Site icon Vistara News

Shubman Gill: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ​ಗಿಲ್​; ದೂರವಾದ ತಂಡದ ಆತಂಕ​

shubman gill

ಚೆನ್ನೈ: ಡೆಂಗ್ಯೂ ಚಿಕಿತ್ಸೆಗಾಗಿ ಚೆನ್ನೈ ಆಸ್ಪತ್ರೆಗೆ(hospital in Chennai) ದಾಖಲಾಗಿದ್ದ ಶುಭಮನ್​ ಗಿಲ್(Shubman Gill)​ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎಂದು ಪಿಟಿಐ(PTI) ವರದಿ ಮಾಡಿದೆ. ಗಿಲ್​ ಆರೋಗ್ಯ ವಿಚಾರದಲ್ಲಿ ಆತಂಕಕ್ಕೆ ಒಳಗಾಗಿದ್ದ ತಂಡ ಮತ್ತು ಅವರ ಅಭಿಮಾನಿಗಳಿಗೆ ಈಗ ನಿಟ್ಟುಸಿರು ಬಿಡುವಂತಾಗಿದೆ.

“ಶುಭಮನ್​ ಗಿಲ್ ಅವರ ಪ್ಲೇಟ್ಲೆಟ್ ಕುಸಿದಿದ್ದು ಮುಂಜಾಗ್ರತಾ ಕ್ರಮವಾಗಿ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸಿಸಿಐನ(BCCI) ವೈದ್ಯಕೀಯ ತಂಡವೂ ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ” ಎಂದು ಮಂಗಳವಾರ ಬೆಳಗ್ಗೆ ವರದಿಯಾಗಿತ್ತು. ಆದರೆ ಈಗ ಬಂದ ಮಾಹಿತಿ ಪ್ರಕಾರ ಗಿಲ್​ ಡಿಸ್ಚಾರ್ಜ್​ ಆಗಿದ್ದಾರೆ ಎಂದು ತಿಳಿದುಬಂದಿದೆ.

“ಚೆನ್ನೈನ ಆಸ್ಪತ್ರೆಯಿಂದ ಶುಭಮನ್ ಗಿಲ್ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಅವರು ತಂಡದ ಹೋಟೆಲ್‌ಗೆ ಮರಳಿದ್ದು, ಅಲ್ಲಿ ಅವರನ್ನು ಬಿಸಿಸಿಐ ವೈದ್ಯಕೀಯ ತಂಡವು ಮೇಲ್ವಿಚಾರಣೆ ಮಾಡುತ್ತಿದೆ” ಎಂದು ಪಿಟಿಐ ವರದಿ ಮಾಡಿದೆ. ಆಸ್ಪತ್ರೆಯಿಂದ ಹೊರಬಂದರೂ ಪಾಕ್​ ವಿರುದ್ಧದ ಪಂದ್ಯ ಆಡಲು ಅವರಿಂದ ಅಸಾಧ್ಯ ಎಂದು ತಿಳಿಸಿದೆ.

ಡೆಂಗ್ಯೂ ಜ್ವರದ ಕಾರಣ ಗಿಲ್ ಆಸ್ಟ್ರೇಲಿಯಾ(IND vs AUS) ವಿರುದ್ಧದ ಪಂದ್ಯದಿಂದ ಹೊರಗುಳಿದ್ದರು. ಅವರ ಬದಲು ಎಡಗೈ ಆಟಗಾರ ಇಶಾನ್​ ಕಿಶನ್​ಗೆ(Ishan Kishan) ಅವಕಾಶ ನೀಡಲಾಗಿತ್ತು. ಮುಂದಿನ ಪಂದ್ಯಕ್ಕೆ ಅವರು ತಂಡ ಸೇರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಸೋಮವಾರ ಬಿಸಿಸಿಐ ಅಧಿಕೃತ ಪ್ರಕಟಣೆಯಲ್ಲಿ ಗಿಲ್​ ಅಫಘಾನಿಸ್ತಾನ ವಿರುದ್ಧದ ದ್ವಿತೀಯ ಪಂದ್ಯವನ್ನೂ ಆಡುವುದಿಲ್ಲ ಎಂದು ತಿಳಿಸಿತ್ತು. ಸದ್ಯಕ್ಕೆ ನಿಶಕ್ತಿಯಿಂದ ಬಳಲುತ್ತಿರುವ ಅವರು ಪಾಕ್​ ಮಾತ್ರವಲ್ಲದೆ ಮುಂದಿನ ಲೀಗ್​ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಅಧಿಕವಾಗಿದೆ. ಏಕೆಂದರೆ ಡೆಂಗ್ಯೂ ಬಾಧಿತ ವ್ಯಕ್ತಿ ಪರಿಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ ಮೂರು ವಾರಗಳ ಸಮಯಾವಕಾಶ ಬೇಕು.

