ಭೋಪಾಲ್: ಇಲ್ಲಿ ನಡೆಯತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ(Shooting World Cup) ಭಾರತದ ಯುವ ಶೂಟರ್ ಸಿಫ್ತ್ ಕೌರ್ ಸಮ್ರಾ(Sift Kaur Samra) ಕಂಚಿನ ಪದಕಕ್ಕೆ ಗುರಿ ಇರಿಸಿದ್ದಾರೆ.
ಭಾನುವಾರ ನಡೆದ ಮಹಿಳೆಯರ 50 ಮೀ. ರೈಫಲ್ 3ಪಿ ವಿಭಾಗದಲ್ಲಿ ಅವರು ಕಂಚಿನ ಪದಕ ಗೆದ್ದರು. ಚೀನಾದ ಜಾಂಗ್ ಕ್ವಿಯಾಂಗ್‌ಯು ಚಿನ್ನ ಗೆದ್ದರೆ, ಜೆಕ್ ಗಣರಾಜ್ಯದ ಅನೆಟಾ ಬ್ರಾಬ್ಕೊವಾ ಬೆಳ್ಳಿ ತಮ್ಮದಾಗಿಸಿಕೊಂಡರು. ಅಂತಾರಾಷ್ಟ್ರೀಯ ಟೂರ್ನಿಯ ಸೀನಿಯರ್ ವಿಭಾಗದಲ್ಲಿ ಸಮ್ರಾಗೆ ಗೆದ್ದ ಎರಡನೇ ಪದಕ ಇದಾಗಿದೆ. ಕಳೆದ ವರ್ಷ ಚೀನಾದ ಚಾಂಗ್ವಾನ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅವರು ಕಂಚು ಗೆದ್ದಿದ್ದರು.
ಸಮ್ರಾ ಅವರು ರ‍್ಯಾಂಕಿಂಗ್ ಸುತ್ತಿನಲ್ಲಿ 403.9 ಪಾಯಿಂಟ್ಸ್ ಗಳಿಸಿ ಮೂರನೆಯವರಾದರು. ಮೊದಲ ಎರಡು ಸ್ಥಾನಗಳನ್ನು ಪಡೆದ ಜಾಂಗ್ (414.7) ಮತ್ತು ಅನೆಟಾ (411.3) ಅವರು ಫೈನಲ್ ಪ್ರವೇಶಿಸಿದರು. ಫೈನಲ್ನಲ್ಲಿ ಜಾಂಗ್ 16-8 ಅಂಕಗಳಿಂದ ಬ್ರಾಬ್ಕೊವಾ ವಿರುದ್ಧ ಮೇಲುಗೈ ಸಾಧಿಸಿದರು.
ಇದನ್ನೂ ಓದಿ Swiss Open: ಸ್ವಿಸ್ ಓಪನ್ ಬ್ಯಾಡ್ಮಿಂಟನ್: ಚಿನ್ನ ಗೆದ್ದ ಚಿರಾಗ್-ಸಾತ್ವಿಕ್ ಜೋಡಿ
ವಿಶ್ವ ಚಾಂಪಿಯನ್‌ಶಿಪ್‌ನ ಏರ್ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದ ಅಂಜುಮ್ ಮೌದ್ಗಿಲ್ ಅವರು ಈ ಸ್ಪರ್ಧೆಯಲ್ಲಿ ನಿರಾಶೆ ಅನುಭವಿಸಿದರು. ಅರ್ಹತಾ ಸುತ್ತಿನಲ್ಲಿ 583 ಪಾಯಿಂಟ್ಸ್‌ಗಳೊಂದಿಗೆ 17ನೇ ಸ್ಥಾನ ಪಡೆದರು. ಇದಕ್ಕೂ ಮುನ್ನ ಶನಿವಾರ ನಡೆದ ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಒಲಿಂಪಿಯನ್ ಶೂಟರ್ ಮನು ಭಾಕರ್ ಅವರು ಕಂಚಿನ ಪದಕ ಗೆದ್ದಿದ್ದರು. ಭಾರತ ಸದ್ಯ ಈ ಟೂರ್ನಿಯಲ್ಲಿ ತಲಾ ಒಂದು ಚಿನ್ನ, ಬೆಳ್ಳಿ ಹಾಗೂ ಐದು ಕಂಚು ಗೆದ್ದು ಪದಕ ಪಟ್ಟಿಯಲ್ಲಿ ಚೀನಾ ಬಳಿಕ ಎರಡನೇ ಸ್ಥಾನದಲ್ಲಿದೆ.