ಬೆಂಗಳೂರು: ಟೀಮ್ ಇಂಡಿಯಾದ ಹಾಗೂ ಆರ್‌ಸಿಬಿ(RCB) ತಂಡದ ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್(Shreyanka Patil) ಅವರು ಗೌರಿ(Gowri) ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ಸಮರ್ಜಿತ್ ಲಂಕೇಶ್(Samarjit Lankesh) ಜತೆ ಮಸ್ತ್ ಸ್ಟೆಪ್ಸ್(shreyanka patil dance) ಹಾಕಿದ ವಿಡಿಯೊವೊಂದು ವೈರಲ್ ಆಗಿದೆ.
ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದ್ದ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಶ್ರೇಯಾಂಕಾ ಪಾಟೀಲ್ ಕೂಡ ಭಾಗಿಯಾಗಿದ್ದರು. ಇದೇ ವೇಳೆ ಅವರು ಸಮರ್ಜಿತ್ ಲಂಕೇಶ್ ಜತೆ ʻಟೈಂ ಬರುತ್ತೆ.. ಟೈಂ ಬರುತ್ತೆ..’ ಹಾಡಿಗೆ ಶ್ರೇಯಾಂಕಾ ಪಾಟೀಲ್ ಹುಕ್ ಸ್ಟೆಪ್ ಹಾಕಿ ಮಿಂಚಿದರು. ಶ್ರೇಯಾಂಕಾ ಮತ್ತು ಸಮರ್ಜಿತ್ ಡ್ಯಾನ್ಸ್‌ಗೆ ವಿದ್ಯಾರ್ಥಿಗಳು ಕೂಡಾ ಫಿದಾ ಆಗಿದ್ದರು.
ಈ ನೃತ್ಯದ ವಿಡಿಯೊವನ್ನು ಸಮರ್ಜಿತ್ ಲಂಕೇಶ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಧನ್ಯವಾದ ಕೂಡ ತಿಳಿಸಿದ್ದಾರೆ. “ನಮ್ಮ ಚಿತ್ರದ ಟೀಸರ್ ಬಿಡುಗಡೆಗೆ ತುಂಬಾ ಶಕ್ತಿ ತಂದಿದ್ದಕ್ಕಾಗಿ. ಮೈದಾನದಲ್ಲಿ ಮತ್ತು ಹೊರಗೆ ಅದ್ಭುತವಾದ ಪ್ರದರ್ಶನ ತೋರಿದ್ದಕ್ಕೆ ಈ ನರ್ತಕಿಯನ್ನು ಮರೆಯಬಾರದು… ನಮ್ಮ RCB ರಾಣಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ಇಂದ್ರಜಿತ್ ಲಂಕೇಶ್ (Indrajit Lankesh) ಅವರ ಪುತ್ರ ಸಮರ್ಜಿತ್ ಲಂಕೇಶ್ (Samarjit Lankesh) ಅವರು ಹೀರೊ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿರುವ ಚಿತ್ರ ಇದಾಗಿದೆ. ತಮ್ಮ ಮಗನ ಮೊದಲ ಸಿನಿಮಾಕ್ಕೆ ‘ಗೌರಿ’ ಎಂದು ಟೈಟಲ್ ಇಟ್ಟಿದ್ದಾರೆ. ಈ ಚಿತ್ರಕ್ಕೆ ‘ಗೌರಿ’ ಎನ್ನುವ ಶೀರ್ಷಿಕೆ ಇಟ್ಟಿದ್ದು ಏಕೆ ಎನ್ನುವ ಪ್ರಶ್ನೆಗೆ ಇಂದ್ರಜಿತ್ ಅವರು ಈ ಹಿಂದೆ ಉತ್ತರ ನೀಡಿದ್ದರು.
ʻʻನನ್ನ ಅಕ್ಕನ ಮೇಲಿ ಪ್ರೀತಿ ಹಾಗೂ ಅಭಿಮಾನಕ್ಕಾಗಿ ಗೌರಿ ಎನ್ನುವ ಶೀರ್ಷಿಕೆ ಇಟ್ಟಿದ್ದೇನೆʼʼಎಂದಿದ್ದರು. ಈ ಸಿನಿಮಾಗಾಗಿ ಸಮರ್ಜಿತ್ ಲಂಕೇಶ್ ಅವರು ಡ್ಯಾನ್ಸ್, ಫೈಟಿಂಗ್, ಕುದುರೆ ಸವಾರಿ ಸೇರಿದಂತೆ ಅನೇಕ ಕಲೆಗಳನ್ನು ಕಲಿತು ಬಂದಿದ್ದಾರೆ. ಗೌರಿ’ ಚಿತ್ರದಲ್ಲಿ ಸಮರ್ಜಿತ್ ಲಂಕೇಶ್ಗೆ ಜೋಡಿಯಾಗಿ ‘ಬಿಗ್ ಬಾಸ್’ ಖ್ಯಾತಿಯ ಸಾನ್ಯಾ ಅಯ್ಯರ್ ಅವರು ನಟಿಸಿದ್ದಾರೆ. ಎಜೆ ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದು, ಬಿ ಎ ಮಧು, ರಾಜಶೇಖರ್, ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಕೆ ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆದಿದ್ದಾರೆ.
21 ವರ್ಷದ ಶ್ರೇಯಾಂಕಾ ಪಾಟೀಲ್ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಆರ್‌ಸಿಬಿ ಮಹಿಳಾ ತಂಡಕ್ಕೆ ಆಯ್ಕೆಯಾದರು. ಇಲ್ಲಿ ತೋರಿದ ಪ್ರದರ್ಶನದಿಂದ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಆಡುವಂತೆ ಮಾಡಿತ್ತು. ಹಂತ ಹಂತವಾಗಿ ಬೆಳೆದ ಇವರು 2023ರಲ್ಲಿ 21 ವಷದೊಳಗಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅವಕಾಶ ಪಡೆದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023ರ ಡಿಸೆಂಬರ್ 6ರಂದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಆಡುವ ಮೂಲಕ ಭಾರತ ಹಿರಿಯರ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು.