ಮುಂಬಯಿ: ಟೀಮ್ ಇಂಡಿಯಾದ ಭರವಸೆಯ ಆಟಗಾರ ಶುಭಮನ್ ಗಿಲ್ ಅವರು ಇದೀಗ ಕ್ರಿಕೆಟ್ ಬಿಟ್ಟು ಬೇರೆ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಆ್ಯನಿಮೇಶನ್ ಸ್ಪೈಡರ್ ಮ್ಯಾನ್ ಚಿತ್ರದ ಹಿಂದಿ ಮತ್ತು ಪಂಜಾಬಿ ಆವೃತ್ತಿಗಳಿಗೆ ಗಿಲ್ ಧ್ವನಿ ನೀಡಿದ್ದಾರೆ. ಈ ಮೂಲಕ ಸಿನಿಮಾವೊಂದಕ್ಕೆ ಕಂಠದಾನ ಮಾಡಿದ ಮೊದಲ ಟೀಮ್ ಇಂಡಿಯಾ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಸ್ಪೈಡರ್ ಮ್ಯಾನ್ ಚಿತ್ರದಲ್ಲಿ ಧ್ವನಿ ನೀಡಿದ ಬಗ್ಗೆ ಅನಿಸಿಕೆ ಹಂಚಿಕೊಂಡಿರುವ ಗಿಲ್, “ನಾನು ಬಾಲ್ಯದಿಂದಲೇ ಸ್ಪೈಡರ್ ಮ್ಯಾನ್ ಕಾರ್ಟೂನ್ಗಳನ್ನು ನೋಡಿ ಬೆಳೆದವ. ಇದು ನನ್ನ ನೆಚ್ಚಿನ ಕಾರ್ಟೂನ್ ಕೂಡ ಆಗಿತ್ತು. ಅಚ್ಚರಿ ಎಂದರೆ ಭಾರತದಲ್ಲಿ ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ಮೂಡಿ ಬರಲಿರುವ ಈ ಸಿಮಾಕ್ಕೆ ನಾನು ಕಂಠದಾನ ಮಾಡಿದ್ದು ನಿಜಕ್ಕೂ ಸಂತಸ ತಂದಿದೆ. ಬಾಲ್ಯದಲ್ಲೇ ಈ ಕಾರ್ಟೂನ್ ಕಂಡ ಕಾರಣ ನನಗೆ ಧ್ವನಿ ಜೋಡಿಸಲು ಯಾವುದೇ ಕಷ್ಟ ಎದುರಾಗಲಿಲ್ಲ. ಈ ಚಲನಚಿತ್ರದ ಬಿಡುಗಡೆಯನ್ನು ನಾನು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದೇನೆ” ಎಂದು ಗಿಲ್ ಹೇಳಿದರು.
ಚಿತ್ರದ ಬಗ್ಗೆ ಮಾತನಾಡಿದ ಸೋನಿ ಪಿಕ್ಚರ್ಸ್ ರಿಲೀಸಿಂಗ್ ಇಂಟರ್‌ನ್ಯಾಶನಲ್ SPRI ಇಂಡಿಯಾದ ಜನರಲ್ ಮ್ಯಾನೇಜರ್ ಶೋನಿ ಪಂಜಿಕರನ್, ಜೂನ್ 2ರಂದು ಈ ಚಿತ್ರ ದೇಶದಾತ್ಯಂತ ತೆರೆ ಕಾಣಲಿದೆ. ಸ್ಪೈಡರ್ ಮ್ಯಾನ್ ಅಭಿಮಾನಿಗಳಿಮೆ ಮತ್ತು ಗಿಲ್ ಅವರ ಅಭಿಮಾನಿಗಳಿಗೆ ಇದು ವಿಶೇಷ ದಿನವಾಗಿರಲಿದೆ ಎಂದು ಹೇಳಿದರು.
ಇತ್ತೀಚೆಗೆ ತೆರೆ ಕಂಡ ಸ್ಪೈಡರ್ ಮ್ಯಾನ್ ನೋ ವೇ ಹೋಮ್ ರೀತಿಯಲ್ಲೇ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಶುಭಮನ್ ಗಿಲ್ ಜತೆ ಕಾರ್ಯನಿರ್ವಹಿಸಿರುವುದು ವಿಶೇಷ ಅನುಭವ ನೀಡಿದೆ. ಅವರು ಕ್ರಿಕೆಟ್ನಲ್ಲಿ ಇನ್ನೂ ಮಹತ್ತರ ಸಾಧನೆ ಮಾಡುವಂತಾಗಲಿ ಎಂದು ಪಂಜಿಕರನ್ ಗಿಲ್ಗೆ ಹಾರೈಸಿದರು. ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಇಂಡಿಯಾ ಸ್ಪೈಡರ್ ಮ್ಯಾನ್ ಅಕ್ರಾಸ್ ದಿ ಸ್ಪೈಡರ್ವರ್ಸ್ ಇಂಗ್ಲಿಷ್, ಹಿಂದಿ ತಮಿಳು, ತೆಲುಗು, ಕನ್ನಡ, ಮಲಯಾಳಂ, ಗುಜರಾತಿ, ಮರಾಠಿ, ಪಂಜಾಬಿ, ಮತ್ತು ಬೆಂಗಾಲಿ ಭಾಷೆಗಳಲ್ಲಿ ತೆರೆ ಕಾಣಲಿದೆ.
ಇದನ್ನೂ ಓದಿ IPL 2023: ಆರಂಭಿಕ ಸೋಲಿಗೆ ತವರಿನಲ್ಲಿ ಸೇಡು ತೀರಿಸೀತೇ ಮುಂಬೈ ಇಂಡಿಯನ್ಸ್?
ಟೀಮ್ ಇಂಡಿಯಾದ ಮೂರು ಮಾದರಿಯ ಕ್ರಿಕೆಟ್ನಲ್ಲಿ ಶತಕ, ದ್ವಿಶತಕ ಸಿಡಿಸಿ ಹಲವು ದಾಖಲೆಗಳನ್ನು ಬರೆಯುತ್ತಿರುವ ಗಿಲ್ ಅವರು ಭಾರತ ತಂಡದ ಭವಿಷ್ಯದ ತಾರೆ ಎಂದೇ ಬಣ್ಣಿಸಲಾಗಿದೆ. ವಿರಾಟ್ ಕೊಹ್ಲಿಯೂ ಕೂಡ ಗಿಲ್ ಪ್ರದರ್ಶನದ ಬಗ್ಗೆ ಈಗಾಗಲೇ ಭವಿಷ್ಯ ನುಡಿದಿದ್ದು. ಭಾರತದ ತಂಡಕ್ಕೆ ಸಿಕ್ಕ ಅತ್ಯಮೂಲ್ಯ ರತ್ನ ಎಂದು ಹೇಳಿದ್ದರು. ಸದ್ಯ 16ನೇ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ಪರ ಪ್ರಚಂಡ ಬ್ಯಾಟಿಂಗ್ ನಡೆಸುತ್ತಿರುವ ಗಿಲ್ ಆಡಿದ 11 ಪಂದ್ಯಗಳಲ್ಲಿ 469 ರನ್ ಗಳಿಸಿದ್ದಾರೆ. ಇದರಲ್ಲಿ 4 ಅರ್ಧಶತಕಗಳನ್ನು ಬಾರಿಸಿದ್ದಾರೆ.