Site icon Vistara News

Ind vs Afg : ಶಿವಂ ದುಬೆ ಸ್ಫೋಟಕ ಅರ್ಧ ಶತಕ, ಭಾರತ ತಂಡಕ್ಕೆ ಜಯ

Shivam Dube

ಮೊಹಾಲಿ : ಪ್ರವಾಸಿ ಅಫಘಾನಿಸ್ತಾನ ವಿರುದ್ಧದ (Ind vs Afg 🙂 ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್​ ವಿಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ. ಭಾರತ ತಂಡದ ಪರ ಶಿವಂ ದುಬೆ (60 ರನ್​, 40 ಎಸೆತ, 5 ಫೋರ್​, 2 ಸಿಕ್ಸರ್​​) ಅರ್ಧ ಶತಕ ಬಾರಿಸಿ ಭಾರತ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.

ಇಲ್ಲಿನ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್​ ಐಎಸ್​ ಬಿಂದ್ರಾ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಪ್ರವಾಸಿ ತಂಡ 5 ವಿಕೆಟ್​ಗೆ 158 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ ನಷ್ಟಕ್ಕೆ 159 ರನ್ ಬಾರಿಸಿತು.

ಭಾರತದ ಗೆಲುವಿನಲ್ಲಿ ಶುಭ್​ಮನ್​ ಗಿಲ್​ (23 ರನ್​), ತಿಲಕ್ ವರ್ಮಾ (26 ರನ್​), ಜಿತೇಶ್​ ಶರ್ಮಾ (31 ರನ್​) ಹಾಗೂ ಕೊನೆಯಲ್ಲಿ ರಿಂಕು ಸಿಂಗ್ (16) ಪಾತ್ರ ವಹಿಸಿದರು.

ರೋಹಿತ್‌ ರನೌಟ್‌, ಆಕ್ರೋಶ

ಚೇಸಿಂಗ್‌ ಮಾಡಲು ಹೊರಟ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅನಗತ್ಯ ರನೌಟ್‌ ಆದರು. ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಮಿಡ್‌ ಆಫ್‌ ಕಡೆಗೆ ರನ್‌ ಹೊಡೆದ ರೋಹಿತ್‌ ನೇರವಾಗಿ ಫೀಲ್ಡರ್ ಕೈ ಸೇರಿತು. ಈ ವೇಳೆ ನಾನ್‌ಸ್ಟ್ರೈಕ್‌ನಲ್ಲಿದ್ದ ಗಿಲ್‌ ರೋಹಿತ್‌ ರನ್‌ ಗಳಿಸಲು ಓಡಿದ್ದನ್ನು ಗಮನಿಸದೆ ಅಲ್ಲೇ ಉಳಿದರು. ಹೀಗಾಗಿ ರೋಹಿತ್​​ ಔಟಾದರು. ರೋಹಿತ್​​ ಗಿಲ್‌ ಮೇಲೆ ರೇಗುತ್ತಾ ಡಗೌಟ್‌ನತ್ತ ಹೆಜ್ಜೆ ಹಾಕಿದರು. ಆದರೆ, ಉಳಿದ ಆಟಗಾರರು ತಂಡವನ್ನು ಗೆಲ್ಲಿಸಿದರು.

ಇದನ್ನೂ ಓದಿ : Rohit Sharma : ಸಹ ಆಟಗಾರನ ಹೆಸರನ್ನೇ ಮರೆತ ರೋಹಿತ್​ ಶರ್ಮಾ, ವಿಡಿಯೊ ಇಲ್ಲಿದೆ

ಅದಕ್ಕಿಂತ ಮೊದಲು ಬ್ಯಾಟ್​ ಮಾಡಿದ ಅಫಘಾನಿಸ್ತಾನ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 50 ರನ್ ಬಾರಿಸಿತು. ಗುರ್ಬಜ್ 23 ರನ್ ಬಾರಿಸಿದರೆ, ಇಬ್ರಾಹಿಂ ಜದ್ರಾನ್​ 25 ರನ್ ಬಾರಿಸಿದರು. ಒಮರ್ಜೈ 29 ರನ್​ ಕೊಡುಗೆ ಕೊಟ್ಟರು. ಕೊನೆಯಲ್ಲಿ ಮೊಹಮ್ಮದ್ ನಬಿ 27 ಎಸೆತಕ್ಕೆ 42 ರನ್ ಬಾರಿಸಿ ಮಿಂಚಿದರು.

ಐಸಿಸಿ ಟಿ20 ವಿಶ್ವ ಕಪ್​ಗೆ ಮೊದಲು ಭಾರತ ತಂಡಕ್ಕೆ ಇದು ಕೊನೆಯ ದ್ವಿಪಕ್ಷೀಯ ಸರಣಿಯಾಗಿದೆ. ಇದು ಭಾರತ ತಂಡದ ಆಯ್ಕೆಗೆ ಹಾಗೂ ಸಿದ್ದತೆಗೆ ಕೊನೇ ಅವಕಾಶವಾಗಿದೆ.

Exit mobile version