ಢಾಕಾ: ಬಾಂಗ್ಲಾದೇಶದ ಕ್ರಿಕೆಟ್ ತಂಡದ ಹಿರಿಯ ಆಲ್ರೌಂಡರ್ ಶಕಿಬ್ ಅಲ್ ಹಸನ್(Shakib Al Hasan) ತಾಳ್ಮೆ ಕಳೆದುಕೊಂಡು, ಅಂಪೈರ್ಗಳ ಜತೆ ಮತ್ತು ಅಭಿಮಾನಿಗಳ ನಡುವೆ ಈಗಾಗಲೇ ಹಲವು ಬಾರಿ ಕಿರಿಕ್ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಸೆಲ್ಫಿ ಫೋಟೋ ತೆಗೆಸಿಕೊಳ್ಳಲು ಬಂದ ಅಭಿಮಾನಿಗೆ ಶಕಿಬ್ ಥಳಿಸಲು ಮುಂದಾಗಿದ್ದಾರೆ. ಈ ವಿಡಿಯೊ ವೈರಲ್(Video Viral) ಆಗಿದ್ದು ಶಕಿಬ್ ವರ್ತನೆ ಬಗ್ಗೆ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಬಳಿಕ ಕಣ್ಣಿನ ದೃಷ್ಟಿ ಸಮಸ್ಯೆಗೆ ಒಳಗಾಗಿದ್ದ ಶಕೀಬ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬಹುದಿನಗಳ ವಿಶ್ರಾಂತಿ ಪಡೆದಿದ್ದರು. ಇದೇ ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಆಡುವ ಸಲುವಾಗಿ ಢಾಕಾ ಪ್ರೀಮಿಯರ್ ಲೀಗ್ನಲ್ಲಿ ಆಡಲಿಳಿದಿದ್ದಾರೆ.
ಶೇಖ್ ಜಮಾಲ್ ಧನ್ಮೊಂಡಿ ಕ್ಲಬ್ ಪರವಾಗಿ ಆಡುತ್ತಿರುವ ಶಕೀಬ್ ಪಂದ್ಯಕ್ಕೂ ಮುನ್ನ ಸಹ ಆಟಗಾರರ ಜತೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ಮೈದಾನಕ್ಕೆ ಬಂದು ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಈ ಅಭಿಮಾನಿಯನ್ನು ಕಂಡ ಕೂಡಲೇ ಕೆರಳಿದ ಶಕೀಬ್, ಇಲ್ಲ ಫೋಟೊ ತೆಗೆಸಿಕೊಳ್ಳಲ್ಲ ಇಲ್ಲಿಂದ ಹೋಗು ಎಂದು ಸೂಚನೆ ನೀಡಿದ್ದಾರೆ. ಆದರೂ ಕೂಡ ಅಭಿಮಾನಿ ಮತ್ತೆ ಮತ್ತೆ ಫೋಟೊ ತೆಗೆಯಲು ಒತ್ತಾಯಿಸಿದಾಗ, ಅವರ ಕುತ್ತಿಗೆಗೆ ಕೈಹಾಕಿದ ಶಾಕಿಬ್ ಹೊಡೆಯಲು ಮುಂದಾದರು. ಈ ವಿಡಿಯೊ ಇದೀಗ ವೈರಲ್ ಆಗುತ್ತಿದೆ.
ಶಕಿಬ್ ಅವರು ಈ ರೀತಿ ತಾಳ್ಮೆ ಕಳೆದುಕೊಂಡಿರುವುದು ಇದೇ ಮೊದಲೇನಲ್ಲ ಹಲವು ಬಾರಿ ಅವರು ಮೈದಾನದಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಅಂಪೈರ್ ಅವರೊಂದಿಗೆ ಶಕಿಬ್ ಹಲವು ಬಾರಿ ವಾಗ್ವಾದಕ್ಕೆ ಇಳಿದ ಹಲವು ನಿದರ್ಶನಗಳಿವೆ. ಕಳೆದ ಬಾರಿಯ ಬಾಂಗ್ಲಾ ಪ್ರೀಮಿಯರ್ ಲೀಗ್ನಲ್ಲಿ ಅಂಪೈರ್ ಅವರು ಔಟ್ ನೀಡಿಲ್ಲ ಎಂಬ ಕಾರಣಕ್ಕೆ ಶಬಿಕ್ ವಿಕೆಟ್ಗೆ ಕಾಲಿನಿಂದ ಒದ್ದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ Shakib Al Hasan : ರಾಜಕೀಯ ಆಟದಲ್ಲಿ ಗೆಲುವು ಕಂಡ ಶಕಿಬ್ ಅಲ್ ಹಸನ್
ಹಿಂದೊಮ್ಮೆ ಜಾಹೀರಾತು ಪ್ರಚಾರದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ ಶಕಿಬ್ ಸಾಗುವ ಮಾರ್ಗದಲ್ಲಿ ಅನೇಕ ಕ್ರೀಡಾಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಅಭಿಮಾನಿಯೊಬ್ಬ ಗುಂಪಿನ ಮಧ್ಯೆಯಿಂದ ಫೋಟೊ ತೆಗೆಯಲು ಮುಂದಾಗಿದ್ದ ಇದರಿಂದ ಸಿಟ್ಟಿಗೆದ್ದ ಶಕೀಬ್ತಲೆಯಿಂದ ಕ್ಯಾಪ್ ಎಳೆದಿದ್ದರು. ಅಲ್ಲದೆ ಕ್ಯಾಪ್ ನಿಂದಲೇ ಒಂದೆರಡು ಬಾರಿ ಥಳಿಸಿದ್ದರು.