Site icon Vistara News

Shakib Al Hasan : ರೋಹಿತ್ ಶರ್ಮಾ ​ಅವರಿಂದ ಶಕಿಬ್ ನಾಯಕತ್ವ ಕಲಿಯಲಿ ಎಂದ ಮಾಜಿ ಆಲ್​ರೌಂಡರ್​​

Rohit Sharma

ನವದೆಹಲಿ: ಶ್ರೀಲಂಕಾದ ಬ್ಯಾಟರ್​ ಏಂಜೆಲೊ ಮ್ಯಾಥ್ಯೂಸ್ ವಿರುದ್ಧ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಮಾಡಿರುವ ವಿವಾದಾತ್ಮಕ ಟೈಮ್ಡ್​ ಔಟ್​​ ಮನವಿಯು ಪಂದ್ಯದ ಹೊಳಪನ್ನು ನುಂಗಿ ಹಾಕಿತ್ತು. ಬಾಂಗ್ಲಾ ತಂಡ ಗೆದ್ದಿದ್ದರೂ ನಾಯಕನ ವರ್ತನೆ ಹಲವರಿಗೆ ಬೇಸರ ತರಿಸಿತ್ತು. ಕ್ರೀಡಾಸ್ಫೂರ್ತಿಯನ್ನು ಮಣ್ಣುಪಾಲು ಮಾಡಿ ಎದುರಾಳಿ ತಂಡದ ಆಟಗಾರನನ್ನು ಔಟ್ ಮಾಡುವುದು ಸರಿಯಲ್ಲ ಎಂದು ಹಲವು ಅಭಿಪ್ರಾಯಪಟ್ಟಿದ್ದರು. ಟೀಕಾಕಾರರ ಸಾಲಿಗೆ ಈಗ ಭಾರತ ತಂಡದ ಮಾಜಿ ಆಲ್​ರೌಂಡರ್ ಮೊಹಮ್ಮದ್ ಕೈಫ್ ಸೇರಿಕೊಂಡಿದ್ದಾರೆ. ಶಕಿಬ್ ನಾಯಕತ್ವದ ಘನತೆಯನ್ನು ಹಾಳು ಮಾಡಿದ್ದಾರೆ ಎಂದು ಕೈಫ್​ ಅಭಿಪ್ರಾಯಪಟ್ಟಿದ್ದು, ಇಂಥ ವಿಚಾರಕ್ಕೆ ಬಂದಾಗ ರೋಹಿತ್ ಶರ್ಮಾ ಅವರಿಂದ ಶಕಿಬ್ ಕಲಿಯುವುದು ಸಾಕಷ್ಟಿದೆ ಎಂದು ಟ್ವೀಟ್ ಹೇಳಿಕೆ ನೀಡಿದ್ದಾರೆ.

ವಿಕೆಟ್ ಪತನಗೊಂಡ ನಂತರತದ ಎರಡು ನಿಮಿಷಗಳ ಒಳಗೆ ಬ್ಯಾಟ್ ಮಾಡಲು ಬಂದು ಮೊದಲ ಎಸೆತವನ್ನು ಆಡಲು ವಿಫಲವಾದ ಮ್ಯಾಥ್ಯೂಸ್ ಅವರನ್ನು ‘ಟೈಮ್ಡ್ ಔಟ್’ ಎಂದು ಔಟ್ ಮಾಡಬೇಕೆಂದು ಶಕೀಬ್ ಮನವಿ ಮಾಡಿದ್ದರು. ಈ ವಿಧಾನವು ನಿಯಮ ಬದ್ಧವಾಗಿದೆ ಮತ್ತು ಎಂಸಿಸಿಯ ನಿಯಮದ ವ್ಯಾಪ್ತಿಯಲ್ಲಿದೆ. ಆದರೆ, ಕ್ರೀಡಾಸ್ಫೂರ್ತಿ ವಿಚಾರಕ್ಕೆ ಬಂದಾಗ ಇದು ಸರಿಯಲ್ಲ ಎಂಬುದು ಬಹುತೇಕರ ಅಭಿಪ್ರಾಯ. ಹೀಗಾಗಿ ಪಂದ್ಯದ ಬಳಿಕ ಶಕಿಬ್​ಗೆ ಎಲ್ಲರೂ ಪಾಠ ಹೇಳಿದ್ದಾರೆ. ನಿಮ್ಮ ನಾಯಕತ್ವವೇ ಸರಿ ಇಲ್ಲ ಎಂದು ನುಡಿದಿದ್ದಾರೆ.

ಆನ್ ಫೀಲ್ಡ್ ಅಂಪೈರ್ ಗಳ ಪ್ರತಿರೋಧದ ಹೊರತಾಗಿಯೂ ಬಾಂಗ್ಲಾದೇಶದ ನಾಯಕ ಮನವಿಯನ್ನು ಹಿಂಪಡೆಯಲು ನಿರಾಕರಿಸಿದರು. ಇದು ಕ್ರಿಕೆಟ್​ ಪಂಡಿತರ ಬೇಸರಕ್ಕೆ ಕಾರಣವಾಗಿತ್ತು. ಇದನ್ನು ಉದ್ದೇಶಿಸಿ ಬರೆದ ಕೈಫ್​, ಬಾಂಗ್ಲಾದೇಶ ನಾಯಕ ಶಕಿಬ್​ ಕಲಿಯುವುದು ಇನ್ನಷ್ಟಿದೆ. ಅವರು ಟೀಮ್ ಇಂಡಿಯಾ ನಾಯಕ ರೋಹಿತ್ ಅವರಿಂದ ಕಲಿಯಬೇಕಾಗಿದೆ ಎಂದು ಹೇಳಿದ್ದಾರೆ.

