Site icon Vistara News

Shreyas Iyer : ಬಿಸಿಸಿಐ ಕೇಂದ್ರ ಗುತ್ತಿಗೆ ತಪ್ಪಿದ ಕುರಿತು ಮಾತನಾಡಿದ ಶ್ರೇಯಸ್ ಅಯ್ಯರ್​; ಏನಂದ್ರು ಅವರು?

Shreyas Iyer

ಬೆಂಗಳೂರು: ಶ್ರೇಯಸ್ ಅಯ್ಯರ್ (Shreyas Iyer) ಈಗ ಐಪಿಎಲ್ ಗೆದ್ದ ಎಲೈಟ್ ನಾಯಕರ ಕ್ಲಬ್​ ಭಾಗವಾಗಿದ್ದಾರೆ. ಐಪಿಎಲ್ 2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ವೈಭವದತ್ತ ಮುನ್ನಡೆಸಿದ್ದರು. ಅವರು ತಂಡವನ್ನು ಮೂರನೇ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ ಖುಷಿಯಲ್ಲಿದ್ದಾರೆ. ಇದು ಬಹುತೇಕ ದೋಷರಹಿತ ಅಭಿಯಾನವಾಗಿತ್ತು. ಆದಾಗ್ಯೂ, ಐಪಿಎಲ್ 2024 ರ ಮೊದಲು, ಶ್ರೇಯಸ್ ಅಯ್ಯರ್ ಕಠಿಣ ಸಮಯ ಹೊಂದಿದ್ದರು. ಅವರನ್ನು ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ. ಅದಕ್ಕೂ ಮೊದಲು ಅವರ ಫಿಟ್ನೆಸ್ ಬಗ್ಗೆ ವರದಿಗಳು ಬಂದವು. ಹೀಗಾಗಿ ಅವರು ರಣಜಿ ಟ್ರೋಫಿಯಿಂದ ತಪ್ಪಿಸಿಕೊಂಡಿದ್ದರು.

ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡದ ಭಾಗವಾಗಿದ್ದರು. ಆದಾಗ್ಯೂ, ಕಳಪೆ ಸ್ಕೋರ್​​ಗಳ ನಂತರ ಅವರನ್ನು ಕೊನೆಯ ಮೂರು ಟೆಸ್ಟ್​​ಗಳಿಗೆ ಕೈಬಿಡಲಾಯಿತು. ನಂತರ ಬೆನ್ನುನೋವಿನಿಂದಾಗಿ ಅವರು ಮುಂಬೈ ಪರ ರಣಜಿ ಟ್ರೋಫಿ ಪಂದ್ಯ ತಪ್ಪಿಸಿಕೊಂಡರು. ಆದಾಗ್ಯೂ, ದಿ ಇಂಡಿಯನ್ ಎಕ್ಸ್​ಪ್ರೆಸ್​ ವರದಿಯ ಪ್ರಕಾರ, ಎನ್​​ಸಿಎ ಅವರ ಬಗ್ಗೆ ವ್ಯತಿರಿಕ್ತ ಫಿಟ್ನೆಸ್ ವರದಿ ನೀಡಿತ್ತು. ಈ ಸಮಯದಲ್ಲಿ, ಶ್ರೇಯಸ್ ಅಯ್ಯರ್ ಕೋಲ್ಕತಾ ನೈಟ್ ರೈಡರ್ಸ್​ ತಂಡದೊಂದಿಗೆ ಐಪಿಎಲ್ ಪೂರ್ವ ಶಿಬಿರದಲ್ಲಿ ಭಾಗವಹಿಸಿದ್ದರು. ಹೀಗಾಗಿ ಅದು ಚರ್ಚೆಯ ವಿಷಯವಾಯಿತು.

ರಾಷ್ಟ್ರೀಯ ತಂಡಕ್ಕಾಗಿ ಆಡಲು ಬಯಸುವ ತಾರೆಗಳಿಗೆ ದೇಶೀಯ ಕ್ರಿಕೆಟ್ ಕಡ್ಡಾಯ ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆ ಈ ವೇಳೆ ಹೊರಡಿಸಿತ್ತು. ಇದೀಗ ಶ್ರೇಯಸ್​ ಅಯ್ಯರ್ ವೀಡಿಯೊ ಬಿಡುಗಡೆ ಮಾಡಿದ್ದು ಅಲ್ಲಿ ಅವರು ತಮ್ಮ ವಿರಾಮ, ಸಂವಹನದ ಕೊರತೆ ಬಗ್ಗೆ ಮಾತನಾಡಿದ್ದಾರೆ. ವಿಚಾರಗಳ ಬಗ್ಗೆ ಸ್ಪಷ್ಟವಾಗಿ ಹೇಳದೇ ಹೋದರೂ ಇದು ಬಿಸಿಸಿಐ ಒಪ್ಪಂದದ ತಿರಸ್ಕಾರ ಮತ್ತು ಅದರ ನಂತರ ಅವರು ಎದುರಿಸಿದ ಟೀಕೆಗಳಿಗೆ ಸ್ಪಷ್ಟ ಉತ್ತರವಾಗಿದೆ.

ನಾನು ಏಕ ದಿನ ವಿಶ್ವಕಪ್​ನಲ್ಲಿ ಅದ್ಭುತವಾಗಿ ಆಡಿದ್ದೆ. ಅದರ ನಂತರ ವಿರಾಮ ತೆಗೆದುಕೊಳ್ಳಲು ಬಯಸಿದ್ದೆ. ನನ್ನ ಫಿಟ್ನೆಸ್​ಗಾಗಿ ಕೆಲಸ ಮಾಡಲು ಮತ್ತು ಕೆಲವು ವಿಚಾರಗಳ ಬಗ್ಗೆ ಚೈತನ್ಯ ಪಡೆಯಲು ಬಯಸಿದ್ದೆ. ಸಂವಹನದ ಕೊರತೆಯಿಂದಾಗಿ, ಕೆಲವು ನಿರ್ಧಾರಗಳು ನನ್ನ ಪರವಾಗಿ ಆಗಲಿಲ್ಲ ಎಂದು ಶ್ರೇಯಸ್ ಅಯ್ಯರ್ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ.

ಕ್ರಿಕೆಟ್​ ಬ್ಯಾಟ್ ನನಗೆ ಸೇರಿದ್ದು. ಉತ್ತಮ ಪ್ರದರ್ಶನ ನೀಡುವುದು ಮತ್ತು ಟ್ರೋಫಿಗಳನ್ನು ಗೆಲ್ಲುವುದು ನನ್ನ ಮೇಲಿನ ಜವಾಬ್ದಾರಿ ಎಂದು ನಾನು ಅರಿತುಕೊಂಡೆ. ನಾನು ರಣಜಿ ಟ್ರೋಫಿ ಮತ್ತು ಐಪಿಎಲ್ ಗೆದ್ದ ನಂತರ ಹಿಂದೆ ನಡೆದಿರುವ ಘಟನೆಗಳಿಗೆ ಸೂಕ್ತ ಉತ್ತರ ಎಂದು ನಾನು ನಿರ್ಧರಿಸಿದೆ. ಅದೃಷ್ಟವಶಾತ್ ಎಲ್ಲವೂ ಪೂರಕವಾಗಿ ನಡೆಯಿತು. ನಡೆದಿರುವ ಎಲ್ಲ ಘಟನೆಗಳಿಗೆ ನಾನು ಅಭಾರಿಯಾಗಿದ್ದೇನೆ ಎಂದು ಶ್ರೇಯಸ್​ ಹೇಳಿದ್ದಾರೆ.

Exit mobile version