ಬೆಂಗಳೂರು: 27 ವರ್ಷಗಳ ಬಳಿಕ ಅದೂ ಕೂಡ ಆಸ್ಟ್ರೇಲಿಯಾದ ಭದ್ರಕೋಟೆ ಎನಿಸಿಕೊಂಡಿದ್ದ ಗಾಬಾ ಕ್ರೀಡಾಂಗಣಲ್ಲಿ ಆಸ್ಟ್ರೇಲಿಯಾದ ಸೊಕ್ಕಡಗಿಸಿ ವೆಸ್ಟ್ ಇಂಡೀಸ್ಗೆ ಐತಿಹಾಸಿಕ ಗೆಲುವು ತಂದು ಕೊಟ್ಟ ವೇಗಿ ಶಮಾರ್ ಜೋಸೆಫ್(Shamar Joseph) ಅವರ ಕ್ರಿಕೆಟ್ ಜರ್ನಿಯೇ ಒಂದು ರೋಚಕ. ಅವರ ಕ್ರಿಕೆಟ್ ಬದುಕಿನ ಸ್ಟೋರಿ ಯಾವ ಸಿನಿಮಾ ಕಥೆಗೂ ಕಡಿಮೆಯೇನಲ್ಲ.
ಹೌದು, ಕೆಲವು ಕ್ರೀಡಾಪಟುಗಳ ಬಗ್ಗೆ ಬರೆಯುವಾಗ, ಓದುವಾಗ ಯಾವಾಗಲೂ ರೋಮಾಂಚನಗೊಳ್ಳುತ್ತೇವೆ. ಕಡು ಬಡತನದಲ್ಲಿ ಬೆಳೆದು ಕೊನೆಗೆ ಯಶಸ್ಸಿನ ಸಾಧನೆಯ ಗೌರಿಶಿಖರವನ್ನು ಏರಿ ಗೆಲುವಿನ ಬಾವುಟ ಹಾರಿಸಿದ ಅದೆಷ್ಟೋ ಕ್ರೀಡಾಪಟುಗಳಿದ್ದಾರೆ. ಇದೀಗ ಈ ಸಾಲಿಗೆ ವೆಸ್ಟ್ ಇಂಡೀಸ್ ತಂಡದ ಶಮಾರ್ ಜೋಸೆಫ್ ಕೂಡ ಸೇರ್ಪಡೆಯಾಗಿದ್ದಾರೆ.
ಶಮಾರ್ ಜೋಸೆಫ್ ಶ್ರೀಮಂತ ಕುಟುಂಬದಲ್ಲಿ ಅಥವಾ ಕ್ರಿಕೆಟ್ ಹಿನ್ನೆಲೆಯಿಂದ ಬಂದ ಪ್ರತಿಭೆಯಲ್ಲ. ಅಚ್ಚರಿ ಎಂದರೆ ಯಾವುದೇ ವೃತ್ತಿಪರ ಕ್ರಿಕೆಟ್ ಕೂಡ ಆಟದೆ ಅವರು ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಲು ನೆರವಾದದ್ದು ಕೆರಿಬಿಯನ್ ಪ್ರೀಮಿಯರ್ ಲೀಗ್. ಈ ಟೂರ್ನಿಗೆ ಆಯ್ಕೆಯಾದ ಬಳಿಕ ಶಮಾರ್ ಅವರ ಬದುಕಿನ ದಿಕ್ಕೇ ಬದಲಾಯಿತು.
ಸಾವನ್ನೇ ಗೆದಿದ್ದ ಶಮಾರ್ ಜೋಸೆಫ್
ಜೋಸೆಫ್ ಅವರು ಊರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಮ್ಮ ಮೇಲೆ ಮರ ಬೀಳುವುದರಿಂದ ಅಲ್ಪದರಲ್ಲೇ ಪಾರಾಗಿ, ಸಾವಿನಿಂದ ಬಚಾವಾಗಿದ್ದರು. ಕೇವಲ 400 ಜನಸಂಖ್ಯೆಯುಳ್ಳ ಕೆರಿಬಿಯನ್‌ನ ಹಳ್ಳಿಯೊಂದರ ಪ್ರತಿಭೆಯಾಗಿರುವ ಜೋಸೆಫ್ ಕಾಡಲ್ಲಿ ಮರ ಕಡಿಯುವ ವೃತ್ತಿ ಮಾಡುತ್ತಿದ್ದರು. ಇದಾದ ಬಳಿಕ ಅವರು 2021ರ ವರೆಗೆ ಬಾರ್ಬಿಸ್ ಎಂಬಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
It's all over!!!
