ನವ ದೆಹಲಿ: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಸಮಸ್ಯೆಯಿಂದ ಇನ್ನೂ ಗುಣಮುಖರಾಗಿಲ್ಲ. ಹೀಗಾಗಿ ಅವರು ಸರ್ಜರಿಗೆ ಒಳಗಾಗುವುದು ಅನಿವಾರ್ಯವಾಗಿದೆ. ಇದರಿಂದಾಗಿ ಅವರು ಹಾಲಿ ಆವೃತ್ತಿಯ ಐಪಿಎಲ್ನಲ್ಲಿ (IPL 2023) ಆಡುವುದು ಸಾಧ್ಯವಿಲ್ಲ. ಇದರಿಂದಾಗಿ ಕೋಲ್ಕೊತಾ ನೈಟ್ ರೈಡರ್ಸ್ ತಂಡಕ್ಕೆ ದೊಡ್ಡ ಮಟ್ಟದ ಹಿನ್ನಡೆ ಉಂಟಾಗಿದೆ. ಶ್ರೇಯಸ್ ಅಯ್ಯರ್ ಕೋಲ್ಕೊತಾ ತಂಡದ ನಾಯಕರಾಗಿದ್ದರು. ಆರಂಭದಲ್ಲಿ ಅವರು ಅಲಭ್ಯರಾಗುತ್ತಿದ್ದಾರೆ ಎಂದು ತಿಳಿದ ತಕ್ಷಣ ನಿತೀಶ್ ರಾಣಾಗೆ ನಾಯಕತ್ವ ನೀಡಲಾಗಿತ್ತು. ಇದೀಗ ನಿತೀಶ್ ಅವರನ್ನು ಮುಂದುವರಿಸುವ ಅಥವಾ ಬೇರೆ ನಾಯಕರನ್ನು ನೇಮಕ ಮಾಡುವ ಅನಿವಾರ್ಯತೆ ಆ ಫ್ರಾಂಚೈಸಿಗೆ ಎದುರಾಗಿದೆ. ಇದೇ ವೇಳೆ ಶ್ರೇಯಸ್ ಜೂನ್ 7ರಿಂದ ಇಂಗ್ಲೆಂಡ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲೂ ಪಾಲ್ಗೊಳ್ಳುವುದಿಲ್ಲ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಭಾರತ ತಂಡಕ್ಕೂ ಹಿನ್ನಡೆ ಉಂಟಾಗಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದರು. ಆದರೂ ಸುಧಾರಿಸಿಕೊಳ್ಳದ ಕಾರಣ ಶಸ್ತ್ರ ಚಿಕಿತ್ಸೆ ಮೊರೆ ಹೋಗಲು ನಿರ್ಧರಿಸಿದ್ದಾರೆ. ಅದರಿಂದ ಸುಧಾರಿಸಿಕೊಳ್ಳುವುದಕ್ಕೆ ಅವರಿಗೆ ಮೂರು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಅವರು ಐಪಿಎಲ್ನಲ್ಲಿ ಅಡದೇ ಇರಲು ನಿರ್ಧರಿಸಿದ್ದಾರೆ. ಮೂರು ತಿಂಗಳ ಒಳಗೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ನಡೆಯಲಿರುವ ಕಾರಣ ಅದರಲ್ಲೂ ಪಾಲ್ಗೊಳ್ಳುವುದು ಸಾಧ್ಯವಿಲ್ಲ.
ಶ್ರೇಯಸ್ ಅಯ್ಯರ್ ಅವರ ಬೆನ್ನಿನ ಕೆಳಭಾಗದಲ್ಲಿ ಊತ ಕಾಣಿಸಿಕೊಂಡಿತ್ತು. ಹೀಗಾಗಿ ಪುನಶ್ಚೇತನಕ್ಕೆ ಒಳಗಾಗಿದ್ದರು. ಆದರೆ, ಐಪಿಎಲ್ ಅರಂಭವಾಗುವ ತನಕ ಸರ್ಜರಿಯ ನಿರ್ಧಾರದಿಂದ ದೂರ ಸರಿದಿದ್ದರು. ಒಂದು ವೇಳೆ ಸಮಸ್ಯೆಯಿಂದ ಮುಕ್ತಿ ಸಿಕ್ಕಿದರೆ ಐಪಿಎಲ್ ಆಡುವುದು ಅವರ ಉದ್ದೇಶವಾಗಿತ್ತು. ಆದರೆ, ಇನ್ನೂ ಊತ ಹಾಗೂ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಸರ್ಜರಿಗೆ ಒಳಗಾಗಲು ನಿರ್ಧರಿಸಿದ್ದಾರೆ ಎಂದು ಕ್ರಿಕ್ ಇನ್ಫೋ ವರದಿ ಮಾಡಿದೆ.
