ಬೆಂಗಳೂರು: ಶ್ರೇಯಸ್ ಅಯ್ಯರ್ (Shreyas Iyer) ಭಾರತ ಕ್ರಿಕೆಟ್ ತಂಡದ ಅದ್ಭುತ ಬ್ಯಾಟರ್. ಮಧ್ಯಮ ಕ್ರಮಾಂಕದಲ್ಲಿ ನಿರಂತರವಾಗಿ ರನ್ ಕದಿಯುವ ಅವರ ಸಾಮರ್ಥ್ಯದಿಂದಾಗಿ ಅವರು ಭಾರತ ತಂಡಕ್ಕೆ ಪ್ರಥಮ ಆಯ್ಕೆಯಾಗಿರುತ್ತಾರೆ. ಶ್ರೇಯಸ್ ದೇಶಿಯ ಕ್ರಿಕೆಟ್ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಅದಾಗ್ಯೂ ಅವರು ಹೆಚ್ಚು ಜನಪ್ರಿಯತೆ ಪಡೆದಿದ್ದು ಐಪಿಎಲ್ ಮೂಲಕ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 2.6 ಕೋಟಿ ರೂಪಾಯಿಗೆ ಸೇಲ್ ಆಗಿದ್ದ ಅವರು ಬಳಿಕ ಏಕಾಏಕಿ ಜನಪ್ರಿಯತೆ ಪಡೆದುಕೊಂಡರು. ಈ ಎಲ್ಲ ವಿಚಾರದ ಬಗ್ಗೆ ಮಾತನಾಡಿದ ಅವರು ದುಡ್ಡು ಇದ್ದಾಗ ಮತ್ತು ಇಲ್ಲದಾಗ ಜನರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಐಪಿಎಲ್ ದುಡ್ಡು ಸಿಗೋ ಮೊದಲು ಹೆಣ್ಣು ಮಕ್ಕಳು ಕ್ಯಾರೇ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
2015 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಮುಂಬೈನ ಕ್ರಿಕೆಟ್ ಪ್ರತಿಭೆ ಶ್ರೇಯಸ್ ಅಯ್ಯರ್ ಖ್ಯಾತಿ ಮತ್ತು ಅದೃಷ್ಟವನ್ನು ಜತೆಗೆ ಕಂಡುಕೊಂಡಿದ್ದರು. ಡೆಲ್ಲಿ ಡೇರ್ ಡೆವಿಲ್ಸ್ 2.6 ಕೋಟಿ ರೂ.ಗೆ ಖರೀದಿಸಿದ ಯುವ ಬ್ಯಾಟರ್ ಜನಪ್ರಿಯಗೊಂಡಿದ್ದರು. ಈ ವೇಳೆ ತಮ್ಮ ಸುತ್ತಲಿನ ಜನರು ಹೇಗೆ ವರ್ತನೆ ಬದಲಿಸಿಕೊಂಡರು ಎಂಬುದನ್ನು ಶ್ರೇಯಸ್ ವಿವರಿಸಿದ್ದಾರೆ. ವಿಶೇಷವಾಗಿ ಪರಿಚಿತ ಹುಡುಗಿಯರು ಹೇಗೆ ನಡೆದುಕೊಂಡರು ಎಂಬದನ್ನು ಹೇಳಿಕೊಂಡಿದ್ದಾರೆ.
ಓಪನ್ ಹೌಸ್ ವಿತ್ ರೆನಿಲ್” ಟಾಕ್ ಶೋನ ಸೀಸನ್ 1 ಫಿನಾಲೆಯಲ್ಲಿ ಮಾತನಾಡಿದ ಅಯ್ಯರ್, ಸಂಬಂಧಗಳ ಮೇಲೆ ಹಣದ ಪ್ರಭಾವವನ್ನು ಬಹಿರಂಗಪಡಿಸಿದರು. ಐಪಿಎಲ್ ಯಶಸ್ಸಿಗೆ ಮೊದಲು ಪರಿಚಿತ ಯುವತಿಯೊಬ್ಬಳು ನನ್ನ ಜತೆ ಮಾತೇ ಆಡುತ್ತಿರಲಿಲ್ಲ. ಆದರೆ ಹರಾಜಿನ ನಂತರ ನನ್ನೊಂದಿಗೆ ಅತಿಯಾದ ಸ್ನೇಹ ಬೆಳೆಸಿಕೊಳ್ಳಲು ಯತ್ನಿಸಿದ್ದಳು ಎಂದು ಅವರು ನೆನಪಿಸಿಕೊಂಡರು. ದುಡ್ಡು ಸಿಗುವ ಮೊದಲು ಅವರು ಕ್ಯಾರೇ ಮಾಡುತ್ತಿರಲಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ. ಹೆಣ್ಣು ಮಕ್ಕಳು ತಮ್ಮ ಪರಿಚಯಕ್ಕಿಂತ ಹೆಚ್ಚಾಗಿ ನನ್ನ ಸಂಪತ್ತಿಗೆ ಆಕರ್ಷಿತಗೊಂಡರು ಎಂದೂ ನುಡಿದಿದ್ದಾರೆ.
ಐಪಿಎಲ್ಗೆ ಮುನ್ನ ನಾನು ಮೆಸೇಜ್ ಕಳುಹಿಸುತ್ತಿದ್ದ ಹುಡುಗಿಯರು ಉತ್ತರಿಸುತ್ತಲೇ ಇರಲಿಲ್ಲ. ಐಪಿಎಲ್ ನಂತರ, ಅದೇ ಹುಡುಗಿಯರು ಪ್ರತಿದಿನ ನನಗೆ ಸಂದೇಶ ಕಳುಹಿಸಲು ಪ್ರಾರಂಭಿಸಿದರು. ನಂತರ ನಾನು ಅವರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದೆ ಎಂದು ಅಯ್ಯರ್ ಹೇಳಿದ್ದಾರೆ.
ಈ ಅನುಭವವು ಕೆಲವು ಸಂಬಂಧಗಳ ಸ್ವಭಾವ ತಿಳಿಸಿತು. ಸಂಪತ್ತು ಮತ್ತು ಖ್ಯಾತಿಯು ಜನರ ವರ್ತನೆಗಳನ್ನು ಹೇಗೆ ಬದಲಿಸುತ್ತವೆ ಎಂಬುದನ್ನು ಒತ್ತಿ ಹೇಳಿದ್ದಾರೆ.
ದುಡ್ಡಿಗೆ ಆಸೆ ಪಡುವವರು ಬೇಡ
ಯಾರೆಲ್ಲ ನನ್ನ ಬಗ್ಗೆ ಯೋಚನೆ ಮಾಡದೇ ನನ್ನ ದುಡ್ಡಿನ ಬಗ್ಗೆಯೇ ಚಿಂತೆ ಮಾಡುತ್ತಾರೂ, ಅವರಿಂದ ದೂರ ಉಳಿಯಲು ನಾನು ಕೂಡ ಯೋಜನೆ ಹಾಕಿಕೊಂಡೆ. ಅವರು ಎಷ್ಟೇ ಮಾತನಾಡಲು ಯತ್ನಿಸಿದರೂ ನಾನು ಉತ್ತರ ಕೊಡುತ್ತಿರಲಿಲ್ಲ. ಸಂಬಂಧಗಳನ್ನು ದುಡ್ಡಿನಿಂದ ಅಳೆಯುವುದಾದರೆ ಅಂಥವರು ಬೇಡ ಎಂದು ಶ್ರೇಯಸ್ ಅಯ್ಯರ್ ಅವರು ಹೇಳಿಕೊಂಡಿದ್ದಾರೆ.