಗತಿಕ ಕ್ರಿಕೆಟ್‌ನ ದೊಡ್ಡ ಮಾರುಕಟ್ಟೆ. ಅದು ಹಣದ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಹೋಗುತ್ತಿದೆ,ʼ ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.
೨೦೨೩-೨೭ರವರೆಗಿನ ಐದು ವರ್ಷಗಳ ಅವಧಿಯ ಐಪಿಎಲ್ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಬಿಸಿಸಿಐ ಇತ್ತೀಚಿಗೆ ಮಾರಾಟ ಮಾಡಿತ್ತು. ಸ್ಟಾರ್ ಇಂಡಿಯಾ ಟಿವಿ ನೇರ ಪ್ರಸಾರದ ಹಕ್ಕುಗಳನ್ನು ಗಳಿಸಿದ್ದರೆ, ವಯಾಕಾಮ್ ೧೮ ಡಿಜಿಟಲ್ ನೇರ ಪ್ರಸಾರದ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಈ ವಹಿವಾಟಿನಲ್ಲಿ ಬಿಸಿಸಿಐ ಇದುವರೆಗಿನ ಗರಿಷ್ಠ ಅದಾಯ ತಮ್ಮದಾಗಿಸಿಕೊಂಡಿತ್ತು.
“ಕ್ರಿಕೆಟ್ ಸೇರಿದಂತೆ ಎಲ್ಲವೂ ಈಗ ಮಾರುಕಟ್ಟೆ ಹಾಗೂ ಆರ್ಥಿಕತೆಯ ಮೇಲೆ ನಿಂತಿರುತ್ತವೆ. ಅಂತೆಯೇ ಭಾರತದಲ್ಲಿ ಕ್ರಿಕೆಟ್‌ಗೆ ದೊಡ್ಡ ಮಟ್ಟದ ಮಾರುಕಟ್ಟೆ ಸೃಷ್ಟಿಯಾಗಿದೆ. ಅಲ್ಲದೆ ಬಿಸಿಸಿಐ ನಿರೀಕ್ಷೆ ಮಾಡಿದಷ್ಟು ಆದಾಯ ಕೂಡ ಸಂಗ್ರಹವಾಗುತ್ತಿದೆ. ಹೀಗಾಗಿ ಅವರು ಹೇಳಿದಂತೆ ನಡೆಯುತ್ತಿದೆʼʼ ಎಂದು ಅಫ್ರಿದಿ ಹೇಳಿದ್ದಾರೆ.
ಶಾಹಿದ್ ಅಫ್ರಿದಿ ೨೦೦೮ರಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಐಪಿಎಲ್‌ನಲ್ಲಿ ಆಡಿದ್ದರು. ಡೆಕ್ಕನ್ ಚಾರ್ಜರ್ಸ್ ತಂಡದ ಪರ ಆಡಿದ್ದ ಅವರು ಪ್ರಭಾವಿ ಪ್ರದರ್ಶನ ನೀಡಿದ್ದರು. ಆದರೆ, ಮುಂಬಯಿಯಲ್ಲಿ ಪಾಕಿಸ್ತಾನ ಉಗ್ರರ ದಾಳಿ ನಡೆದ ಬಳಿಕ ಭಾರತ ಹಾಗೂ ಪಾಕಿಸ್ತಾನದ ಕ್ರಿಕೆಟ್ ಸಂಬಂಧ ಕಡಿದು ಹೋಗಿತ್ತು. ಹೀಗಾಗಿ ಆ ಬಳಿಕದ ಐಪಿಎಲ್ ಆವೃತ್ತಿಗಳಲ್ಲಿ ಪಾಕಿಸ್ತಾನದ ಕ್ರಿಕೆಟಿಗರಿಗೆ ಆಡಲು ಅವಕಾಶ ಲಭಿಸಿರಲಿಲ್ಲ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಾಕಿಸ್ತಾನ ಸೂಪರ್ ಲೀಗ್ ಆರಂಭಿಸಿದೆ. ಆದರೆ, ಅದು ಐಪಿಎಲ್‌ನಷ್ಟು ಜನಪ್ರಿಯತೆ ಪಡೆದುಕೊಂಡಿಲ್ಲ. ಬೆರಳೆಣಿಕೆಯ ಹಾಗೂ ಜನಪ್ರಿಯವಲ್ಲದ ವಿದೇಶಿ ಆಟಗಾರರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಆದಾಯ ಸಂಗ್ರಹ ಸಾಧ್ಯವಾಗುತ್ತಿಲ್ಲ.
