ಶಿವಮೊಗ್ಗ: 16 ವರ್ಷದೊಳಗಿನ ಏಕ ದಿನ ಕ್ರಿಕೆಟ್ ಪಂದ್ಯದಲ್ಲಿ ಮಲೆನಾಡಿನ ಪೋರ ತನ್ಮಯ್ ಮಂಜುನಾಥ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಬರೋಬ್ಬರಿ 407 ರನ್ ಬಾರಿಸಿ ಸರ್ವಕಾಲಿಕ ದಾಖಲೆಯೊಂದನ್ನು ಬರೆದಿದ್ದಾರೆ.
ಶಿವಮೊಗ್ಗ ನಗರದ ಪೆಸಿಟ್ ಕಾಲೇಜಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ 16 ವರ್ಷದೊಳಗಿನ ಜೋನಲ್ಸ್ ಪಂದ್ಯದಲ್ಲಿ ಭದ್ರಾವತಿ ತಂಡದ ವಿರುದ್ಧ ತನ್ಮಯ್ ಮಂಜುನಾಥ್ ೧೬೫ ಎಸೆತಗಳಿಂದ ಅಜೇಯ 407 ರನ್ ಬಾರಿಸಿ ಮಿಂಚಿದ್ದಾರೆ. ತನ್ಮಯ್ ಅವರ ಈ ಬ್ಯಾಟಿಂಗ್‌ನಿಂದ ಕ್ರಿಕೆಟ್ ಕ್ಲಬ್ ಆಫ್ ಸಾಗರ ತಂಡ ನಿಗದಿತ ೫೦ ಓವರ್‌ಗಳಲ್ಲಿ 583 ರನ್ ಗಳಿಸಿತು.
ಪಂದ್ಯದ ಆರಂಭದಿಂದಲೇ ಭದ್ರಾವತಿ ತಂಡದ ಬೌಲರ್‌ಗಳ ಮೇಲೆರಗಿದ ತನ್ಮಯ್ ಸಿಕ್ಸರ್ ಮತ್ತು ಫೋರ್‌ಗಳ ಮಳೆಯನ್ನೆ ಸುರಿಸಿದರು. ಜತೆಗೆ ತಂಡದ ಮತೊಬ್ಬ ಆಟಗಾರ ಅಂಶು (16) ಜತೆಗೂಡಿ 120 ರನ್ ಜತೆಯಾಟ ನಡೆಸಿದರು. ತನ್ಮಯಿ ಅವರ ಈ ಮನಮೋಹಕ ಇನಿಂಗ್ಸ್‌ನಲ್ಲಿ ಬರೋಬ್ಬರಿ 48 ಫೋರ್ ಮತ್ತು 24 ಸಿಕ್ಸರ್ ಸಿಡಿಯಲ್ಪಟ್ಟಿತು.
ರಾಜ್ಯ ತಂಡವನ್ನು ಪ್ರತಿನಿಧಿಸಿರುವ ತನ್ಮಯ್, ಸಾಗರದ ನಾಗೇಂದ್ರ ಪಂಡಿತ್ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದಾರೆ. ತನ್ಮಯ್ ಅವರ ಈ ಪ್ರದರ್ಶನವನ್ನು ಹಾಡಿ ಹೊಗಳಿದ ಕೋಚ್ ನಾಗೇಂದ್ರ ಪಂಡಿತ್ ಅವರು ಇದು ಕ್ರಿಕೆಟ್ ಇತಿಹಾಸದಲ್ಲಿ ಸರ್ವಕಾಲಿಕ ದಾಖಲೆ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ | IND VS ENG | ಭಾರತ ಸೋಲಿನ ಬಗೆಗಿನ ಪಾಕ್ ಪ್ರಧಾನಿಯ ಟ್ವೀಟ್ ನನಗೆ ತಿಳಿದಿಲ್ಲ; ಬಾಬರ್ ಅಜಂ