ಲಕ್ನೋ: ಟೀಮ್ ಇಂಡಿಯಾ ಪ್ರಧಾನ ವೇಗಿ ಮೊಹಮ್ಮದ್ ಶಮಿ(Mohammed Shami) ಅವರು ಈಗಾಗಲೇ ಮೊನಚಾದ ಬೌಲಿಂಗ್ ಮೂಲಕ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ. ಇದೀಗ ಬ್ಯಾಟಿಂಗ್ನಲ್ಲಿಯೂ ತಮ್ಮ ಪರಾಕ್ರಮ ತೋರುವ ನಿಟ್ಟಿನಲ್ಲಿ ಅವರು ತಮ್ಮ ಫಾರ್ಮ್ ಹೌಸ್ನಲ್ಲಿ ಪಿಚ್ ಒಂದನ್ನು ನಿರ್ಮಿಸಿದ್ದಾರೆ. ಇದರ ವಿಡಿಯೊವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಫಾರ್ಮ್ ಹೌಸ್ನಲ್ಲಿ ಪಿಚ್ ನಿರ್ಮಿಸಿ ಕಠಿಣ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಮೂರು ವಿಡಿಯೊವನ್ನು ಶಮಿ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕವರ್ ಡ್ರೈವ್, ಹುಕ್ ಶಾಟ್, ಹೀಗೆ ನಾನಾ ಪ್ರಕಾರದ ಕ್ರಿಕೆಟ್ ಶಾಟ್ಗಳನ್ನು ಶಮಿ ಅಭ್ಯಾಸ ನಡೆಸಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಆಲ್ರೌಂಡರ್ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ನೆರವಾಗಲು ಸಿದ್ಧತೆ ಮಾಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 2 ಅರ್ಧಶತಕ ಬಾರಿಸಿದ ಸಾಧನೆಯನ್ನು ಹೊಂದಿದ್ದಾರೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಸೇರಿ 970 ರನ್ ಬಾರಿಸಿದ್ದಾರೆ.
ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ಭಾಗವಾಗಿರುವ ಅವರು ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಏಕದಿನ ವಿಶ್ವಕಪ್ ಬಳಿಕ ಶಮಿ ಸದ್ಯ ಕ್ರಿಕೆಟ್ನಿಂದ ವಿಶ್ರಾಂತಿ ಪಡೆದಿದ್ದಾರೆ. ಡಿಸೆಂಬರ್ 26 ರಿಂದ ಮೊದಲ ಟೆಸ್ಟ್ ಆರಂಭವಾಗಲಿದೆ. ಹೀಗಾಗಿ ಮುಂದಿನ ವಾರ ಟೆಸ್ಟ್ ಆಡಲಿರುವ ಆಟಗಾರರು ಆಫ್ರಿಕಾ ಕಡೆಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ.
ಇದನ್ನೂ ಓದಿ ನಾನು ಭಾರತೀಯ, ಮುಸ್ಲಿಂ ಎಂದು ಹೆಮ್ಮೆಪಡುತ್ತೇನೆ; ಮೊಹಮ್ಮದ್ ಶಮಿ
ವಿಶ್ವಕಪ್ ಟೂರ್ನಿಯಲ್ಲಿ ಶಮಿ ಅವರು ಕೇವಲ 7 ಪಂದ್ಯಗಳನ್ನು ಆಡಿ 24 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡಿದ್ದರು. ಎರಡು ಬಾರಿ ಐದು ವಿಕೆಟ್‌ಗಳು ಮತ್ತು ಒಂದು ಬಾರಿ ಏಳು ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಶಮಿಯ ಘಾತಕ ಬೌಲಿಂಗ್ ಮುಂದೆ ಎದುರಾಳಿ ತಂಡದ ಬ್ಯಾಟರ್ಗಳು ರನ್ ಗಳಿಸಲು ಪರದಾಟ ನಡೆಸಿದ್ದರು.
ಅರ್ಜುನ ಪ್ರಶಸ್ತಿಗೆ ಶಿಫಾರಸು
ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ದೇಶದ ಶತಕೋಟಿ ಜನರ ಮನಗೆದ್ದಿದ್ದ ಮೊಹಮ್ಮದ್ ಶಮಿ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಸಚಿವಾಲಯದ ಮೂಲಗಳ ಪ್ರಕಾರ, ಮೊಹಮ್ಮದ್ ಶಮಿ ಅವರ ಹೆಸರನ್ನು ಸೇರಿಸಲು ಬಿಸಿಸಿಐ ಕ್ರೀಡಾ ಸಚಿವಾಲಯಕ್ಕೆ ವಿಶೇಷ ವಿನಂತಿಯನ್ನು ಮಾಡಿದೆ. ಏಕೆಂದರೆ ಅವರು ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವದ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಬಿಸಿಸಿಐ ವಿಶೇಷ ಮನವಿ ಸಲ್ಲಿಸಿ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.