ಐಪಿಎಲ್ ಹರಾಜಿನಲ್ಲಿ ಗಳಿಸಿರುವ ದೊಡ್ಡ ಮೊತ್ತದಿಂದ ಪ್ರಭಾವಿತರಾಗಿರುವ BCCI ಕಾರ್ಯದರ್ಶಿ ಜಯ್ ಶಾ ಅವರು ಮುಂದಿನ ಕೆಲವು ಆವೃತ್ತಿಗಳನ್ನು ಎರಡೂವರೆ ತಿಂಗಳ ಕಾಲ ಆಯೋಜಿಸುವ ಕುರಿತೂ ಮಾತನಾಡಿದ್ದರು. ಆ ಮೂಲಕ ಹೆಚ್ಚೆಚ್ಚು ವಿದೇಶಿ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳುವುದು ಬಿಸಿಸಿಐ ಉದ್ದೇಶವಾಗಿತ್ತು. ಅಂತೆಯೇ ಪಂದ್ಯಗಳ ಹೆಚ್ಚಳದಿಂದ ಜಾಹೀರಾತು ಆದಾಯ ಹೆಚ್ಚಳ ಮಾಡುವುದು ಕೂಡ ಬಿಸಿಸಿಐ ಗುರಿಯಾಗಿದೆ.
ಐಪಿಎಲ್‌ನ ಮುಂದಿನ ಐದು ವರ್ಷಗಳಲ್ಲಿ ಒಟ್ಟಾರೆ ೪೧೦ ಪಂದ್ಯಗಳು ನಡೆಯಲಿವೆ. ಒಟ್ಟು ಹತ್ತು ತಂಡಗಳ ಐಪಿಎಲ್ ನಡೆಯಲಿದ್ದು, ಮೊದಲ ಮೂರು ಆವೃತ್ತಿಗಳಲ್ಲಿ ತಲಾ ೭೪ ಹಾಗೂ ಕೊನೇ ಎರಡು ಆವೃತ್ತಿಗಳಲ್ಲಿ ೮೪ ಹಾಗೂ ೯೪ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ.
“ಐಪಿಎಲ್ ಅನ್ನು ಎಷ್ಟು ಸಾಧ್ಯವೋ ಅಷ್ಟು ವಿಸ್ತರಿಸುವುದು ನಮ್ಮ ಗುರಿ. ಹೆಚ್ಚೆಚ್ಚು ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಿದ್ದೇವೆ. ಪ್ರಮುಖವಾಗಿ ವಿದೇಶಿ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ನಾನಾ ಕ್ರಿಕೆಟ್ ದೇಶಗಳ ಮಂಡಳಿಗಳ ಜತೆ ಮಾತುಕತೆ ನಡೆಸಲಾಗಿದೆ,ʼʼ ಎಂದು ಜಯ್ ಶಾ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದನ್ನೂ ಓದಿ| RAHUL DRAVID ಬಿಜೆಪಿ ಸೇರಿದ್ರಾ ಹೇಗೆ? ಯುವಮೋರ್ಚಾ ಕಾರ್ಯಕಾರಿಣಿಯಲ್ಲಿ ಭಾಗಿ, ನೋ ಎಂದ ಬಿಸಿಸಿಐ