ಕರಾಚಿ: ಪಾಕಿಸ್ಥಾನದ ಮಾಜಿ ವೇಗಿ ಶೋಯೆಬ್ ಅಖ್ತರ್(Shoaib Akhtar) ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಭಗವದ್ಗೀತೆಯಲ್ಲಿ (Bhagavad Gita) ಉಲ್ಲೇಖಿಸಲಾದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ‘ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು’ ಎಂಬ ಸಂದೇಶವನ್ನು ಅಖ್ತರ್ ಇನ್ಸ್ಟಾದಲ್ಲಿ ಸ್ಟೋರಿ ಹಾಕಿದ್ದಾರೆ. ಇದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದಕ್ಕೆ ಪರ ಮತ್ತು ವಿರೋಧ ವ್ಯಕ್ತವಾಗಿದೆ.
ಅಖ್ತರ್ ಅವರು ಹಂಚಿಕೊಂಡ ಸ್ಟೋರಿಯಲ್ಲಿ, ವಿಷ್ಣುವಿನ ಅವತಾರವಾದ ಫೋಟೊವನ್ನು ಹಂಚಿಕೊಂಡು, ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು ಎಂಬ ಸಂದೇಶ ಬರೆಯಲಾಗಿದೆ. ಅಖ್ತರ್ ಅವರು ಭಗವದ್ಗೀತೆಯ ಈ ಸಾರವನ್ನು ಹಾಕಿದಕ್ಕೆ ಮುಸ್ಲಿಂ ಮೂಲಭೂತವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಕುರಾನ್ ಹಲವು ಸಂದೇಶವಿದೆ ಇದನ್ನು ಬಿಟ್ಟು ಭಗವದ್ಗೀತೆಯ ಸಂದೇಶ ಹಾಕಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಷ್ಟೇ ವಿರೋಧ ವ್ಯಕ್ತವಾದರೂ ಕೂಡ ಅಖ್ತರ್ ಅವರು ತಮ್ಮ ಈ ಪೋಸ್ಟ್ ಡಿಲೀಟ್ ಮಾಡಿಲ್ಲ.
ಪಾಕ್ ವೇಗಿಗೆ ಭಾರತದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರದೇಶದ ರಾವಲ್ಪಿಂಡಿಯಲ್ಲಿ ಜನಿಸಿದ ಅಖ್ತರ್ “ರಾವಲ್ಪಿಂಡಿ ಎಕ್ಸ್‌ಪ್ರೆಸ್” ಎಂದೇ ಕ್ರಿಕೆಟ್‌ನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. 2022ರಲ್ಲಿ ಅಖ್ತರ್ ಅವರು ‘ರಾವಲ್ಪಿಂಡಿ ಎಕ್ಸ್‌ಪ್ರೆಸ್; ರೇಸಿಂಗ್ ಎಗೇನ್ಸ್ಟ್ ದಿ ಆಡ್ಸ್’ ಎಂದ ಶೀರ್ಷಿಕೆಯ ತಮ್ಮ ಜೀವನಚರಿತ್ರೆಯ ಚಿತ್ರವನ್ನು ಘೋಷಣೆ ಮಾಡಿದ್ದರು. ಆದರೆ ಈ ಚಿತ್ರದ ನಿರ್ಮಾಣ ಆರಂಭವಾಗಿರುವ ಬಗ್ಗೆ ಸದ್ಯ ಇದುವರೆಗೆ ಯಾವುದೇ ಮಾಹಿತಿ ಇಲ್ಲ.
ಶೋಯೆಬ್ ಅಖ್ತರ್ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಪಾಕ್ ಪರ 163 ಏಕ ದಿನ, 14 ಟಿ20 ಮತ್ತು 46 ಟೆಸ್ಟ್‌ಗಳಲ್ಲಿ ಕಣಕ್ಕಿಳಿದಿದ್ದಾರೆ. ಏಕ ದಿನ ಕ್ರಿಕೆಟ್‌ನಲ್ಲಿ 247 ಹಾಗೂ ಟಿ20ಯಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ IND vs PAK: ಶೋಯೆಬ್ ಅಖ್ತರ್ ಕಾಲೆಳೆದ ಸಚಿನ್ ತೆಂಡೂಲ್ಕರ್-ವೀರೇಂದ್ರ ಸೆಹವಾಗ್
ಭಾರತಕ್ಕೆ ಬೆಂಬಲ ಸೂಚಿಸಿದ್ದ ಅಖ್ತರ್
ಕಳೆದ ವರ್ಷ ನಡೆದಿದ್ದ ಏಷ್ಯಾಕಪ್ನಲ್ಲಿ(Asia Cup 2023) ಪಾಕಿಸ್ತಾನ(IND vs PAK) ತಂಡವನ್ನು(IND vs PAK) ಫೈನಲ್ ರೇಸ್ನಿಂದ ಹೊರ ಹಾಕಲು ಭಾರತ ತಂಡ ಒಂದು ರೀತಿಯ ಫಿಕ್ಸಿಂಗ್ ನಡೆಸುತ್ತಿದೆ ಎಂದು ಹೇಳಿದ್ದ ನೆಟ್ಟಿಗರೊಬ್ಬರಿಗೆ ಶೋಯೆಬ್ ಅಖ್ತರ್ ಸರಿಯಾಗಿ ಜಾಡಿಸಿದ್ದರು. ಅಸಂಬದ್ಧ ಹೇಳಿಕೆ ನೀಡಿದರೆ ಜಾಗ್ರತೆ ಎಂದು ಎಚ್ಚರಿಸಿದ್ದರು.
ಭಾರತದ ಎದುರು ಪಾಕಿಸ್ತಾನ ಗೆಲ್ಲಲಿಲ್ಲ ಎಂಬ ಮಾತ್ರಕ್ಕೆ ಈ ಕೀಳುಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಇನ್ನು ಮಂದೆ ನೀಡಿದರೆ ಎಚ್ಚರಿಕೆ. ಭಾರತ ತನ್ನ ಆಟದ ಸಾಮರ್ಥ್ಯದಿಂದ ಗೆದ್ದಿದೆ. ನಮ್ಮವರಿಗೆ ಇದು ಸಾಧ್ಯವಾಗಿಲ್ಲ. ಸೋಲು ಕಂಡ ಬಳಿಕ ಭಾರತದ ಮೇಲೆ ಸುಮ್ಮನೆ ಗೂಬೆ ಕೂರಿಸೋದು ಬಿಟ್ಟುಬಿಡಿ” ಎಂದು ಸರಿಯಾಗಿ ಜಾಡಿಸಿದ್ದರು. ಅಖ್ತರ್ ಭಾರತ ತಂಡದ ಬಗ್ಗೆ ಹಲವು ಬಾರಿ ಆರೋಪ ಮಾಡಿದ್ದರೂ ಕೂಡ ಕೆಲವೊಮ್ಮೆ ಬೆಂಬಲವನ್ನು ಸೂಚಿಸಿದ್ದಾರೆ. ವಿಶೇಷವಾಗಿ ಸಚಿನ್ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ.