ಕೋಲ್ಕೊತಾ: ಶಾರ್ದೂಲ್ ಠಾಕೂರ್ (68 ರನ್, 29 ಎಸೆತ, 9 ಫೋರ್, 3 ಸಿಕ್ಸರ್) ಅವರ ವಿಸ್ಫೋಟಕ ಬ್ಯಾಟಿಂಗ್ ನೆರವು ಪಡೆದ ಕೋಲ್ಕೊತಾ ನೈಟ್ ರೈಡರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 204 ರನ್ ಪೇರಿಸಿದೆ. ಈ ಮೂಲಕ ಆರ್ಸಿಬಿ ತಂಡಕ್ಕೆ 205 ರನ್ಗಳ ಗೆಲುವಿನ ಗುರಿ ಎದುರಾಗಿದೆ. ಶಾರ್ದೂಲ್ ಠಾಕೂರ್ಗೆ ಬೆಂಬಲವಾಗಿ ನಿಂತ ರಿಂಕು ಸಿಂಗ್ 33 ಎಸೆತಗಳಲ್ಲಿ 46 ರನ್ ಬಾರಿಸಿದ್ದಾರೆ. ಈ ಜೋಡಿ ಆರನೇ ವಿಕೆಟ್ಗೆ 112 ರನ್ ಬಾರಿಸುವ ಮೂಲಕ ಆರಂಭಿಕ ಮುನ್ನಡೆ ಪಡೆದಿದ್ದ ಆರ್ಸಿಬಿ ಹೆಚ್ಚು ಹೊತ್ತು ಖುಷಿ ಪಡದಂತೆ ನೋಡಿಕೊಂಡಿತು.
ಇಲ್ಲಿನ ಈಡನ್ ಗಾರ್ಡನ್ಸ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ಕೋಲ್ಕೊತಾ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಆದರೆ, ಆರಂಭಿಕ ಬ್ಯಾಟರ್ ರಹ್ಮನುಲ್ಲಾ ಗುರ್ಬಜ್ 44 ಎಸೆತಗಳಲ್ಲಿ 57 ರನ್ ಬಾರಿಸಿ ಭದ್ರ ತಳಪಾಯ ಹಾಕಿಕೊಟ್ಟರು.
ಆರಂಭಿಕ ಬ್ಯಾಟರ್ ವೆಂಕಟೇಶ್ ಅಯ್ಯರ್ ಅವರನ್ನು ಬೌಲ್ಡ್ ಮಾಡಿದ ಡೇವಿಡ್ ವಿಲ್ಲಿ ಆರ್ಸಿಬಿಗೆ ಉತ್ತಮ ಆರಂಭ ತಂದುಕೊಟ್ಟರು. 26 ರನ್ಗಳಿಗೆ ಮೊದಲ ವಿಕೆಟ್ ಕಳೆಕೊಂಡು ಕೋಲ್ಕೊತಾ ನಂತರದ ಎಸೆತದಲ್ಲಿ ಮನ್ದೀಪ್ ಸಿಂಗ್ ವಿಕೆಟ್ ಕೂಡ ಶೂನ್ಯಕ್ಕೆ ಔಟಾದರು. ಅವರು ಕೂಡ ವಿಲ್ಲಿ ಎಸೆತಕ್ಕೆ ಬೌಲ್ಡ್ ಆದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ನಾಯಕ ನಿತೀಶ್ ರಾಣಾ ಅವರು ಬ್ರೇಸ್ವೆಲ್ ಬೌಲಿಂಗ್ಗೆ ಔಟಾದರು. ಅವರ ಗಳಿಕೆ ಕೇವಲ ಒಂದು ರನ್. 89ಕ್ಕೆ 4 ವಿಕೆಟ್ ನಷ್ಟ ಮಾಡಿಕೊಂಡ ಕೋಲ್ಕೊತಾ ಆತಂಕಕ್ಕೆ ಬಿತ್ತು. ಸ್ಫೋಟಕ ಬ್ಯಾಟರ್ ಆ್ಯಂಡ್ರೆ ರಸೆಲ್ ಕೂಡ ಶೂನ್ಯಕ್ಕೆ ಔಟಾಗುವುದರೊಂದಿಗೆ ಆರ್ಸಿಬಿ ಪಾಳೆಯದಲ್ಲಿ ಸಂತೋಷ ಹೆಚ್ಚಿತು.
