Site icon Vistara News

INDvsNZ | ಮಿನುಗಿದ ಸೂರ್ಯ, ಹೂಡಾ, ನ್ಯೂಜಿಲ್ಯಾಂಡ್‌ ವಿರುದ್ಧ ಭಾರತಕ್ಕೆ 65 ರನ್‌ ಜಯ

indvsnz

ಮೌಂಟ್‌ ಮಾಂಗ್ನುಯಿ : ಸೂರ್ಯಕುಮಾರ್‌ ಯಾದವ್‌ (೧೧೧ *ರನ್‌, ೫೧ ಎಸೆತ, ೧೧ ಫೋರ್‌, ೭ ಸಿಕ್ಸರ್‌) ಅವರ ಸ್ಫೋಟಕ ಬ್ಯಾಟಿಂಗ್‌ ಹಾಗೂ ದೀಪಕ್ ಹೂಡಾ (೧೦ ರನ್‌ಗಳಿಗೆ ೪ ವಿಕೆಟ್‌) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಮಿಂಚಿದ ಭಾರತ ತಂಡ ನ್ಯೂಜಿಲ್ಯಾಂಡ್‌ (INDvsNZ) ವಿರುದ್ಧದ ಟಿ೨೦ ಸರಣಿಯ ಎರಡನೇ ಪಂದ್ಯದಲ್ಲಿ ೬೫ ರನ್‌ಗಳ ಭರ್ಜರಿ ವಿಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಭಾರತ ತಂಡ ಮೂರು ಪಂದ್ಯಗಳ ಸರಣಿಯಲ್ಲಿ ೧-೦ ಮುನ್ನಡೆ ಪಡೆದುಕೊಂಡಿತು. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದ ಕಾರಣ ಮೂರನೇ ಪಂದ್ಯದಲ್ಲಿ ಸರಣಿ ವಿಜೇತರು ಯಾರು ಎಂಬುದು ನಿರ್ಣಯವಾಗಲಿದೆ.

ಇಲ್ಲಿನ ಬೇ ಓವಲ್‌ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೧೯೧ ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ೧೮.೫ ಓವರ್‌ಗಳಲ್ಲಿ ೧೨೬ ರನ್‌ಗಳಿಗೆ ಸರ್ವಪತನ ಕಂಡು ಹೀನಾಯವಾಗಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಭಾರತ ಪರ ಸೂರ್ಯಕುಮಾರ್ ಅವರಲ್ಲದೆ, ಆರಂಭಿಕ ಬ್ಯಾಟರ್‌ ಇಶಾನ್ ಕಿಶನ್‌ ೩೬ ರನ್‌ಗಳನ್ನು ಬಾರಿಸಿದರು. ಭಾರತದ ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವಿಫಲಗೊಂಡರು.

ಬೃಹತ್‌ ಮೊತ್ತದ ಗುರಿಯನ್ನು ಬೆನ್ನಟ್ಟಲು ಮುಂದಾದ ಎದುರಾಳಿ ನ್ಯೂಜಿಲ್ಯಾಂಡ್‌ ತಂಡ ಭಾರತದ ಬೌಲರ್‌ಗಳ ಪ್ರಭಾವಕ್ಕೆ ಮಂಕಾಯಿತು. ಆದಾಗ್ಯೂ ನಾಯಕ ಕೇನ್‌ ವಿಲಿಯಮ್ಸನ್‌ ೫೨ ಎಸೆತಗಳಲ್ಲಿ ೬೧ ರನ್‌ ಬಾರಿಸಿ ತಂಡಕ್ಕೆ ಆಧಾರವಾಗಲು ಶ್ರಮಿಸಿದರು. ಆದರೆ, ಅವರ ಪ್ರಯತ್ನಕ್ಕೆ ಸಾಫಲ್ಯ ದೊರಕಲಿಲ್ಲ. ಡೆವೋನ್‌ ಕಾನ್ವೆ ೨೫ ರನ್‌ ಬಾರಿಸಿದರು. ಭಾರತದ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ ಯಜ್ವೇಂದ್ರ ಚಹಲ್‌ ಹಾಗೂ ವೇಗಿ ಮೊಹಮ್ಮದ್ ಸಿರಾಜ್‌ ತಲಾ ಎರಡು ವಿಕೆಟ್‌ ಕಬಳಿಸಿದರು. ಭುವನೇಶ್ವರ್‌ ಕುಮಾರ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ತಲಾ ೧ ವಿಕೆಟ್ ಕಿತ್ತರು.

ಸ್ಕೋರ್‌ ವಿವರ

ಭಾರತ : ೨೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೧೨೧ (ಸೂರ್ಯಕುಮಾರ್‌ ೧೧೧*, ಇಶಾನ್‌ ಕಿಶನ್‌ ೩೬; ಟಿಮ್‌ ಸೌಥೀ ೩೪ಕ್ಕೆ೩).

ನ್ಯೂಜಿಲ್ಯಾಂಡ್‌ : ೧೮.೫ ಓವರ್‌ಗಳಲ್ಲಿ ೧೨೬ (ಕೇನ್‌ ವಿಲಿಯಮ್ಸನ್‌ ೬೧, ಡೆವೋನ್‌ ಕಾನ್ವೆ ೨೫; ದೀಪಕ್‌ ಹೂಡಾ ೧೦ಕ್ಕೆ೪, ಸಿರಾಜ್‌ ೨೪ಕ್ಕೆ೨).

ಇದನ್ನೂ ಓದಿ | IND VS NZ | ಸೂರ್ಯಕುಮಾರ್​ ಸೂಪರ್​ ಶತಕ; ನ್ಯೂಜಿಲ್ಯಾಂಡ್​ ಗೆಲುವಿಗೆ 192 ರನ್​ ಸವಾಲು

Exit mobile version