ರೋಹಿತ್ ಏನು ಮಾಡಿದ್ದರು?

ಈ ವರ್ಷದ ಆರಂಭದಲ್ಲಿ ಗುವಾಹಟಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಆಟದ ಸ್ಫೂರ್ತಿಯನ್ನು ಎತ್ತಿಹಿಡಿದ್ದರು. ಆ ಪಂದ್ಯದಲ್ಲಿ ಲಂಕಾ ನಾಯಕ ದಸುನ್​ ಶನಕಾ ಬೌಲರ್ ಚೆಂಡು ಎಸೆಯುವ ಮೊದಲೇ ನಾನ್​ಸ್ಟ್ರೈಕ್​ ಬದಿಯಿಂದ ಕ್ರೀಸ್​ ತೊರೆಯುತ್ತಿದ್ದರು. ಎಚ್ಚರಿಕೆಯ ಹೊರತಾಗಿಯೂ ಅವರು ತಮ್ಮ ಅಭ್ಯಾಸ ಮುಂದುವರಿಸಿದ್ದರು. ಬಳಿಕ ಮೊಹಮ್ಮದ್ ಶಮಿ ಅವರನ್ನು ಮಂಕಡ್ ಔಟ್ ಮಾಡಿದ್ದರು. ಆದರೆ, ರೋಹಿತ್ ಆ ಮನವಿಯನ್ನು ವಾಪಸ್ ಪಡೆದುಕೊಂಡಿದ್ದರು. ಹೀಗಾಗಿ ದಸುನ್ ಆಟ ಮುಂದುವರಿಸಿದ್ದರು.

ನಿಯಮದ ಪ್ರಕಾರ ನಾನ್​ಸ್ಟ್ರೈಕ್ ಎಂಡ್​ನಲ್ಲಿ ರನ್​ಔಟ್ ಮಾಡುವ ಅವಕಾಶ ಇದೆ. ಹೀಗಾಗಿ ಶಮಿ ಮಾಡಿದ್ದು ಕಾನೂನುಬದ್ಧ ಔಟ್​. ಆದರೆ, ರೋಹಿತ್ ಕ್ರೀಡಾಸ್ಫೂರ್ತಿ ಮೆರೆದಿದ್ದರು.

ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ಮ್ಯಾಥ್ಯೂಸ್ ಅವರ ಮೇಲ್ಮನವಿಯನ್ನು ಹಿಂತೆಗೆದುಕೊಳ್ಳದಿದ್ದಕ್ಕಾಗಿ ಶಕೀಬ್ ಅವರನ್ನು ಟೀಕಿಸಿದ್ದಾರೆ ಮತ್ತು ಭಾರತದ ನಾಯಕ ರೋಹಿತ್ ಶರ್ಮಾ ಅವರಿಂದ ಕಲಿಯುವಂತೆ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ : Shakib Al Hasan : ಕ್ರೀಡಾ ಸ್ಫೂರ್ತಿ ಮರೆತ ಶಕಿಬ್​ ವಿಶ್ವ ಕಪ್​ ಟೂರ್ನಿಯಿಂದಲೇ ಔಟ್​​

“ಶಕೀಬ್ ರೋಹಿತ್ ಶರ್ಮಾ ಅವರಿಂದ ಕಲಿಯಬೇಕು” ಎಂದು ಕೈಫ್ ತಮ್ಮ ಹಳೆಯ ಪೋಸ್ಟ್ ಅನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಉಲ್ಲೇಖಿಸಿದ್ದಾರೆ, ಇದರಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಪಂದ್ಯದ ಸಮಯದಲ್ಲಿ ರನ್ ಔಟ್ ಮನವಿಯನ್ನು ಹಿಂತೆಗೆದುಕೊಂಡ ನಂತರ ರೋಹಿತ್ ಅವರ ನಾಯಕತ್ವವನ್ನು ಶ್ಲಾಘಿಸಿದ್ದರು.

“ಶಮಿ ಹಾಗೆ ಮಾಡುತ್ತಾರೆಂದು ನನಗೆ ತಿಳಿದಿರಲಿಲ್ಲ ಎಂದು ರೋಹಿತ್ ಪಂದ್ಯದ ನಂತರ ರೋಹಿತ್​ ಹೇಳಿದ್ದರು. ಶನಕ 98 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ನಾವು ಅದನ್ನು ಅವರಿಗೆ ಅವಕಾಶ ನೀಡಬೇಕಾಗಿತ್ತು. ಅವರನ್ನು ಆ ರೀತಿ ಔಟ್ ಮಾಡಿ ಕಳುಹಿಸುವುದು ಸರಿಯಲ್ಲ ಎಂದು ರೋಹಿತ್ ಪಂದ್ಯದ ಬಳಿಕ ಹೇಳಿದ್ದರು.

Exit mobile version