ಇದನ್ನೂ ಓದಿ Shubman Gill: ಆಸ್ಪತ್ರೆಗೆ ದಾಖಲಾದ ಶುಭಮನ್​ ಗಿಲ್​; ವಿಶ್ವಕಪ್​ನಿಂದ ಹೊರಬೀಳುವ ಸಾಧ್ಯತೆ

ಉತ್ತಮ ಫಾರ್ಮ್​ನಲ್ಲಿದ್ದ ಗಿಲ್​

ಶುಭಮನ್​ ಗಿಲ್​ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದರು. ಏಷ್ಯಾ ಕಪ್​ನಲ್ಲಿ ಶತಕ ಮತ್ತು ಅರ್ಧಶತಕ ಬಾರಿಸಿ ಒಟ್ಟು 302 ರನ್​ ಗಳಿಸಿ ಪ್ರಚಂಡ ಬ್ಯಾಟಿಂಗ್​ ನಿರ್ವಹಣೆ ತೋರಿದ್ದರು. ವಿಶ್ವಕಪ್​ನಲ್ಲಿಯೂ ಅವರ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟಿತ್ತು. ಆದರೆ ದುರಾದೃಷ್ಟಕ್ಕೆ ಅವರಿಗೆ ಡೆಂಗ್ಯೂ ಬಾಧಿಸಿ ಎಲ್ಲ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ ಲೀಗ್​ನಲ್ಲಿ 890 ರನ್​ಗಳೊಂದಿಗೆ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಕಳೆದ ಕೆಲವು ಇನಿಂಗ್ಸ್​​ಗಳಲ್ಲಿ ಅವರು 104, 74, 27, 121, 19, 58 ಮತ್ತು 67 ರನ್ ಗಳಿಸಿದ್ದಾರೆ. ಈಗಾಗಲೇ ಒಂದು ದ್ವಿಶತಕವನ್ನು ಕೂಡ ಬಾರಿಸಿದ್ದಾರೆ.

ಅಕ್ಟೋಬರ್​ 14ಕ್ಕೆ ಇಂಡೋ-ಪಾಕ್​ ಕದನ

ಅಫಘಾನಿಸ್ತಾನ ವಿರುದ್ಧ ಭಾರತ ನಾಳೆ ಡೆಲ್ಲಿಯಲ್ಲಿ ಪಂದ್ಯವನ್ನು ಆಡಲಿದೆ. ಆದರೆ ತಂಡದೊಂದಿಗೆ ಗಿಲ್​ ಪ್ರಯಾಣಿಸುವುದು ಅನುಮಾನ ಎನ್ನಲಾಗಿದೆ. ಅವರು ಚೆನ್ನೈಯಲ್ಲೇ ವಿಶ್ರಾಂತಿ ಪಡೆದು ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಅಹಮದಾಬಾದ್​ಗೆ ತೆರಳಲಿದ್ದಾರೆ ಎನ್ನಲಾಗಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಇಂಡೋ-ಪಾಕ್​ ಕದನ ಅಕ್ಟೋಬರ್​ 14ರಂದು ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ.

Exit mobile version