— cricket.com.au (@cricketcomau) January 28, 2024
Shamar Joseph takes SEVEN #AUSvWI pic.twitter.com/fsGR6cjvkj
ಹಣ್ಣು, ಬಾಟಲ್ ಮೂಲಕ ಬೌಲಿಂಗ್ ಅಭ್ಯಾಸ
ಜೋಸೆಫ್ ಅವರು ಕ್ರಿಕೆಟ್ಗೆ ಮರಳಿದ್ದು ಮತ್ತು ಬೌಲಿಂಗ್ ಅಭ್ಯಾಸ ನಡೆಸಿದ್ದು ಪ್ಲಾಸ್ಟಿಕ್ ಬಾಟಲ್ ಮತ್ತು ಹಣ್ಣುಗಳನ್ನೇ ಎಸೆದು. ಈ ವಿಚಾರ ನಂಬಲು ಕಷ್ಟವಾದರೂ ಕೂಡ ಇದನ್ನು ನಂಬಲೇ ಬೇಕು. 2018ರ ವರೆಗೂ ಅವರ ಊರಿನಲ್ಲಿ ಮೊಬೈಲ್, ಇಂಟರ್ನೆಟ್ ಸೇವೆ ಕೂಡ ಇರಲಿಲ್ಲ. ಇಂತಹ ಕುಗ್ರಾಮದಿಂದ ಬಂದ ಜೋಸೆಫ್ ಇಂದು ವಿಂಡೀಸ್‌ನ ಆಪತ್ಬಾಂಧವ. ಅವರ ಪ್ರದರ್ಶನಕ್ಕೆ ಇಡೀ ಕ್ರಿಕೆಟ್ ಜಗತ್ತೇ ಸಲಾಂ ಹೊಡೆದಿದೆ. ಸಚಿನ್ ತೆಂಡುಲ್ಕರ್, ಯಾನ್ ಲಾರಾ, ಕಾರ್ಲ್ ಹೂಪರ್ ಸೇರಿದಂತೆ ಹಲವರು ಜೋಸೆಫ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನೋವು ಮರೆತು ಆಡಿದ ಜೋಸೆಫ್
ವೆಸ್ಟ್ ಇಂಡೀಸ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಶಮರ್ ಜೋಸೆಫ್ ಬ್ಯಾಟಿಂಗ್ ನಡೆಸುವ ವೇಳೆ ಮಿಚೆಲ್ ಸ್ಟಾರ್ಕ್ ಅವರು ಎಸೆದ ಯಾರ್ಕರ್ ಎಸೆತಕ್ಕೆ ಕಾಲಿನ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಗಾಯಗೊಂಡ ಜೋಸೆಫ್ಗೆ ಫಿಸಿಯೋ ಪ್ರಥಮ ಚಿಕಿತ್ಸೆ ನೀಡಿದರೂ ಕೂಡ ಗಾಯ ಗಂಭೀರವಾದ ಪರಿಣಾಮ ಅವರಿಂದ ಎದ್ದು ನಿಲ್ಲಲೂ ಆಗಿರಲಿಲ್ಲ. ಹೀಗಾಗಿ ಅವರು ರಿಟೈರ್ಡ್ ಔಟ್ ಆಗಿ ಕುಂಟುತಾ ಮೈದಾನ ತೊರೆದಿದ್ದರು. ಅವರನ್ನು ಸಹ ಆಟಗಾರರು ಭುಜದ ಬಲದಿಂದ ಮೈದಾನದಿಂದ ಡ್ರೆಸ್ಸಿಂಗ್ ರೂಮ್ಗೆ ಕರೆ ತಂದಿದ್ದರು. ನೋವಿನಿಂದ ನರಳಿದ್ದ ಅವರು ಪಂದ್ಯ ಆಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಛಲ ಬಿಡದ ಅವರು ಅಚ್ಚರಿ ಎಂಬಂತೆ ಮರು ದಿನ ಬೌಲಿಂಗ್ ದಾಳಿಗಿಳಿದರು. ಆಸೀಸ್ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿ 11.5 ಓವರ್ ಬೌಲ್ ಮಾಡಿ 7 ವಿಕೆಟ್ ಕಬಳಿಸಿ ಗೆಲುವಿನ ರೂವಾರಿಯಾದರು.
ಇದನ್ನೂ ಓದಿ AUS vs WI: ತವರಿನಲ್ಲೇ ಆಸೀಸ್ ಸೊಕ್ಕಡಗಿಸಿದ ವಿಂಡೀಸ್; 27 ವರ್ಷಗಳ ಬಳಿಕ ಐತಿಹಾಸಿಕ ಗೆಲುವು