Site icon Vistara News

Team India : ಶ್ರೇಯಸ್​ ಅಯ್ಯರ್​ಗೆ ಯಶಸ್ವಿ ಸರ್ಜರಿ, ವಿಶ್ವ ಕಪ್​ ಟೂರ್ನಿಗೆ ಲಭ್ಯ

Shreyas Iyer undergoes successful surgery, available for World Cup tournament

#image_title

ಮುಂಬಯಿ: ಭಾರತ ತಂಡದ (Team India) ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಅವರ ಬೆನ್ನು ನೋವಿನ ಸರ್ಜರಿ ಯಶಸ್ವಿಯಾಗಿ ಮುಗಿದಿದೆ. ಲಂಡನ್​ನಲ್ಲಿ ನುರಿತ ವೈದ್ಯರು ಅವರಿಗೆ ಶಸ್ತ್ರ ಚಿಕಿತ್ಸೆಯನ್ನು ನಡೆಸಿಕೊಟ್ಟಿದ್ದಾರೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ. ಈಗಲೇ ಅವರಿಗೆ ಸರ್ಜರಿ ಮಾಡಿರುವ ಕಾರಣ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕ ದಿನ ವಿಶ್ವ ಕಪ್​ ವೇಳೆ ಸಂಪೂರ್ಣ ಫಿಟ್​ ಆಗಲಿದ್ದಾರೆ ಎಂಬುದಾಗಿಯೂ ವರದಿ ಮಾಡಿದೆ. ಸರ್ಜರಿ ಮುಗಿದ ಒಂದು ವಾರ ಕಾಲ ಅಲ್ಲಿನ ವೈದ್ಯರ ನಿಗಾದಲ್ಲಿರುತ್ತಾರೆ ಶ್ರೇಯಸ್​. ಬಳಿಕ ಅವರು ಭಾರತಕ್ಕೆ ಹಿಂದಿರುಗಿ ಎನ್​ಸಿಎನಲ್ಲಿರುವ ವೈದ್ಯಕೀಯ ಸಿಬ್ಬಂದಿ ಜತೆ ಪುನಶ್ಚೇತನಕ್ಕೆ ಒಳಗಾಗಲಿದ್ದಾರೆ.

ಶ್ರೇಯಸ್​ ಅಯ್ಯರ್​ ಬೆನ್ನು ನೋವಿನ ಸಮಸ್ಯೆ ಕಳೆದ ವರ್ಷವೇ ಕಾಣಿಸಿಕೊಂಡಿತ್ತು. ವಿಶ್ರಾಂತಿ ಮೂಲಕ ಅವರು ನೋವಿನಿಂದ ಪಾರಾಗುತ್ತಿದ್ದರು. ಹೀಗಾಗಿ ವರ್ಷಾರಂಭದಲ್ಲಿ ನಡೆದ ನ್ಯೂಜಿಲ್ಯಾಂಡ್​ ವಿರುದ್ಧದ ತವರಿನ ಸರಣಿಯಲ್ಲಿ ಅವರಿಗೆ ಆಡಲು ಸಾಧ್ಯವಾಗಿರಲಿಲ್ಲ. ಅದೇ ರೀತಿ ಬಾರ್ಡರ್​ ಗವಾಸ್ಕರ್ ಟ್ರೋಫಿಯ ಮೊದಲೆರಡು ಟೆಸ್ಟ್​ ಪಂದ್ಯಗಳಲ್ಲೂ ಪಾಲ್ಗೊಂಡಿರಲಿಲ್ಲ. ಕೊನೇ ಎರಡು ಪಂದ್ಯದಲ್ಲಿ ಅವರಿಗೆ ಅವಕಾಶ ಸಿಕ್ಕಿತ್ತು. ಆದರೆ, ಅಹಮದಾಬಾದ್​ ವಿರುದ್ಧದ ಕೊನೇ ಟೆಸ್ಟ್​ ಪಂದ್ಯದ ಮೊದಲ ಇನಿಂಗ್ಸ್​ ವೇಳೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡು ಫೀಲ್ಡ್​ ತೊರೆದಿದ್ದರು. ಬಳಿಕ ಬ್ಯಾಟಿಂಗ್​ಗೂ ಬಂದಿರಲಿಲ್ಲ. ಈ ವೇಳೆ ಸಮಸ್ಯೆ ಉಲ್ಬಣಗೊಂಡಿತ್ತು.

ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಬಳಿಕ ಶ್ರೇಯಸ್​ ಅಯ್ಯರ್​ಗೆ ಮೈದಾನಕ್ಕೆ ಇಳಿಯಲು ಸಾಧ್ಯವಾಗಿರಲಿಲ್ಲ. ಹಾಲಿ ನಡೆಯುತ್ತಿರುವ ಐಪಿಎಲ್​ನಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡದ ನಾಯಕರಾಗಿದ್ದ ಅವರಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಏತನ್ಮಧ್ಯೆ, ಬಿಸಿಸಿಐ ಅಯ್ಯರ್​ಗೆ ಬ್ರಿಟನ್​ನಲ್ಲಿ ಸರ್ಜರಿ ಮಾಡುವ ನಿರ್ಧಾರ ಕೈಗೊಂಡಿತು. ಅಂತೆಯೇ ಅವರು ಅಲ್ಲಿಗೆ ತೆರಳಿ ಸರ್ಜರಿಗೆ ಒಳಗಾಗಿದ್ದಾರೆ.

