ಬೆಂಗಳೂರು: ಮುಂಬಯಿ ಇಂಡಿಯನ್ಸ್ ವಿರುದ್ಧ 8 ವಿಕೆಟ್ ಭರ್ಜರಿ ವಿಜಯ ಸಾಧಿಸಿದ ಹುಮ್ಮಸ್ಸಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶಾಕಿಂಗ್ ನ್ಯೂಸ್ ಒಂದು ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್ ಹಾಗೂ ಕಳೆದ ಆವೃತ್ತಿಯಲ್ಲಿ ಶತಕ ಬಾರಿಸಿ ಮಿಂಚಿದ್ದ ರಜತ್ ಪಾಟೀದಾರ್ ಗಾಯದ ಸಮಸ್ಯೆಯಿಂದ ಗುಣಮುಖರಾಗದ ಕಾರಣ ಐಪಿಎಲ್ ಟೂರ್ನಿಯಿಂದ (IPL 2023) ಸಂಪೂರ್ಣವಾಗಿ ಹೊರಕ್ಕೆ ನಡೆದಿದ್ದಾರೆ. ಈ ಮೂಲಕ ಆರ್ಸಿಬಿಯ ಗಾಯದ ಪಟ್ಟಿಗೆ ಇನ್ನೊಬ್ಬ ಆಟಗಾರ ಸೇರ್ಪಡೆಗೊಂಡಿದ್ದಾರೆ.
ರಜತ್ ಪಾಟೀದಾರ್ ಆರ್ಸಿಬಿಯ ಮಧ್ಯಮ ಕ್ರಮಾಂಕದ ಬ್ಯಾಟ್ ಬಲ ಎನಿಸಿಕೊಂಡಿದ್ದರು. ಆದರೆ, ಟೂರ್ನಿ ಆರಂಭಕ್ಕೆ ಮೊದಲೇ ಪಾದದ ನೋವಿಗೆ ಒಳಗಾಗಿದ್ದ ಅವರು ಆರಂಭಿಕ ಪಂದ್ಯದಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಪೂರ್ತಿ ಟೂರ್ನಿಯಿಂದ ಹೊರಕ್ಕೆ ನಡೆಯುವಂತಾಗಿದೆ. ಆರ್ಸಿಬಿ ಫ್ರಾಂಚೈಸಿ ಮಂಗಳವಾರ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಆದರೆ, ಅವರ ಜಾಗಕ್ಕೆ ಯಾವ ಆಟಗಾರ ಆಯ್ಕೆಯಾಗುತ್ತಾರೆ ಎಂಬುದನ್ನು ತಿಳಿಸಿಲ್ಲ.
ದುರದೃಷ್ಟವಶಾತ್ ರಜತ್ಪಾಟೀದಾದ್ ಐಪಿಎಲ್ 2023ನೇ ಆವೃತ್ತಿಯಿಂದ ಹೊರಕ್ಕೆ ಉಳಿದಿದ್ದಾರೆ. ಅವರಿಗೆ ಆಗಿರುವ ಪಾದದ ನೋವು ಇನ್ನೂ ಕಡಿಮೆಯಾಗಿಲ್ಲ. ಅವರು ವೇಗವಾಗಿ ಗುಣಮುಖರಾಗಲಿ ಎಂದು ನಾನು ಬಯಸುತ್ತೇವೆ ಹಾಗೂ ಈ ಪ್ರಕ್ರಿಯೆಯಲ್ಲಿ ನಮ್ಮ ಬೆಂಬಲ ಅವರಿಗೆ ಇದೆ. ಕೋಚ್ಗಳು ಹಾಗೂ ಮ್ಯಾನೇಜ್ಮೆಂಟ್ ಅವರ ಜಾಗಕ್ಕೆ ಇನ್ನೊಬ್ಬ ಆಟಗಾರನ್ನು ಹೆಸರಿಸದೇ ಇರಲು ನಿರ್ಧರಿಸಿದ್ದೇವೆ, ಎಂದು ಆರ್ಸಿಬಿ ಹೇಳಿಕೆ ಪ್ರಕಟಿಸಿದೆ.
ಈ ಹಿಂದೆ ರಜತ್ಪಾಟೀದಾರ್ ಐಪಿಎಲ್ನ ಅರ್ಧ ಪಂದ್ಯಗಳು ಮುಕ್ತಾಯಗೊಂಡ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅವರು ಸಂಪೂರ್ಣ ಟೂರ್ನಿಯಿಂದ ಹೊರಕ್ಕುಳಿದ ಸುದ್ದಿ ಬಂದಿದೆ. ರಜತ್ ಪಾಟೀದಾರ್ ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಆರ್ಸಿಬಿ ಫ್ರಾಂಚೈಸಿ ಅವರನ್ನು ಈ ಬಾರಿಯೂ ಉಳಿಸಿಕೊಂಡಿತ್ತು.