ಶಾರ್ದೂಲ್ ಭರ್ಜರಿ ಬ್ಯಾಟಿಂಗ್
11.3 ಓವರ್ಗಳಲ್ಲಿ89 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡ ಕೋಲ್ಕೊತಾ ದೊಡ್ಡ ಮೊತ್ತ ಪೇರಿಸಲು ಸಾಧ್ಯವೇ ಇಲ್ಲ ಎಂದು ಆರ್ಸಿಬಿ ಬಳಗ ಭಾವಿಸಿತ್ತು. ಆದರೆ, ಆ ಲೆಕ್ಕಾಚಾರವನ್ನು ಶಾರ್ದೂಲ್ ಹಾಗೂ ರಿಂಕು ಸಿಂಗ್ ಸುಳ್ಳಾಗಿಸಿದರು. ಕ್ರೀಸ್ಗೆ ಬಂದ ಶಾರ್ದೂಲ್ ನುರಿತ ಬ್ಯಾಟರ್ಗಳು ನಾಚುವಂತೆ ರನ್ ಗಳಿಸಿದರು. 20 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಅವರು 29 ಎಸೆತಗಳಲ್ಲಿ 68 ರನ್ ಬಾರಿಸಿದರು. ಆರಂಭದಲ್ಲಿ ಹೆಚ್ಚು ನಿಧಾನವಾಗಿ ಆಡಿದ ರಿಂಕು ಸಿಂಗ್ ಕೂಡ ಬಳಿಕ ಫೋರ್, ಸಿಕ್ಸರ್ಗಳ ಮಳೆ ಸುರಿಸಿದರು. ಇವರಿಬ್ಬರ ಬ್ಯಾಟಿಂಗ್ ಅಬ್ಬರಕ್ಕೆ ಆರ್ಸಿಬಿ ಬೌಲರ್ಗಳು ನಿರುತ್ತರರಾದರು.
ಇದನ್ನೂ ಓದಿ : IPL 2023: ಆರ್ಸಿಬಿ ಈ ಬಾರಿಯೂ ಕಪ್ ಗೆಲ್ಲಲ್ಲ; ಎಬಿಡಿ ವಿಲಿಯರ್ಸ್ ಅಚ್ಚರಿಯ ಹೇಳಿಕೆ
ರಿಂಕು ಸಿಂಗ್ ಹಾಗೂ ಶಾರ್ದೂಲ್ ಬ್ಯಾಟಿಂಗ್ ಅಬ್ಬರಕ್ಕೆ ಕೊನೇ 48 ಎಸೆತಗಳಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡ 110 ರನ್ ಬಾರಿಸಿತು. ಈ ಮೂಲಕ ಆರ್ಸಿಬಿ ಯೋಜನೆ ಬುಡಮೇಲಾಯಿತು. ಮೊದಲು ಉತ್ತಮ ಬೌಲಿಂಗ್ ಮಾಡಿದ್ದ ಆರ್ಸಿಬಿ ಬೌಳರ್ಗಳು ಬಳಿಕ ಅನಿಯಂತ್ರಿತ ರನ್ ಬಿಟ್ಟುಕೊಟ್ಟರು. 23 ಇತರ ರನ್ಗಳನ್ನು ಬಿಟ್ಟುಕೊಡುವ ಮೂಲಕ ಬೌಲಿಂಗ್ ದೌರ್ಬಲ್ಯವನ್ನು ಸಾಬೀತು ಪಡಿಸಿತು. ಇವೆಲ್ಲದರ ನಡುವೆ ಡೇವಿಡ್ ವಿಲ್ಲಿ (4 ಓವರ್, 16 ರನ್, 2 ವಿಕೆಟ್) ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಕರಣ್ ಶರ್ಮಾ 26 ರನ್ ನೀಡಿ 2 ವಿಕೆಟ್ ತಮ್ಮದಾಗಿಸಿಕೊಂಡರು.