ಆರ್ಸಿಬಿಯಿಂದ ರಜತ್ ಪಾಟೀದಾರ್ ಔಟ್
ಇದಕ್ಕಿಂದ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶಾಕಿಂಗ್ ನ್ಯೂಸ್ ಒಂದು ಎದುರಾಗಿತ್ತು. ತಂಡದ ಪ್ರಮುಖ ಬ್ಯಾಟರ್ ಹಾಗೂ ಕಳೆದ ಆವೃತ್ತಿಯಲ್ಲಿ ಶತಕ ಬಾರಿಸಿ ಮಿಂಚಿದ್ದ ರಜತ್ ಪಾಟೀದಾರ್ ಗಾಯದ ಸಮಸ್ಯೆಯಿಂದ ಗುಣಮುಖರಾಗದ ಕಾರಣ ಐಪಿಎಲ್ ಟೂರ್ನಿಯಿಂದ (IPL 2023) ಸಂಪೂರ್ಣವಾಗಿ ಹೊರಕ್ಕೆ ನಡೆದಿದ್ದಾರೆ. ಈ ಮೂಲಕ ಆರ್ಸಿಬಿಯ ಗಾಯದ ಪಟ್ಟಿಗೆ ಇನ್ನೊಬ್ಬ ಆಟಗಾರ ಸೇರ್ಪಡೆಗೊಂಡಿದ್ದಾರೆ.
ರಜತ್ ಪಾಟೀದಾರ್ ಆರ್ಸಿಬಿಯ ಮಧ್ಯಮ ಕ್ರಮಾಂಕದ ಬ್ಯಾಟ್ ಬಲ ಎನಿಸಿಕೊಂಡಿದ್ದರು. ಆದರೆ, ಟೂರ್ನಿ ಆರಂಭಕ್ಕೆ ಮೊದಲೇ ಪಾದದ ನೋವಿಗೆ ಒಳಗಾಗಿದ್ದ ಅವರು ಆರಂಭಿಕ ಪಂದ್ಯದಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಪೂರ್ತಿ ಟೂರ್ನಿಯಿಂದ ಹೊರಕ್ಕೆ ನಡೆಯುವಂತಾಗಿದೆ. ಆರ್ಸಿಬಿ ಫ್ರಾಂಚೈಸಿ ಮಂಗಳವಾರ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಆದರೆ, ಅವರ ಜಾಗಕ್ಕೆ ಯಾವ ಆಟಗಾರ ಆಯ್ಕೆಯಾಗುತ್ತಾರೆ ಎಂಬುದನ್ನು ತಿಳಿಸಿಲ್ಲ.
ದುರದೃಷ್ಟವಶಾತ್ ರಜತ್ಪಾಟೀದಾದ್ ಐಪಿಎಲ್ 2023ನೇ ಆವೃತ್ತಿಯಿಂದ ಹೊರಕ್ಕೆ ಉಳಿದಿದ್ದಾರೆ. ಅವರಿಗೆ ಆಗಿರುವ ಪಾದದ ನೋವು ಇನ್ನೂ ಕಡಿಮೆಯಾಗಿಲ್ಲ. ಅವರು ವೇಗವಾಗಿ ಗುಣಮುಖರಾಗಲಿ ಎಂದು ನಾನು ಬಯಸುತ್ತೇವೆ ಹಾಗೂ ಈ ಪ್ರಕ್ರಿಯೆಯಲ್ಲಿ ನಮ್ಮ ಬೆಂಬಲ ಅವರಿಗೆ ಇದೆ. ಕೋಚ್ಗಳು ಹಾಗೂ ಮ್ಯಾನೇಜ್ಮೆಂಟ್ ಅವರ ಜಾಗಕ್ಕೆ ಇನ್ನೊಬ್ಬ ಆಟಗಾರನ್ನು ಹೆಸರಿಸದೇ ಇರಲು ನಿರ್ಧರಿಸಿದ್ದೇವೆ, ಎಂದು ಆರ್ಸಿಬಿ ಹೇಳಿಕೆ ಪ್ರಕಟಿಸಿದೆ.
ಈ ಹಿಂದೆ ರಜತ್ಪಾಟೀದಾರ್ ಐಪಿಎಲ್ನ ಅರ್ಧ ಪಂದ್ಯಗಳು ಮುಕ್ತಾಯಗೊಂಡ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅವರು ಸಂಪೂರ್ಣ ಟೂರ್ನಿಯಿಂದ ಹೊರಕ್ಕುಳಿದ ಸುದ್ದಿ ಬಂದಿದೆ. ರಜತ್ ಪಾಟೀದಾರ್ ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಆರ್ಸಿಬಿ ಫ್ರಾಂಚೈಸಿ ಅವರನ್ನು ಈ ಬಾರಿಯೂ ಉಳಿಸಿಕೊಂಡಿತ್ತು.
ಮಧ್ಯಪ್ರದೇಶದ 29 ವರ್ಷದ ಆಟಗಾರ 2021ರಲ್ಲಿ ಚೆನ್ನೈನಲ್ಲಿ ನಡೆದ ಮುಂಬಯಿ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು. ಒಟ್ಟು 12 ಪಂದ್ಯಗಳಲ್ಲಿ ಪಾಳ್ಗೊಂಡಿರುವ ಸರಾಸರಿ 40ರಂತೆ 404 ರನ್ ಬಾರಿಸಿದ್ದಾರೆ.