ಮಧ್ಯಪ್ರದೇಶದ 29 ವರ್ಷದ ಆಟಗಾರ 2021ರಲ್ಲಿ ಚೆನ್ನೈನಲ್ಲಿ ನಡೆದ ಮುಂಬಯಿ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು. ಒಟ್ಟು 12 ಪಂದ್ಯಗಳಲ್ಲಿ ಪಾಳ್ಗೊಂಡಿರುವ ಸರಾಸರಿ 40ರಂತೆ 404 ರನ್ ಬಾರಿಸಿದ್ದಾರೆ.
ರೀಸ್ ಟೋಪ್ಲೆಯ ಗಾಯದ ಕುರಿತು ಮಾಹಿತಿಯಿಲ್ಲ
ಆರ್ಸಿಬಿಯ ಮತ್ತೊಬ್ಬ ಪ್ರಮುಖ ಬೌಲರ್ ಟೂರ್ನಿಯಿಂದ ಹೊರಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ಮುಂಬಯಿ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ನ ಬೌಲರ್ ರೀಸ್ ಟೋಪ್ಲೆ ಗಾಯಗೊಂಡಿದ್ದಾರೆ.
ಮುಂಬಯಿ ವಿರುದ್ಧದ ಪಂದ್ಯದಲ್ಲಿ ಟೋಪ್ಲೆ ಫೀಲ್ಡಿಂಗ್ ಮಾಡುವಾಗ ನೆಲಕ್ಕೆ ಬಿದ್ದಿದ್ದರು. ಪರಿಣಾಮ ಅವರ ಭುಜದ ಮೂಳೆ ಕಳಚಿಕೊಂಡಿದೆ. ಹೀಗಾಗಿ ಅವರು ಮುಂದಿನ ಪಂದ್ಯಗಳಿಗೆ ಲಭ್ಯರಾಗುವರೇ ಎಂಬುದು ಗೊತ್ತಿಲ್ಲ. ಆರ್ಸಿಬಿ ಹೆಡ್ಕೋಚ್ ಮೈಕ್ ಹೆಸ್ಸಾನ್ ಪ್ರಕಾರ ರೀಸ್ ಟೋಪ್ಲೆ ಅವರು ಸುಧಾರಿಸಿಕೊಂಡಿದ್ದಾರೆ. ಆದರೆ, ಅವರ ಗಾಯದ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಅವರಿಗಿಲ್ಲ.
ದುರದೃಷ್ಟವಶಾತ್ ಫೀಲ್ಡಿಂಗ್ ಮಾಡುವಾಗ ರೀಸ್ ಟೋಪ್ಲೆಯ ಮಂಡಿ ನೆಲಕ್ಕೆ ಬಡಿಯಿತು. ಸಮತೋಲನ ತಪ್ಪಿ ಅವರು ನೆಲಕ್ಕೆ ಬಿದ್ದರು. ಹೀಗಾಗಿ ಭುಜದ ಮೂಳೆ ಕಳಚಿಕೊಂಡಿದೆ. ತಕ್ಷಣ ವೈದ್ಯಕೀಯ ತಂಡ ಅವರ ಭುಜದ ಮೂಳೆಯನ್ನು ಸ್ವಸ್ಥಾನದಲ್ಲಿ ನಿಲ್ಲಿಸಿದ್ದಾರೆ ಎಂದು ಹೆಸ್ಸಾನ್ ಅವರು ಆರ್ಸಿಬಿಯ ಯೂಟ್ಯೂಬ್ ಚಾನೆಲ್ನಲ್ಲಿ ಮಾಹಿತಿ ನೀಡಿದ್ದಾರೆ.
ರೀಸ್ ಟೋಪ್ಲೆ ಅವರನ್ನು ಸ್ಕ್ಯಾನ್ಗೆ ಒಳಪಡಿಸಲಾಗಿದೆ. ಆರಂಭಿಕ ವರದಿ ಪ್ರಕಾರ ಅವರ ಗಾಯದ ಸಮಸ್ಯೆ ಗಂಭೀರವಾಗಿಲ್ಲ. ಹೀಗಾಗಿ ತಂಡದ ಜತೆಯೇ ಇದ್ದಾರೆ. ಮುಂದಿನ ವರದಿಯು ಯಾವ ರೀತಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಅವರು ಹೇಳಿದ್ದಾರೆ.