ಇದನ್ನೂ ಓದಿ : World Cup : ವಿಶ್ವ ಕಪ್​ ಹಿನ್ನೆಲೆಯಲ್ಲಿ ಐದು ಸ್ಟೇಡಿಯಮ್​ಗಳ ಉನ್ನತೀಕರಣಕ್ಕೆ ಬಿಸಿಸಿಐ ಸಿದ್ಧತೆ

ಫಲ ಕೊಡದ ಪುನಶ್ಚೇತನ

ಭಾರತ ತಂಡದಲ್ಲಿರುವ ಹಲವು ಆಟಗಾರರು ಗಾಯದ ಸಮಸ್ಯೆ ಒಳಗಾಗಿದ್ದಾರೆ. ಅವರಲ್ಲಿ ಶ್ರೇಯಸ್​ ಕೂಡ ಒಬ್ಬರು. ಆರಂಭದಲ್ಲಿ ಶ್ರೇಯಸ್​ ಅಯ್ಯರ್​​ಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಪುನಶ್ಚೇತನ ಮಾಡಲಾಗಿತ್ತು. ನಾನಾ ಮಾರ್ಗಗಳ ಮೂಲಕ ಅವರಿಗೆ ಆಗಿರುವ ನೋವಿಗೆ ಪರಿಹಾರ ಹೇಳಲು ಮುಂದಾಗಿತ್ತು. ಆದರೆ, ಅದ್ಯಾವುದೂ ಫಲ ಕೊಟ್ಟಿರಲಿಲ್ಲ.

ಜಸ್​ಪ್ರಿತ್​ ಬುಮ್ರಾಗೂ ಪುನಶ್ಚೇತನ

ಭಾರತ ತಂಡದ ವೇಗದ ಬೌಲರ್​ ಜಸ್​ಪ್ರಿತ್​ ಬುಮ್ರಾ ಅವರಿಗೂ ಕೆಲವು ದಿನಗಳ ಹಿಂದೆ ಸರ್ಜರಿ ಯಶಸ್ವಿಯಾಗಿ ನಡೆದಿತ್ತು. ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್​ಸಿಎ) ಅಭ್ಯಾಸ ಆರಂಭಿಸಿದ್ದಾರೆ ಎಂಬುದಾಗಿ ಬಿಸಿಸಿಐ ಮಾಹಿತಿ ನೀಡಿದೆ. ಇದರೊಂದಿಗೆ ಮುಂದಿನ ವಿಶ್ವ ಕಪ್​ಗೆ ಬುಮ್ರಾ ಅವರ ಲಭ್ಯತೆ ದೃಢಪಟ್ಟಿದೆ. ಬುಮ್ರಾ ಅವರು ಅಲಭ್ಯತೆಯಿಂದ ಭಾರತ ತಂಡದ ಬೌಲಿಂಗ್ ವಿಭಾಗದ ದುರ್ಬಲಗೊಂಡಿದೆ ಮಾತುಗಳ ನಡುವೆಯೇ ಅವರ ಲಭ್ಯತೆಯ ಮಾಹಿತಿ ಟೀಮ್​ ಮ್ಯಾನೇಜ್ಮೆಂಟ್​ಗೆ ವಿಶ್ವಾಸ ಮೂಡಿಸಿದೆ.

ಜಸ್​ಪ್ರಿತ್ ಬುಮ್ರಾ ಅವರಿಗೆ ನ್ಯೂಜಿಲ್ಯಾಂಡ್​ನಲ್ಲಿ ಸರ್ಜರಿ ಮಾಡಲಾಗಿತ್ತು. ಅಲ್ಲಿಂದ ಬಳಿಕ ವಾಪಸಾಗಿರುವ ಅವರು ನೋವಿನಿಂದ ಮುಕ್ತರಾಗಿದ್ದಾರೆ. ಇದೀಗ ಅವರು ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಸ್​ಪ್ರಿತ್​ ಬುಮ್ರಾಗೆ ಕಳೆದ ವಾರ ಸರ್ಜರಿ ಮಾಡಲಾಗಿದೆ. ಅವರಿಗಿದ್ದ ಕೆಳ ಬೆನ್ನಿನ ನೋವು ಸಂಪೂರ್ಣ ನಿವಾರಣೆಯಾಗಿದೆ. ಹೀಗಾಗಿ ಅವರು ಪುನಶ್ಚೇತನಕ್ಕೆ ಒಳಗಾಗಲಿದ್ದಾರೆ. ಬಳಿಕ ಅವರು ಅಭ್ಯಾಸ ಆರಂಭಿಸಲಿದ್ದಾರೆ ಎಂಬುದಾಗಿ ಬಿಸಿಸಿಐ ಮಾಹಿತಿ ನೀಡಿದೆ.

ಬುಮ್ರಾ ಅವರ ಪುನಶ್ಚೇತನ ಕಾರ್ಯ ತಜ್ಱರ ನೆರವಿನಿಂದ ನಡೆಯುತ್ತಿದೆ. ಆರು ವಾರಗಳ ಕಾಲ ಪುನಶ್ಚೇತನ ನಡೆಯಲಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನೇತೃತ್ವದಲ್ಲಿ ಪುನಶ್ಚೇತನ ಕಾರ್ಯ ನಡೆಯಲಿದೆ ಎಂಬುದಾಗಿ ಬಿಸಿಸಿಐ ಮಾಹಿತಿ ನೀಡಿದೆ.

Exit mobile version