ಕೋಲ್ಕೊತಾ: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕ ಶಿಖರ್ ಧವನ್ ತಮ್ಮ 50 ನೇ ಐಪಿಎಲ್ ಅರ್ಧಶತಕ ದಾಖಲಿಸಿದ್ದಾರೆ. . ಈಡನ್ ಗಾರ್ಡನಲ್ಲಿ ನಡೆದ ಐಪಿಎಲ್ 2023 ರ 53 ನೇ ಪಂದ್ಯದಲ್ಲಿ ಉಭಯ ಫ್ರಾಂಚೈಸಿಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ 41 ಎಸೆತಗಳಲ್ಲಿ 50 ರನ್ ಬಾರಿಸಿದ ಅವರು ಐಪಿಎಲ್ನಲ್ಲಿ ಅರ್ಧ ಶತಕ ಬಾರಿಸಿದ ಮೂರನೇ ಆಟಗಾರ ಎನಿಸಿಕೊಂಡರು. ವಿರಾಟ್ ಕೊಹ್ಲಿ ಹಾಗೂ ಡೇವಿಡ್ ವಾರ್ನರ್ ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ಇನ್ನಿಬ್ಬರು ಆಟಗಾರರು. ವಾರ್ನರ್ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಆಗಿದ್ದರೆ, ಕೊಹ್ಲಿ ಹಾಲಿ ಆವೃತ್ತಿಯಲ್ಲಿ ಈ ಮೈಲುಗಲ್ಲು ದಾಟಿದ್ದರು.
ಪಂದ್ಯದಲ್ಲಿ ಟಾಸ್ ಗೆದ್ದ ಪಿಬಿಕೆಎಸ್ ನಾಯಕ ಧವನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದಾಗ್ಯೂ, ನೈಟ್ ರೈಡರ್ಸ್ ತಂಡ ಸತತವಾಗಿ ವಿಕೆಟ್ ಕಬಳಿಸುವ ಮೂಲಕ ಪ್ರವಾಸಿ ತಂಡವನ್ನು ತಲ್ಲಣಗೊಳಿಸಿತು. ಅದರ ಹೊರತಾಗಿಯೂ, ಧವನ್ ತಮ್ಮ ಸ್ಥಿರ ಆಟದಿಂದ ಸ್ಕೋರ್ಬೋರ್ಡ್ ಏರುಗತಿಯಲ್ಲಿ ಸಾಗುವಂತೆ ನೋಡಿಕೊಂಡರು. ಅನುಭವಿ ಆಟಗಾರನಾಗಿರುವ ಅವರು ಕೆಲವು ಅದ್ಭುತ ಹೊಡೆತಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನೂ ಒದಗಿಸಿದರು. ಸ್ವೀಪ್ಗಳು ಹಾಗೂ ರಿವರ್ಸ್ ಸ್ವೀಪ್ಗಳು ಅದರಲ್ಲಿ ಸೇರಿಕೊಂಡಿದ್ದವು. ಅಲ್ಲದೆ, ಜಿತೇಶ್ ಶರ್ಮಾ ಅವರೊಂದಿಗೆ ಉತ್ತಮ ಜತೆಯಾಟ ನೀಡಿ ನಾಲ್ಕನೇ ವಿಕೆಟ್ಗೆ 53 ರನ್ ಕಲೆ ಹಾಕಿದ್ದರು.
ಇದನ್ನೂ ಓದಿ : Virat kohli : ರನ್ಗಳಿಸಲು ವಿರಾಟ್ ಕೊಹ್ಲಿಗೆ ಹೊಸ ತಂತ್ರ ಹೇಳಿಕೊಟ್ಟ ರವಿ ಶಾಸ್ತ್ರಿ
ಎಡಗೈ ಬ್ಯಾಟರ್ ಶಿಖರ್ ಧವನ್ 41 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ಔಟಾದರು. ಈ ಮೂಲಕ ಐಪಿಎಲ್ ವೃತ್ತಿಜೀವನದ 50ನೇ ಅರ್ಧಶತಕದ ಅದ್ಭುತ ಮೈಲಿಗಲ್ಲನ್ನು ತಲುಪಿದರು. ಆದಾಗ್ಯೂ, ಅವರು ಎದುರಾಳಿ ತಂಡದ ನಾಯಕ ನಿತೀಶ್ ರಾಣಾ ಎಸೆದ ಫುಲ್ ಲೆಂತ್ ಎಸೆತಕ್ಕೆ ಬಲಿಬಿದ್ದರು. ಅವರು ಬಾರಿಸಿದ್ದ ಚೆಂಡನ್ನು ವೈಭವ್ ಅರೋರಾ ಅವರನ್ನು ಲಾಂಗ್ ಆನ್ ನಲ್ಲಿ ಹಿಡಿದರು. ಈ ಮೂಲಕ ಅವರ ಅಮೋಘ ಇನಿಂಗ್ಸ್ ಕೊನೆಗೊಂಡಿತು. ಏತನ್ಮಧ್ಯೆ, ಹಾಲಿ ಟೂರ್ನಿಯಲ್ಲಿ ಧವನ್ ಅಜೇಯ 99 ರನ್ ಗಳಿಸುವ ಮೂಲಕ 37ರ ಹರೆಯದ ಧವನ್ 8 ಪಂದ್ಯಗಳಲ್ಲಿ 58.17ರ ಸರಾಸರಿಯಲ್ಲಿ 349 ರನ್ ಕಲೆ ಹಾಕಿದ್ದಾರೆ.
ಅಂದ ಹಾಗೆ ಹಾಲಿ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಗುಂಪು ಹಂತದಲ್ಲಿ ಆಡಿದ 10 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದು ಅಷ್ಟೇ ಪಂದ್ಯಗಳಲ್ಲಿ ಸೋತಿದೆ. -0.472 ನೆಟ್ ರನ್ ರೇಟ್ () ಹೊಂದಿರುವ ಪಂಜಾಬ್ ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಏಳನೇ ಸ್ಥಾನ ಪಡೆದುಕೊಂಡಿದೆ.
ಐಪಿಎಲ್ 16ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಮಣಿಸಿತ್ತು ಪಂಜಾಬ್ ತಂಡ. ಅಂತೆಯೇ ಉಳಿದಿರುವ ಪಂದ್ಯಗಳನ್ನು ಗೆದ್ದು ಪ್ಲೇಆಫ್ ಸ್ಥಾನ ಪಡೆಯಲು ಚಿಂತನೆ ನಡೆಸಿದೆ.